ಅಹಮದಾಬಾದ್: ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಸರಣಿಯಲ್ಲಿ ಸತತ ಗೆಲುವಿನೊಂದಿಗೆ ಬೀಗುತ್ತಿದ್ದ ಕರ್ನಾಟಕ ತಂಡವು ಮಂಗಳವಾರ (ಡಿ.31) ಹೈದರಾಬಾದ್ ವಿರುದ್ದದ ರೋಚಕ ಹಣಾಹಣಿಯಲ್ಲಿ ಸೋಲು ಕಂಡಿದೆ.
ಇಲ್ಲಿನ ಎಡಿಎಸ್ಎ ರೈಲ್ವೇ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು 8 ವಿಕೆಟ್ ನಷ್ಟಕ್ಕೆ 320 ರನ್ ಮಾಡಿದರೆ, ಹೈದರಾಬಾದ್ ತಂಡವು ಎರಡು ಎಸೆತ ಬಾಕಿ ಇರುವಂತೆ ಗುರಿ ಸಾಧಿಸಿದರೆ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಕರ್ನಾಟಕ ತಂಡಕ್ಕೆ ನಾಯಕ ಮಯಾಂಕ್ ಅಗರ್ವಾಲ್ ಮತ್ತೆ ಆಧಾರವಾದರು. ಸತತ ಮೂರನೇ ಶತಕ ಬಾರಿಸಿದ ಮಯಾಂಕ್ ಇಂದು 124 ರನ್ ಮಾಡಿದರು. 112 ಎಸೆತಗಳ ಈ ಇನ್ನಿಂಗ್ಸ್ ನಲ್ಲಿ ಮಯಾಂಕ್ 15 ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿದರು. ಉಳಿದಂತೆ ಸ್ಮರಣ್ ಆರ್ 83 ರನ್ ಗಳಿಸಿದರು.
ಹೈದರಾಬಾದ್ ಪರ ಮಿಲಿಂದ್ ಮೂರು ವಿಕೆಟ್ ಕಿತ್ತರೆ, ಅನಿಕೇತ್ ರೆಡ್ಡಿ ಎರಡು ವಿಕೆಟ್, ಮುದಾಸ್ಸಿರ್ ಮತ್ತು ರೋಹಿತ್ ರಾಯ್ಡು ತಲಾ ಒಂದು ವಿಕೆಟ್ ಪಡೆದರು.
ಬೃಹತ್ ಗುರಿ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ನಾಯಕ ತಿಲಕ್ ವರ್ಮಾ ಮತ್ತು ತನ್ಮಯ್ ಅಗರ್ವಾಲ್ ಅಗ್ರ ಕ್ರಮಾಂಕದಲ್ಲಿ ಆಧರಿಸಿದರು. ತನ್ಮಲ್ 35 ರನ್ ಮಾಡಿದರೆ, ತಿಲಕ್ ವರ್ಮಾ ಶತಕದಂಚಿನಲ್ಲಿ ಎಡವಿದರು. 99 ರನ್ ಮಾಡಿದ್ದ ವೇಳೆ ನಿಕಿನ್ ಜೋಸ್ ಎಸೆತದಲ್ಲಿ ಔಟಾದರು.
ತಿಲಕ್ ವರ್ಮಾ ಔಟಾದ ಬಳಿಕ ಕ್ರೀಸ್ ಕಚ್ಚಿ ನಿಂತ ವರುಣ್ ಗೌಡ್ ಅಜೇಯ ಶತಕ ಬಾರಿಸಿ ತಂಡವನ್ನು ಜಯದತ್ತ ಕೊಂಡೊಯ್ದರು. 109 ರನ್ ಮಾಡಿದ ವರುಣ್ ಸ್ಲಾಗ್ ಓವರ್ ಗಳಲ್ಲಿ ಬ್ಯಾಟ್ ಬೀಸಿದರು. ತನಯ್ ತ್ಯಾಗರಾಜನ್ ಕೊನೆಯಲ್ಲಿ 17 ಎಸೆತಗಳಲ್ಲಿ 25 ರನ್ ಮಾಡಿದರು.