ಹೈದರಾಬಾದ್: “ಎದುರಾಳಿಗೆ ಟಾರ್ಗೆಟ್ ನೀಡುವುದರಲ್ಲಿ ನಾವು ಬಹಳ ಮುಂದಿ ದ್ದೇವೆ, ಆದರೆ ನಮ್ಮ ಚೇಸಿಂಗ್ ಸಾಮರ್ಥ್ಯ ವನ್ನು ತೆರೆದಿರಿಸಬೇಕಾದ ಸಮಯ ವೀಗ ಎದುರಾಗಿದೆ’ ಎಂಬುದಾಗಿ ಸನ್‌ರೈಸರ್ ಹೈದರಾಬಾದ್ ತಂಡದ ಪ್ರಧಾನ ಕೋಚ್ ಡೇನಿಯಲ್ ವೆಟೋರಿ ಹೇಳಿದ್ದಾರೆ.
ಗುರುವಾರ ರಾತ್ರಿ ತವರಿನಲ್ಲೇ ಆಡಲಾದ ಆರ್‌ಸಿಬಿ ಎದುರಿನ ದ್ವಿತೀಯ ಸುತ್ತಿನ ಪಂದ್ಯವನ್ನು 35 ರನ್ನುಗಳಿಂದ ಸೋತ ಬಳಿಕ ವೆಟೋರಿ ಈ ಹೇಳಿಕೆ ನೀಡಿದ್ದಾರೆ.
ಈ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 7 ವಿಕೆಟಿಗೆ 206 ರನ್ ಪೇರಿಸಿದರೆ, ಹೈದರಾಬಾದ್ 8 ವಿಕೆಟಿಗೆ 171 ರನ್ ಗಳಿಸಿ ಶರಣಾಯಿತು. ಇದರೊಂದಿಗೆ ಆರ್‌ಸಿಬಿ ಮೊದಲ ಸುತ್ತಿನಲ್ಲಿ ಅನು ಭವಿ ಸಿದ 25 ರನ್ನುಗಳ ಸೋಲಿಗೆ ಸೇಡು ತೀರಿಸಿಕೊಂಡಿತು.
ಈ ಸೀಸನ್‌ನಲ್ಲಿ 3 ಸಲ 250 ಪ್ಲಸ್ ಸ್ಕೋರ್ ದಾಖಲಿಸಿ ಎದುರಾಳಿಗೆ ಭೀತಿ ಹುಟ್ಟಿಸಿದ ಹೈದರಾ ಬಾದ್ ಸುಲಭದಲ್ಲಿ 207 ರನ್ ಗಳಿಸ ಬೇಕಿತ್ತು. ಆದರೆ ಹೈದರಾಬಾದ್ ಬ್ಯಾಟರ್ ಸಿಡಿಯುವುದೇನಿದ್ದರೂ ಮೊದಲು ಬ್ಯಾಟಿಂಗ್ ನಡೆಸುವ ವೇಳೆ ಮಾತ್ರ, ಚೇಸಿಂಗ್‌ನಲ್ಲಿ ಹಿಂದೆ ಎಂಬುದು ಸಾಬೀತಾಗಿದೆ.
“ಕಳೆದ 4 ಪಂದ್ಯಗಳಲ್ಲಿ ನಮ್ಮ ಆಟ ನಿಜಕ್ಕೂ ಅತ್ಯುತ್ತಮ ಮಟ್ಟದಲ್ಲಿತ್ತು. ಇಲ್ಲಿ ಸೋತರೂ ಕೊನೆಯಲ್ಲಿ ಕೆಲವು ವಿಕೆಟ್‌ಗಳು ಕೈಲಿದ್ದವು. ಹೀಗಾಗಿ ಈ ಗುರಿಯನ್ನು ಖಂಡಿತ ಸಾಧಿಸ ಬಹುದಿತ್ತು. ಹಿಂದಿನ ಪಂದ್ಯಗಳಲ್ಲಿ ಗಳಿಸಿದ ಸ್ಫೂರ್ತಿಯೇ ಸಾಕಿತ್ತು. ಆದರೆ ನಾವು ಚೇಸಿಂಗ್‌ನಲ್ಲಿ ಇನ್ನಷ್ಟು ಸುಧಾರಣೆ ಕಾಣಬೇಕಿದೆ ಎಂಬುದನ್ನು ಈ ಪಂದ್ಯ ಸಾಬೀತುಪಡಿಸಿದೆ’ ಎಂಬುದಾಗಿ ವೆಟೋರಿ ಹೇಳಿದರು.
“ಇಷ್ಟು ಸಮಯ ಸ್ಫೋಟಕ ಆಟವಾಡುತ್ತಿದ್ದ ನಮ್ಮ ಆರಂಭಿಕರು ಇಲ್ಲಿ ಯಶಸ್ಸು ಕಾಣಲಿಲ್ಲ. ಅಗ್ರ ಕ್ರಮಾಂಕ ಕುಸಿತ ಅನುಭವಿಸಿತು. ಆದರೆ ಒಂದಂತೂ ಸಾಬೀತಾಗಿದೆ, ಐಪಿಎಲ್‌ನಲ್ಲಿ ಯಾವುದೇ ತಂಡ ಯಾರನ್ನು ಬೇಕಾದರೂ ಸೋಲಿಸಬಲ್ಲದು…’ ಎಂದರು.