Advertisement
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪ್ರಚಂಡ ಗೆಲುವಿನ ಸುನಾಮಿಗೆ ಸಿಲುಕಿ ಶೋಚನೀಯ ಸ್ಥಿತಿ ತಲುಪಿರುವ ಕಾಂಗ್ರೆಸ್‌ಗೆ ಸುಮಲತಾ ಅಂಬರೀಶ್ ಈಗ ಅನಿವಾರ್ಯ ಅಭ್ಯರ್ಥಿಯಾಗಿದ್ದಾರೆ. ಅವರ ಸ್ಪರ್ಧೆ ವಿಚಾರವನ್ನು ತೇಲಿಬಿಟ್ಟು ಅಸ್ತಿತ್ವ ಕಂಡುಕೊಳ್ಳುವ ಪ್ರಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆ.
Related Articles
Advertisement
ಬದಲಾದ ಚಿತ್ರಣ: ರಾಜಕೀಯ ಪ್ರವೇಶಿಸುವ ಹಾಗೂ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ಸುಮಲತಾ ಅವರಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಕಾಂಗ್ರೆಸ್ ಪಾಲಿಗಂತೂ ಅವರು ಮಂಡ್ಯಕ್ಕೆ ಅನಿವಾರ್ಯ ಅಭ್ಯರ್ಥಿ ಯಾಗಿದ್ದಾರೆ. ಮಂಡ್ಯ ಲೋಕಸಭಾ ಉಪ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಅಭ್ಯರ್ಥಿಯೇ ಇರಲಿಲ್ಲ. ಅಂತಿಮವಾಗಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಯತ್ನವನ್ನೇ ನಡೆಸದೆ ಮೈತ್ರಿಗೆ ಶರಣಾಗಿದ್ದರು. ಆದರೆ, ಬದಲಾದ ಸನ್ನಿವೇಶದಲ್ಲಿ ಈಗ ಕಾಂಗ್ರೆಸ್‌ಗೆ ಸುಮಲತಾ ಪ್ರಬಲ ಅಭ್ಯರ್ಥಿಯಾಗಿ ಕಂಡುಬಂದಿದ್ದಾರೆ. ಇದು ಜಿಲ್ಲೆಯ ರಾಜಕೀಯ ಚಿತ್ರಣ ಬದಲಾವಣೆಗೂ ಕಾರಣವಾಗಿದೆ.
ಕಾಂಗ್ರೆಸ್ ಲೆಕ್ಕಾಚಾರ: 2019ರ ಲೋಕಸಭಾ ಚುನಾ ವಣೆಯಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಸುಮಲತಾ ಇರುವ ಕಾರಣ ಸ್ಪರ್ಧಿಸುವ ಅವಕಾಶಕ್ಕೆ ಜೆಡಿಎಸ್ ಎದುರು ಬೇಡಿಕೆ ಇಟ್ಟಿದೆ. ಇದು ಜೆಡಿಎಸ್‌ನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಇಂದಿನ ಸನ್ನಿವೇಶದಲ್ಲಿ ಜೆಡಿಎಸ್‌ಗೆ ಪ್ರಬಲ ವಾದ ಎದುರಾಳಿಯಾಗಬಹುದಾದ ಏಕೈಕ ಅಭ್ಯರ್ಥಿ ಎಂದರೆ ಸುಮಲತಾ ಎನ್ನುವುದು ಕಾಂಗ್ರೆಸ್ಸಿಗರ ಮನಸ್ಸಿನ ಲ್ಲಿದೆ. ಏಕೆಂದರೆ, ಅಂಬರೀಶ್ ಜೆಡಿಎಸ್ ವರಿಷ್ಠರು ಹಾಗೂ ಸ್ಥಳೀಯ ನಾಯಕ ರೊಂದಿಗೆ ರಾಜಕೀಯವಾಗಿ ಕಾಂಗ್ರೆಸ್ಸಿಗಿಂತಲೂ ಹೆಚ್ಚು ವಿಶ್ವಾಸದಲ್ಲಿದ್ದರು. ಹಾಗಾಗಿ ಜೆಡಿಎಸ್ ನಾಯಕರು ಅಂಬರೀಶ್ ಕುಟುಂಬವನ್ನು ಪ್ರಬಲವಾಗಿ ಹಾಗೂ ಅಷ್ಟೇ ನಿಷ್ಠುರವಾಗಿ ಎದುರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಇದು ಪಕ್ಷಕ್ಕೆ ಲಾಭವಾಗಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.
ಅಂಬರೀಶ್ ಜತೆ ಯಾವುದೇ ಸಂದರ್ಭದಲ್ಲೂ ದ್ವೇಷವನ್ನು ಬೆಳೆಸಿಕೊಳ್ಳದ ಜೆಡಿಎಸ್ ಈಗ ಲೋಕಸಭಾ ಚುನಾವಣೆಯಲ್ಲಿ ಅಂಬರೀಶ್ ಕುಟುಂಬ ಹಾಗೂ ಬೆಂಬಲಿಗರನ್ನು ನೇರವಾಗಿ ಎದುರಿಸುವ ಶಕ್ತಿಯನ್ನು ಹೊಂದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಸುಮಲತಾ ಹೆಸರನ್ನು ಮುನ್ನೆಲೆಗೆ ತಂದು ಕಾಂಗ್ರೆಸ್ ಬ್ರಹ್ಮಾಸ್ತ್ರ ಪ್ರಯೋಗಿಸಿದೆ.
ರಕ್ಷಣಾತ್ಮಕ ಆಟ
ಮಂತ್ರಿ ಪದವಿಯಿಂದ ಪದಚ್ಯುತರಾದ ಬಳಿಕ ಅಂಬರೀಶ್ ಜೆಡಿಎಸ್ ಪರ ನಿಂತಿದ್ದರು. ಸಾವಿನ ಕೊನೆಯ ದಿನಗಳಲ್ಲೂ ಜೆಡಿಎಸ್ ಪರವಾಗಿಯೇ ಮಾತನಾಡುತ್ತಿದ್ದರಲ್ಲದೆ, ಲೋಕಸಭಾ ಉಪ ಚುನಾವಣೆಯಲ್ಲೂ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣರ ಜತೆಯಲ್ಲಿಯೇ ಆಗಮಿಸಿ ಮತ ಚಲಾಯಿಸಿದ್ದರು. ಅಂಬರೀಶ್ ಸಾವಿನ ಬಳಿಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಅಂಬರೀಶ್ ಕಾಂಗ್ರೆಸ್ಸಿಗರು ಎಂದು ಹೇಳುತ್ತಾ ರಾಜಕೀಯವಾಗಿ ರಕ್ಷಣಾತ್ಮಕ ಆಟವಾಡುತ್ತಿದ್ದಾರೆ. ಆ ಕುಟುಂಬಕ್ಕೂ ನಮಗೂ ಸಂಬಂಧವಿಲ್ಲವೆಂಬಂತೆ ಮಾತನಾಡುತ್ತಿದ್ದಾರೆ.
ಮಂಡ್ಯ ಮಂಜುನಾಥ್