Advertisement

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

11:57 AM Dec 08, 2024 | Team Udayavani |

ನಲುವತ್ತು ವರ್ಷ ವಯಸ್ಸಿನ ಸುನಿಲ್‌ ಕರ್ನಾಟಕದ ಸಣ್ಣ ಹಳ್ಳಿಯೊಂದರ ನಿವಾಸಿ. ತನ್ನ ಸಮುದಾಯದ ಇನ್ನಿತರ ಅನೇಕರಂತೆ ಯೌವ್ವನದಿಂದಲೇ ಅವರು ತಂಬಾಕು ಧೂಮಪಾನ ಮತ್ತು ಜಗಿಯುವುದನ್ನು ಆರಂಭಿಸಿದ್ದರು. ಅದು ಅವರ ಸಮಾಜದಲ್ಲಿ ಒಂದು ಸಂಪ್ರದಾಯ ಆಗಿತ್ತು. ಊಟದ ಬಳಿಕ ಪಟ್ಟಾಂಗ ಹೊಡೆಯುವ ಸಂದರ್ಭದಲ್ಲಿ ಗೆಳೆಯರು ಸುನಿಲ್‌ಗೆ ಸಿಗರೇಟು, ಬೀಡಿ ಅಥವಾ ಗುಟ್ಕಾ ಪ್ಯಾಕೆಟ್‌ ಒಡ್ಡುತ್ತಿದ್ದರು. ರೈತನಾಗಿ ಸದಾ ಕೆಲಸ ಕಾರ್ಯಗಳಲ್ಲಿ ನಿರತನಾಗಿರುವ ಸುನಿಲ್‌ಗೆ ಇದೊಂದು ಸಣ್ಣ ಸಂತೋಷದ ದಾರಿಯಾಗಿತ್ತು. ಸಿಗರೇಟು ಪ್ಯಾಕೆಟ್‌ಗಳ ಮೇಲಿದ್ದ ಎಚ್ಚರಿಕೆಯ ಬರಹ ಮತ್ತು ಬಾಯಿಯಲ್ಲಿ ಆಗೀಗೊಮ್ಮೆ ಉಂಟಾಗುತ್ತಿದ್ದ ಕಿರಿಕಿರಿಯನ್ನು ಸುನಿಲ್‌ ನಿರ್ಲಕ್ಷಿಸಿದ್ದರು. ಒಂದು ದಿನ ಕೆನ್ನೆಯಲ್ಲಿ ಸಣ್ಣ ಹುಣ್ಣೊಂದು ಮೂಡಿತು ಮತ್ತು ಸುನಿಲ್‌ನ ಹೆಂಡತಿ ವೈದ್ಯರನ್ನು ಭೇಟಿಯಾಗಲು ಹೇಳಿದರೂ ಇದೇನೂ ದೊಡ್ಡ ಸಮಸ್ಯೆ ಅಲ್ಲ ಎಂದು ಸುನಿಲ್‌ ತಳ್ಳಿಹಾಕಿದರು. ಆದರೆ ನಿಧಾನವಾಗಿ ಹುಣ್ಣು ದೊಡ್ಡದಾಯಿತು ಹಾಗೂ ಸುನಿಲ್‌ಗೆ ಆಹಾರ ಸೇವಿಸಲು, ಮಾತನಾಡಲು ಕೊನೆಗೆ ಬಾಯಿ ತೆರೆಯುವುದಕ್ಕೂ ಕಷ್ಟವಾಗತೊಡಗಿತು. ಸುನಿಲ್‌ ಊರಿನ ವೈದ್ಯರನ್ನು ಭೇಟಿಯಾದಾಗ ಅವರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ನಗರದ ದೊಡ್ಡಾಸ್ಪತ್ರೆಯಲ್ಲಿ ತೋರಿಸಿಕೊಳ್ಳಲು ಹೇಳಿದರು. ಅಲ್ಲಿಗೆ ಹೋಗಿ ವೈದ್ಯರನ್ನು ಕಂಡ ತತ್‌ಕ್ಷಣ ಬಯಾಪ್ಸಿ ಮಾಡಿಸಲಾಯಿತು ಮತ್ತು ಅದರ ಆಘಾತಕಾರಿ ಫ‌ಲಿತಾಂಶವೂ “ಬಾಯಿಯ ಕ್ಯಾನ್ಸರ್‌’ ಎಂಬುದಾಗಿ ಬಂತು. ಹತ್ತು ಹಲವು ಪರೀಕ್ಷೆ, ತಪಾಸಣೆಗಳ ಬಳಿಕ ಶಸ್ತ್ರಚಿಕಿತ್ಸೆ ನಡೆಸಿ ಅವರ ಕೆನ್ನೆ ಮತ್ತು ನಾಲಿಗೆಯ ಭಾಗವನ್ನು ತೆಗೆದುಹಾಕಲಾಯಿತು; ಬಾಯಿಯ ಗಾಯವನ್ನು ಮುಚ್ಚಲು ದೇಹದ ಬೇರೆ ಭಾಗದಿಂದ ಅಂಗಾಂಶ ತೆಗೆದು ಕಸಿ ಮಾಡಬೇಕಾಯಿತು. ಇಷ್ಟೆಲ್ಲ ಚಿಕಿತ್ಸೆಯ ಬಳಿಕವೂ ಕ್ಯಾನ್ಸರ್‌ ಶ್ವಾಸಕೋಶಗಳಿಗೆ ವ್ಯಾಪಿಸಿದ್ದರಿಂದ ಅವರ ಸ್ಥಿತಿ ದಿನೇದಿನೆ ಉಲ್ಬಣಿಸಿತು ಮತ್ತು ರೋಗಪತ್ತೆಯಾದ ಒಂದು ವರ್ಷದ ಬಳಿಕ ಸುನಿಲ್‌ ತೀರಿಕೊಂಡರು.

Advertisement

ಎಚ್ಚರಿಕೆಯ ಕರೆಘಂಟೆ: ಅಂಕಿಅಂಶಗಳು

 ಜಗತ್ತಿನಲ್ಲಿಯೇ ಬಾಯಿಯ ಕ್ಯಾನ್ಸರ್‌ ಪ್ರಕರಣಗಳು ಅತೀ ಹೆಚ್ಚು ಕಂಡುಬರುತ್ತಿರುವುದು ಭಾರತದಲ್ಲಿ. ಜಗತ್ತಿನಲ್ಲಿ ಕಂಡುಬರುತ್ತಿರುವ ಮೂರನೇ ಒಂದರಷ್ಟು ಬಾಯಿಯ ಕ್ಯಾನ್ಸರ್‌ ಪ್ರಕರಣಗಳು ಭಾರತದಲ್ಲಿಯೇ ಇವೆ.

 ಗ್ಲೊಬೊಕಾನ್‌ ಪ್ರಕಾರ, 2022ರ ಅಂಕಿಅಂಶಗಳಂತೆ ಪ್ರತೀ 1 ಲಕ್ಷ ಪುರುಷರಲ್ಲಿ 14.7 ಮಂದಿ ಮತ್ತು 5 ಮಂದಿಯಲ್ಲಿ ಬಾಯಿಯ ಕ್ಯಾನ್ಸರ್‌ ಕಂಡುಬರುತ್ತಿದೆ. ಭಾರತದ ಮಟ್ಟಿಗೆ ಹೇಳುವುದಾದರೆ, ಪುರುಷರನ್ನು ಬಾಧಿಸುವ ಕ್ಯಾನ್ಸರ್‌ಗಳ ಪೈಕಿ ಬಾಯಿಯ ಕ್ಯಾನ್ಸರ್‌ ಮುಂಚೂಣಿಯಲ್ಲಿದೆ; ಹಾಗೆಯೇ ಮಹಿಳೆಯರಲ್ಲಿ ಉಂಟಾಗುವ ಕ್ಯಾನ್ಸರ್‌ಗಳ ಪೈಕಿ ಇದು ನಾಲ್ಕನೇ ಸ್ಥಾನದಲ್ಲಿದ್ದು, ಸ್ತನ, ಗರ್ಭಕಂಠ ಮತ್ತು ಗರ್ಭಕೋಶದ ಕ್ಯಾನ್ಸರ್‌ಗಳ ಬಳಿಕದ ಸ್ಥಾನ ಪಡೆದಿದೆ.

Advertisement

 ಭಾರತದಲ್ಲಿ ಬಾಯಿಯ ಕ್ಯಾನ್ಸರ್‌ ಉಂಟಾಗಲು ಮುಖ್ಯ ಕಾರಣಗಳಲ್ಲಿ ತಂಬಾಕು ಬಳಕೆ, ಅದರಲ್ಲೂ ಹೊಗೆರಹಿತ ರೂಪಗಳಲ್ಲಿ ಬಳಕೆ ಮುಖ್ಯ ಸ್ಥಾನದಲ್ಲಿದೆ.

ತಂಬಾಕು ನಿಯಂತ್ರಣದ ಪಾತ್ರ

ಭಾರತದಲ್ಲಿ ಬಾಯಿಯ ಕ್ಯಾನ್ಸರ್‌ ತಡೆಯಲ್ಲಿ ತಂಬಾಕು ನಿಯಂತ್ರಣವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸರಕಾರ ಇದಕ್ಕಾಗಿ ಕೈಗೊಂಡಿರು ಕ್ರಮಗಳಲ್ಲಿ ಈ ಕೆಳಗಿನವು ಸೇರಿವೆ:

 ತಂಬಾಕಿನ ಬಗ್ಗೆ ಎಚ್ಚರಿಕೆಯ ಸೂಚನೆಗಳು: ತಂಬಾಕು ಬಳಕೆಯ ಅಪಾಯಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವುದಕ್ಕಾಗಿ ಸಿಗರೇಟು ಮತ್ತು ಬೀಡಿ ಪೊಟ್ಟಣಗಳಲ್ಲಿ ಚಿತ್ರ ಸಹಿತ ಎಚ್ಚರಿಕೆಯ ಸೂಚನೆಗಳನ್ನು ಮುದ್ರಿಸಲಾಗಿರುತ್ತದೆ.

 ಗುಟ್ಕಾ ಮತ್ತು ಪಾನ್‌ ಮಸಾಲಾ ನಿಷೇಧ: ಅನೇಕ ರಾಜ್ಯಗಳು ಗುಟ್ಕಾದ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಿವೆ.

ಅರಿವು ಅಭಿಯಾನಗಳು: ಜನರಲ್ಲಿ ತಂಬಾಕು ಬಳಕೆಯ ಅಪಾಯಗಳ ಬಗ್ಗೆ ತಿಳಿವಳಿಕೆ ಮೂಡಿಸಲು ಹಾಗೂ ಅದನ್ನು ಆಪ್ತ ಸಮಾಲೋಚನೆ ಮತ್ತು ನೆರವು ಸೇವೆಗಳ ಮೂಲಕ ತ್ಯಜಿಸುವುದಕ್ಕೆ ಸಹಾಯ ಮಾಡುವುದಕ್ಕಾಗಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಯೋಜನೆ (ಎನ್‌ಟಿಸಿಪಿ)ಯಂತಹ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಮುಖ್ಯ ಅಪಾಯ ಕಾರಣಗಳು

  1. ತಂಬಾಕು ಬಳಕೆ: ಸಿಗರೇಟು ಮತ್ತು ಬೀಡಿ ಈ ಎರಡರಿಂದಲೂ ಬಾಯಿಯ ಕ್ಯಾನ್ಸರ್‌ ಉಂಟಾಗಬಹುದು. ಸಿಗರೇಟು ಸೇದುವವರ ಪ್ರಮಾಣ ಶೇ. 4 ಮತ್ತು ಬೀಡಿ ಸೇದುವವರ ಪ್ರಮಾಣ ಶೇ. 7.7 ಇದೆ. ಸಿಗರೇಟು ಸೇದುವುದಕ್ಕೆ ಹೋಲಿಸಿದರೆ ಬೀಡಿ ಸೇದುವುದರಿಂದ ಬಾಯಿಯ ಕ್ಯಾನ್ಸರ್‌ ಉಂಟಾಗುವ ಅಪಾಯ ಹೆಚ್ಚು ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. ತಂಬಾಕು ಬಳಕೆದಾರರಲ್ಲಿ ಅದರ ಚಟವನ್ನು ಉಂಟುಮಾಡುವ ಅಂಶ ನಿಕೋಟಿನ್‌ ಆಗಿದ್ದು, ತಂಬಾಕಿನಲ್ಲಿ ಇರುವ ಎನ್‌-ನೈಟ್ರೊಸಮೈನ್‌ಗಳು (ಟಿಎಸ್‌ಎನ್‌ಎ) ಅತ್ಯಂತ ಪ್ರಬಲವಾದ ಕ್ಯಾನ್ಸರ್‌ ಕಾರಕಗಳಾಗಿವೆ.
  2. ಹೊಗೆರಹಿತ ತಂಬಾಕು ಬಳಕೆ (ಎಸ್‌ಎಲ್‌ಟಿ): ಭಾರತದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಶೇ. 21.4 ಮಂದಿ ಹೊಗೆರಹಿತ ರೂಪದಲ್ಲಿ ತಂಬಾಕನ್ನು ಉಪಯೋಗಿಸುತ್ತಿದ್ದಾರೆ. ಸಣ್ಣದಾಗಿ ಕತ್ತರಿಸಿದ ತಂಬಾಕಿನ ಜತೆಗೆ ಸುಣ್ಣ ಮತ್ತು ಅಡಿಕೆಯನ್ನು ಜಗಿಯುವುದು ಸಾಮಾನ್ಯವಾಗಿದೆ. ಇಂತಹ ವಸ್ತುಗಳನ್ನು ದೀರ್ಘ‌ಕಾಲ ಬಾಯಿಯ ಒಳಗೆ ಇರಿಸಿಕೊಳ್ಳುವುದರಿಂದ ಬಾಯಿಯ ಕ್ಯಾನ್ಸರ್‌ ಉಂಟಾಗುವ ಸಾಧ್ಯತೆ ಇದೆ.
  3. ಭಾರತದಲ್ಲಿ ಉಪಯೋಗಿಸಲ್ಪಡುವ ಮದ್ಯಗಳಲ್ಲಿ ಶರಾಬು (ಶೇ. 40-50 ಎಥೆನಾಲ್‌), ಶೇಂದಿ (ಶೇ. 40 ಎಥೆನಾಲ್‌), ಕಳ್ಳು (ಶೇ. 5 ಎಥೆನಾಲ್‌) ಮತ್ತು ಇಂಡಿಯಾ ಮೇಡ್‌ ಫಾರಿನ್‌ ಲಿಕ್ಕರ್‌ (ಐಎಂಎಫ್ಎಲ್‌) ಎಂದು ಕರೆಯಲ್ಪಡುವ ಭಟ್ಟಿಯಿಳಿಸಿದ ಮದ್ಯಗಳು ಸೇರಿವೆ. ವಾರದಲ್ಲಿ 4-7 ಬಾರಿಯಂತೆ ಸತತವಾಗಿ ಮದ್ಯಪಾನ ಮಾಡುವವರಲ್ಲಿ ಬಾಯಿಯ ಕ್ಯಾನ್ಸರ್‌ ಉಂಟಾಗುವ ಅಲ್ಪ ಪ್ರಮಾಣದ ಆದರೆ ಗಮನಾರ್ಹವಾದ ಅಪಾಯ ಇದೆ.
  4. ಭಾರತದ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರಲ್ಲಿ ಬಾಯಿಯ ನೈರ್ಮಲ್ಯ ಸಾಮಾನ್ಯವಾಗಿ ಕಳಪೆಯಾಗಿರುತ್ತದೆ. ದಿನಕ್ಕೆ ಒಂದು ಬಾರಿ ಮಾತ್ರ ಹಲ್ಲುಜ್ಜುವುದು, ತಂಬಾಕು ಪುಡಿಯಂತಹ ವಸ್ತುಗಳನ್ನು ಉಪಯೋಗಿಸಿ ಬೆರಳಿನಿಂದಲೇ ಹಲ್ಲುಜ್ಜುವುದು ಇತ್ಯಾದಿ ಇದಕ್ಕೆ ಕಾರಣ.
  5. ಪೌಷ್ಟಿಕಾಂಶ ಕೊರತೆ: ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳ ಬಳಕೆ ಕಡಿಮೆಯಾದರೆ ದೇಹಕ್ಕೆ ಅಗತ್ಯವಾದ ವಿಟಮಿನ್‌ಗಳು ಮತ್ತು ಖನಿಜಾಂಶಗಳು ಸಿಗುವುದಿಲ್ಲ. ನಿರ್ದಿಷ್ಟವಾಗಿ ಸಮಾಜದ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರಲ್ಲಿ ಈ ಅಪಾಯ ಹೆಚ್ಚು. ದೇಹ ರಕ್ಷಣಾತ್ಮಕ ಪೌಷ್ಟಿಕಾಂಶಗಳಲ್ಲಿ ವಿಟಮಿನ್‌ ಎ, ಬಿ12, ಸಿ, ಇ, ಫೊಲೇಟ್‌, ಬೀಟಾ ಕೆರೋಟಿನ್‌, ಲೈಸೊಪೇನ್‌ ಮತ್ತು ಝಿಂಕ್‌ ಸೇರಿವೆ.
  6. ಭಾರತದಲ್ಲಿ ಶೇ. 36ರಷ್ಟು ಬಾಯಿಯ ಕ್ಯಾನ್ಸರ್‌ ರೋಗಿಗಳು ಹ್ಯೂಮನ್‌ ಪ್ಯಾಪಿಲೋಮಾ ವೈರಾಣು (ಎಚ್‌ಪಿವಿ) ಸೋಂಕನ್ನು ಕೂಡ ಹೊಂದಿರುತ್ತಾರೆ. ಹೇಗೆ ಎಂಬುದು ಸ್ಪಷ್ಟವಾಗಿಲ್ಲದೆ ಇದ್ದರೂ ತಂಬಾಕು, ಮದ್ಯಗಳ ಜತೆಗೆ ಎಚ್‌ಪಿವಿ ಕೂಡ ಬಾಯಿಯ ಕ್ಯಾನ್ಸರ್‌ ಉಂಟಾಗುವಲ್ಲಿ ಪಾತ್ರ ವಹಿಸುತ್ತದೆ ಎಂಬುದಾಗಿ ಸಾಕ್ಷ್ಯಗಳು ಹೇಳುತ್ತವೆ. ತಂಬಾಕು ಬಳಕೆಯಿಂದ ಬಾಯಿಯ ಅಂಗಾಂಶಗಳಿಗೆ ಉಂಟಾಗುವ ಹಾನಿಯು ಎಚ್‌ಪಿವಿ ವೈರಾಣುಗಳ ಪ್ರವೇಶಕ್ಕೆ ದಾರಿ ಮಾಡಿಕೊಡಬಹುದು ಎನ್ನಲಾಗಿದೆ.

ಎಚ್ಚರಿಕೆ ವಹಿಸಬೇಕಾದ ಲಕ್ಷಣಗಳು

ಆರಂಭಿಕ ಹಂತಗಳಲ್ಲಿಯೇ ಪತ್ತೆಹಚ್ಚಿದರೆ ಬಾಯಿಯ ಕ್ಯಾನ್ಸರ್‌ ಗೆ ಚಿಕಿತ್ಸೆ ಒದಗಿಸಬಹುದಾಗಿದೆ. ಆದರೆ ಇದರ ಲಕ್ಷಣಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವುದು ಬಹಳ ಮುಖ್ಯವಾಗಿದೆ.

 ಎರಡು ವಾರಗಳ ಅವಧಿಯಲ್ಲಿಯೂ ಗುಣ ಕಾಣದೆ ಇರುವ ಬಾಯಿಯಲ್ಲಿ ಸತತ ಹುಣ್ಣುಗಳು

 ವಸಡು, ನಾಲಿಗೆ ಅಥವಾ ಕೆನ್ನೆಯ ಒಳಭಾಗದಲ್ಲಿ ಬಿಳಿ ಅಥವಾ ಕೆಂಬಣ್ಣದ ಗುರುತುಗಳು

 ಕೆನ್ನೆ ಅಥವಾ ನಾಲಿಗೆಯಲ್ಲಿ ಗಂಟಿನಂತಹ ರಚನೆ ಉಂಟಾಗಿರುವುದು ಅಥವಾ ದಪ್ಪಗಾಗಿರುವುದು

 ಜಗಿಯಲು, ನುಂಗಲು ಯಾ ದವಡೆ ಅಥವಾ ನಾಲಿಗೆಯನ್ನು ಅಲ್ಲಾಡಿಸಲು ಕಷ್ಟವಾಗುವುದು

 ಗಂಟಲು ಸತತವಾಗಿ ದೊರಗಾಗುವುದು ಅಥವಾ ಧ್ವನಿ ಕೀರಲಾಗುವುದು

-ಡಾ| ಮಾಲವಿಕಾ ಎಂ.,

ಹೆಡ್‌ ಮತ್ತು ನೆಕ್‌ ಫೆಲೋ

ಹೆಡ್‌ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸಾ ವಿಭಾಗ

ಕೆಎಂಸಿ, ಮಾಹೆ, ಮಣಿಪಾಲ

ಡಾ| ಸುರೇಶ್‌ ಪಿಳ್ಳೆ

ಪ್ರೊಫೆಸರ್‌ ಮತ್ತು ಹೆಡ್‌

ಹೆಡ್‌ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸಾ ವಿಭಾಗ

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಂಕಾಲಜಿ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next