ಬೆಂಗಳೂರು: ಕಬ್ಬಿನ ದರ ಏರಿಕೆ ಸಂಬಂಧ ಸರ್ಕಾರ ಡಿ.23ರ ಒಳಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಡಿ.26ರಂದು ಬೆಳಗಾವಿಯ ಸುವರ್ಣ ಸೌಧಕ್ಕೆ ರೈತರು ಮುತ್ತಿಗೆ ಹಾಕಲಿದ್ದಾರೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ರೈತರ ಧರಣಿ 28ನೇ ದಿನಕ್ಕೆ ಕಾಲಿರಿಸಿದ್ದು, ಭಾನುವಾರ ರೈತರನ್ನುದ್ದೇಶಿಸಿ ಮಾತನಾಡಿ, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ನಾಲ್ಕು ತಿಂಗಳಿಂದ ಕಬ್ಬು ನುರಿಸಿರುವ ಕಾರ್ಖಾನೆಗಳು. ರೈತರಿಗೆ ಕಬ್ಬಿನ ಹಣವನ್ನೇ ಪಾವತಿಸಿಲ್ಲ. ಕೆಲವು ಕಾರ್ಖಾನೆಗಳು ನೆಪ ಮಾತ್ರಕ್ಕೆ ಅಲ್ಪ ಸ್ವಲ್ಪ ಪಾವತಿಸಿದ್ದಾರೆ ಇನ್ನೂ ಕೆಲವು ಕಾರ್ಖಾನೆಗಳು ಎಫ್‌ಆರ್‌ಪಿ ನಿಯಮ ಪ್ರಕಾರ ಬಾಕಿ ಪಾವತಿ ಮಾಡದೆ ಉಲ್ಲಂಘನೆ ಮಾಡಿ, ಎರಡು ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಉಳಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಡಿ.23ರಂದು ಧಾರವಾಡದಲ್ಲಿ ನಡೆಯುವ ರಾಜ್ಯಮಟ್ಟದ ವಿಶ್ವ ರೈತ ದಿನಾಚರಣೆಯಲ್ಲಿ ಕೃಷಿ ಕ್ಷೇತ್ರದಲ್ಲಿ ದುಡಿದ ಕಾಯಕಯೋಗಿಗಳಿಗೆ ಗೌರವ ಪುರಸ್ಕಾರ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕ ಜಗಜಿತ್ ಸಿಂಗ್ ಧಲೆವಾಲ ಅವರು ಭಾಗವಹಿಸಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್ ಸೇರಿದಂತೆ ಮತ್ತತಿರರು ಉಪಸ್ಥಿತರಿದ್ದರು.