Advertisement

ಚಿಕ್ಕೋಡಿ: ಕಬ್ಬು ದರ ಹೆಚ್ಚಳ-ಹುಸಿಯಾದ ರೈತರ ನಿರೀಕ್ಷೆ

05:12 PM Nov 11, 2024 | Team Udayavani |

ಉದಯವಾಣಿ ಸಮಾಚಾರ
ಚಿಕ್ಕೋಡಿ: ಈ ಬಾರಿ ಕಬ್ಬಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ ಮೂಡಿಸಿದೆ. ಕಳೆದ ವರ್ಷ ಪ್ರತಿ ಟನ್‌ ಕಬ್ಬಿಗೆ 3 ಸಾವಿರ ರೂ ಬೆಲೆ ನೀಡಿದ್ದ ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನಲ್ಲಿಯೂ ಇದೇ ದರ ನೀಡುವ ಸಾಧ್ಯತೆ ಹೆಚ್ಚಿದೆ.

Advertisement

ಕಳೆದ ನಾಲ್ಕೈದು ದಿನಗಳಿಂದ ಗಡಿ ಭಾಗದಲ್ಲಿ ಪ್ರಸಕ್ತ ಸಾಲಿನ ಕಬ್ಬು ಕಟಾವು ಹಂಗಾಮು ಆರಂಭಗೊಂಡಿದೆ. ಶಿರಗುಪ್ಪಿ
ಶುಗರ್ ಮತ್ತು ಉಗಾರೆ ಸಕ್ಕರೆ ಕಾರ್ಖಾನೆಗಳು ದರ ಘೊಷಿಸಿದ್ದು, ಉಳಿದ ಸಕ್ಕರೆ ಕಾರ್ಖಾನೆಗಳು ಇನ್ನಷ್ಟೇ ದರ ಘೊಷಿಸಬೇಕಿದೆ.

ಎರಡು ದಿನಗಳ ಹಿಂದೆ ಕಾಗವಾಡದ ಶಿರಗುಪ್ಪಿ ಶುಗರ್ 3050 ರೂ. ದರ ಘೋಷಣೆ ಮಾಡಿದರೆ ಉಗಾರ ಸಕ್ಕರೆ ಕಾರ್ಖಾನೆ 3
ಸಾವಿರ ರೂ ದರ ಎಂದಿದೆ. ಬಹುತೇಕ ಸಕ್ಕರೆ ಕಾರ್ಖಾನೆಗಳು ಇದೇ ದರ ಕೊಡುವ ಸಾಧ್ಯತೆ ಇರುವುದರಿಂದ ಅನ್ನದಾತರಿಗೆ ನಿರಾಸೆ ಮೂಡಿದೆ.

ಕಳೆದ ಸಾಲಿನಲ್ಲಿ ಭೀಕರ ಬರ ಎದುರಾದರೆ ಈ ವರ್ಷದ ಮುಂಗಾರಿನಲ್ಲಿ ಅತಿವೃಷ್ಟಿಯಿಂದಾಗಿ ಗಡಿಭಾಗದ ಸುಮಾರು ಶೇ 45 ರಷ್ಟು ಕಬ್ಬು ಬೆಳೆ ನಾಶಗೊಂಡಿದ್ದರಿಂದ ಕಬ್ಬಿಗೆ ಹೆಚ್ಚಿನ ಬೆಲೆ ಸಿಗುತ್ತದೆಂದು ರೈತರು ಆಶಾಭಾವ ಇಟ್ಟುಕೊಂಡಿದ್ದರು. ಆದರೆ
ಕಾರ್ಖಾನೆಗಳು ದರ ಮಾತ್ರ ಏರಿಕೆ ಮಾಡದೇ ಇರುವುದು ರೈತರಲ್ಲಿ ಅಸಮಾಧಾನ ಮೂಡಿಸಿದೆ.

ಚಿಕ್ಕೋಡಿ ತಾಲೂಕಿನಲ್ಲಿ 45,700 ಹೆಕ್ಟೇರ್‌ ಕಬ್ಬು ಬೆಳೆಯಲಾಗಿತ್ತು. ಇದರಲ್ಲಿ ಕಳೆದ ಸಾಲಿನ ಬರಗಾಲದಿಂದ 9,500 ಹೆಕ್ಟೇರ್‌ ಮತ್ತು ನಂತರದ ಪ್ರವಾಹದಿಂದಾಗಿ 7,500 ಹೆಕ್ಟೇರ್‌ ಕಬ್ಬು ನಾಶವಾಗಿದೆ. ಇದು ಕಬ್ಬು ಉತ್ಪಾದಕರಿಗಲ್ಲದೇ ಸಕ್ಕರೆ ಕಾರ್ಖಾನೆಗಳಿಗೂ ತಲೆನೋವು ತಂದಿದೆ.

Advertisement

ಕಳೆದ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರತಿಟನ್‌ಗೆ 3 ಸಾವಿರ ರೂ. ದರ ನೀಡಿವೆ. ಈಗ ರಸಗೊಬ್ಬರ ಬೆಲೆ ಏರಿಕೆ, ಕೃಷಿ ಕೂಲಿಕಾರರ ಸಂಬಳ ಹೆಚ್ಚಳ ಮತ್ತು ನಿರ್ವಹಣೆ ವೆಚ್ಚ ಹೆಚ್ಚಾಗಿದೆ. ಹೀಗಾಗಿ ಈ ವರ್ಷ ಸರಾಸರಿ ಪ್ರತಿ ಟನ್‌ಗೆ 4000 ರೂ ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಚುನಾವಣೆ ಇರುವುದರಿಂದ ಸಕ್ಕರೆ ಕಾರ್ಖಾನೆಗಳು ಆರಂಭವಾಗಿಲ್ಲ, ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ನೀಡುವ ದರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ನೀಡಬೇಕು. ನೀಡದೇ ಹೋದರೆ ಹೋರಾಟ ಮಾಡಲು ರೈತರು ಮುಂದಾಗಬೇಕಾಗುತ್ತದೆ.
●ರಮೇಶ ಪಾಟೀಲ, ಶೇತಕರಿ ಸಂಘಟನೆ ಮುಖಂಡರು.

ಅತಿಯಾದ ಮಳೆ ಮತ್ತು ಭೀಕರ ಬರದಿಂದ ರೈತರ ಕಬ್ಬು ನಾಶವಾಗಿದೆ. ರೈತರು ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರ
ರೈತರಿಗೆ ಸೂಕ್ತ ಕಬ್ಬಿನ ದರ ಕೊಡಿಸಲು ಮುಂದಾಗಬೇಕು. ಸಕ್ಕರೆ ಕಾರ್ಖಾನೆಗಳು ಸಹ ಕಬ್ಬಿಗೆ ಯೋಗ್ಯ ದರ ಕೊಡಲು ಮುಂದೆ ಬರಬೇಕು. ಕಳೆದ ಸಾಲಿನಲ್ಲಿ 3 ಸಾವಿರ ದರ ಕೊಟ್ಟಿರುವ ಕಾರ್ಖಾನೆಗಳು ಈ ವರ್ಷ 4 ಸಾವಿರ ರೂ. ಪ್ರತಿ ಟನ್‌ ಕಬ್ಬಿಗೆ ಕೊಡಬೇಕು.
●ಮಂಜುನಾಥ ಪರಗೌಡ,
ರೈತ ಸಂಘದ ಮುಖಂಡರು

*ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next