Advertisement

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

01:09 AM Oct 23, 2024 | Team Udayavani |

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ಹೋರಾಟ ರೈತ ಮಕ್ಕಳಿಗೆ ಮೀಸಲು ನ್ಯಾಯ ಒದಗಿಸುವ ಹೋರಾಟವಾಗಿದೆ. ಸಾಮಾಜಿಕ ನ್ಯಾಯ, ಮೀಸಲು ಬಗ್ಗೆ ಸಕಾರಾತ್ಮಕ ಚಿಂತನೆ ಹೊಂದಿದ ಮುಖ್ಯಮಂತ್ರಿಯವರು ಮೀಸಲು ಬೇಡಿಕೆಗೆ ಕಾಲಮಿತಿ ಕ್ರಮದ ಭರವಸೆ ನೀಡದಿರುವುದು ಬೇಸರ-ನೋವು ತರಿಸಿದೆ. ಸಮಾಜದ ಕೆಲವರು ಮೀಸಲು ಹೋರಾಟವನ್ನು ಟ್ರಂಪ್‌ಕಾರ್ಡ್‌ ಆಗಿಸಿಕೊಂಡು ಅಧಿಕಾರಕ್ಕೇರಿ, ಹೋರಾಟವನ್ನೇ ಮರೆತಿದ್ದಾರೆ, ಮೌನ ತಾಳಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಸರಕಾರ 2ಡಿ ಮೀಸಲು ನೀಡಲು ಮುಂದಾದರೂ, 2ಎ ಮೀಸಲು ಹೋರಾಟ ಜೀವಂತವಾಗಿರಿಸಿ 2ಡಿ ಮೀಸಲು ಒಪ್ಪಿಕೊಳ್ಳಲು ಸಮಾಜ ಸಿದ್ಧವಿದೆ ಎನ್ನುತ್ತಾರೆ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ. ಉದಯವಾಣಿ’ಯ “ನೇರಾನೇರ’ಕ್ಕೆ ಅವರನ್ನು ಮಾತಿಗೆಳೆದಾಗ.

Advertisement

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ಬೇಡಿಕೆ ಬರೀ ಹೋರಾಟದಲ್ಲಿ ಮುಗಿಯುತ್ತಾ? ಸಕಾರಾತ್ಮಕ ಫಲಿತಾಂಶ ಸಿಗುವ ಭರವಸೆ ನಿಮಗಿದೆಯೇ?
ಪಂಚಮಸಾಲಿಗಳು ರೈತರು, ರೈತ ಮಕ್ಕಳಿಗೆ ಮೀಸಲಾತಿ ಇಲ್ಲವಾಗಿದೆ. ಅವರಿಗೆ ಮೀಸಲು ನ್ಯಾಯ ಒದಗಿಸುವುದೇ ಹೋರಾಟದ ಧ್ಯೇಯ. ನಮ್ಮ ಮತಗಳಿಂದ ಅಧಿಕಾರಕ್ಕೆ ಬಂದ ಬಿಜೆಪಿ ಹಾಗೂ ಕಾಂಗ್ರೆಸ್‌ ಸರಕಾರಗಳಿಂದ ಸಮಾಜಕ್ಕೆ ನಿರೀಕ್ಷಿತ ನ್ಯಾಯ ಸಿಕ್ಕಿಲ್ಲ. ಸಮಾಜದ ಶಾಸಕರು, ಮುಖಂಡರಿಗೆ ಸಚಿವ, ನಿಗಮ-ಮಂಡಳಿ ಸ್ಥಾನ ನೀಡಿದ್ದು ಬಿಟ್ಟರೆ ಸಮಾಜದ ಬೇಡಿಕೆಗೆ ಸ್ಪಂದನೆ ಇಲ್ಲವಾಗಿದೆ.

ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಂದಿದ್ದೀರಿ, ಅವರ ಪ್ರತಿಕ್ರಿಯೆ ಹೇಗಿದೆ?
ಸಿಎಂ ಸಿದ್ಧರಾಮಯ್ಯ ಅವರು ಸುಮಾರು ಎರಡು ತಾಸಿನವರೆಗೆ ನಮ್ಮೊಂದಿಗೆ ಚರ್ಚಿಸಿದರು. ಉಪ ಚುನಾವಣೆ ನೀತಿ ಸಂಹಿತೆ ನೆಪ ಹೇಳಿದರು, ಜಯಪ್ರಕಾಶ ಹೆಗ್ಡೆ ಆಯೋಗ ಮಧ್ಯಾಂತರ ವರದಿ ನೀಡಿದ್ದು, ಅಂತಿಮ ವರದಿ ನೀಡಲಿ ಎಂದರು, ತೀರ್ಮಾನಕ್ಕೆ ಕಾಲಮಿತಿ ನಿಗದಿಪಡಿಸಿ ಎಂದರೆ ಅದಕ್ಕೆ ಒಪ್ಪಲಿಲ್ಲ. ಹೋಗಲಿ ಲಿಂಗಾಯತ ಎಲ್ಲ ಒಳಪಂಗಡಗಳನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಿ ಎಂದರೂ ಸ್ಪಷ್ಟ ಭರವಸೆ ನೀಡಲಿಲ್ಲ. ಸಾಮಾಜಿಕ ನ್ಯಾಯದ ಕಳಕಳಿ ಇರುವ ಸಿಎಂ ಅವರಿಂದ ಈ ರೀತಿಯ ಅನಿಸಿಕೆ ನಿರೀಕ್ಷಿಸಿರಲಿಲ್ಲ. ನಿಜಕ್ಕೂ ಬೇಸರ ತರಿಸಿದೆ.

ಜಯಪ್ರಕಾಶ ಹೆಗ್ಡೆ ಬಗ್ಗೆ ರಾಜ್ಯ ಸರಕಾರ ಯಾವ ಭರವಸೆ ನೀಡಿದೆ?
ಅಂತಿಮ ವರದಿ ಬರಲಿ ಪರಿಶೀಲಿಸುತ್ತೇವೆ ಎಂದು ಸಿಎಂ ಹೇಳಿದರಾದರೂ, ವರದಿ ತರಿಸಿಕೊಳ್ಳುವುದಕ್ಕೆ ಕಾಲಮಿತಿ ವಿಧಿಸುವ ನಮ್ಮ ಮನವಿಗೆ ಸ್ಪಂದನೆ ತೋರಲಿಲ್ಲ. ಕನಿಷ್ಠ ಮಧ್ಯಾಂತರ ವರದಿಯ ಆಧಾರದಲ್ಲಿ ಕ್ರಮಕ್ಕೆ ಮುಂದಾಗುವ ಸ್ಪಷ್ಟ ಭರವಸೆಯೂ ದೊರೆಯಲಿಲ್ಲ.

ನೀತಿ ಸಂಹಿತೆ ಸಮಯದಲ್ಲಿ ಸಿಎಂ ಭೇಟಿ ಬಗ್ಗೆ ಅಪಸ್ವರ ವ್ಯಕ್ತವಾಗಿಲ್ಲವೆ? ಅಥವಾ ಸರಕಾರ ನೀತಿ ಸಂಹಿತೆ ನೆಪ ಹೇಳಿ ಜಾರಿಕೊಳ್ಳುತ್ತಿದೆಯೇ?
ಸಿಎಂ ಎರಡು ಬಾರಿ ಸಭೆ ಮಾತು ಕೊಟ್ಟಿದರೂ ಸಭೆ ನಡೆದಿರಲಿಲ್ಲ. ಅ.18ರಂದು ಸಭೆ ಕರೆದಿದ್ದರು. ನೀತಿ ಸಂಹಿತೆ ಇದ್ದರೆ ಯಾಕೆ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಕರೆಸಿ, ಎರಡು ತಾಸು ಚರ್ಚೆ ಮಾಡಿದರು. ನೀತಿ ಸಂಹಿತೆ ಮುಗಿದ ನಂತರವಾದರೂ ಘೋಷಣೆಗೆ ದಿನಾಂಕ ನಿಗದಿ ಮಾಡಿ ಎಂದರೆ ಅದಕ್ಕೂ ಒಪ್ಪಲಿಲ್ಲ. ನೀತಿ ಸಂಹಿತೆ ಸರಕಾರಕ್ಕೊಂದು ನೆಪ ಮಾತ್ರ.

Advertisement

ಪಂಚಮಸಾಲಿ ಹೆಸರಲ್ಲಿ ಮತ ಪಡೆದು ಗೆದ್ದ ಕಾಂಗ್ರೆಸ್‌ ಶಾಸಕರು, ಸಚಿವರ ಈಗಿನ ನಿಲುವಿನ ಬಗ್ಗೆ ಏನು ಹೇಳುತ್ತೀರಿ?
ಮಾಜಿಗಳಿದ್ದಾಗ ಸಮಾಜದ ಹಲವು ಕಾಂಗ್ರೆಸಿಗರು ಹೋರಾಟದಲ್ಲಿ ಸಕ್ರಿಯವಾಗಿದ್ದರು, ಅಂದಿನ ಸರಕಾರದ ನಿಲುವು ಖಂಡಿಸಿದ್ದರು. ಗೆದ್ದು ಅಧಿಕಾರಕ್ಕೇರಿದ ಮೇಲೆ ಮೌನವಾಗಿದ್ದಾರೆ. ಸಿಎಂರನ್ನು ಹೊಗಳುವ, ಜನರನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಮೀಸಲು ಹೋರಾಟ ಟ್ರಂಪ್‌ಕಾರ್ಡ್‌ ರೀತಿ ಬಳಕೆ ಮಾಡಿಕೊಂಡಿದ್ದು, ಕೆಲವರ ಸ್ವಾರ್ಥ ರಾಜಕೀಯಕ್ಕೆ ಮೀಸಲು ಹೋರಾಟ ಆಸರೆಯಾಯಿತೇ ಎಂಬ ಬೇಸರ ತರಿಸಿದೆ. ಹಲವು ಶಾಸಕರು ನಮ್ಮೊಂದಿಗೆ ಈಗಲೂ ಸಕ್ರಿಯವಾಗಿದ್ದಾರೆ.

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮೀಸಲು ನೀಡಿಕೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂಬ ಶಾಸಕ ಯತ್ನಾಳ ಆರೋಪಕ್ಕೆ ಏನು ಹೇಳುತ್ತೀರಿ?
ಬಿ.ಎಸ್‌.ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದು ಪಂಚಮಸಾಲಿ ಸಮಾಜದ ಮತಗಳಿಂದ. ಮುಖ್ಯಮಂತ್ರಿಯಾದರೆ ಮೀಸಲು ನೀಡುವ ಭರವಸೆ ನೀಡಿದ್ದರು. ಎರಡು ಬಾರಿ ಸಿಎಂ ಗದ್ದುಗೆ ಹಿಡಿದರೂ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಈ ಬಗ್ಗೆ ಯತ್ನಾಳ ಸದನದಲ್ಲಿ ಧ್ವನಿ ಎತ್ತಿದ್ದರು. ನಾನು ಪಾದಯಾತ್ರೆಗೆ ಮುಂದಾದಾಗ ಬಿಎಸ್‌ವೈ ಪಾದಯಾತ್ರೆ ಬೇಡ ಕ್ರಮ ಕೈಗೊಳ್ಳುವೆ ಎಂದಿದ್ದರು. ಆದರೆ ಬಣಜಿಗ ಸಮಾಜಕ್ಕೆ 2ಎ ಮೀಸಲು ನೀಡಿ ನಮ್ಮನ್ನು ಕೈಬಿಟ್ಟರು.

ಪಂಚಮಸಾಲಿ ಹೋರಾಟ ತಣ್ಣಗಾಗಿಸಲು ಸರಕಾರ ಕೋಟಿಗಟ್ಟಲೆ ಹಣದ ಆಫರ್‌ ಮಾಡಿದೆ ಎಂಬ ಆರೋಪ ನಿಜವೇ?
ಸಮಾಜದ ಕೆಲವು ಶಾಸಕರು ಮೌನಕ್ಕೆ ಜಾರಿದ್ದು ನೋಡಿದರೆ ಸರಕಾರ ಅವರನ್ನು ಭಯಪಡಿಸುತ್ತಿದೆಯೋ, ಆಮಿಷವೊಡ್ಡಿದೆಯೋ ಎಂಬ ಸಣ್ಣ ಶಂಕೆ ಮೂಡುತ್ತದೆ. ರಾಣಿ ಚೆನ್ನಮ್ಮನ ಕಾಲದಲ್ಲೂ ಕುತಂತ್ರವಿತ್ತು. ನಮ್ಮ ಹೋರಾಟ ಒಡೆಯಲು ಕುತಂತ್ರ ನಡೆಯುವುದಿಲ್ಲ ಎಂದಿಲ್ಲ. ಒಂದಂತೂ ಸ್ಪಷ್ಟ ಮೀಸಲು ಸಿಗುವವರೆಗೂ ಹೋರಾಟ ನಿಲ್ಲದು.
2ಎ ಮೀಸಲು, ಇನ್ನಿತರ ವಿಷಯಗಳಲ್ಲಿ ಒಂದಾಗಬೇಕಿದ್ದ ಪಂಚಮಸಾಲಿ ಸಮಾಜ ಮೂರಾಗಿದೆ, ಈ ಬಗ್ಗೆ ಏನು ಹೇಳುತ್ತೀರಿ?
ಸಮಾಜ ಇಂದಿಗೂ ಒಂದಾಗಿದೆ. ಇದರಲ್ಲಿ ಗೊಂದಲವಿಲ್ಲ. ಸಮಾಜ ಬಾಂಧವರು ಸ್ಥಾಪನೆ ಮಾಡಿದ್ದು ಎರಡು ಪಂಚಮಸಾಲಿ ಪೀಠಗಳನ್ನು ಮಾತ್ರ. ದಕ್ಷಿಣ ಹಾಗೂ ಉತ್ತರಕ್ಕೊಂದು ಪೀಠ ಇರಲಿ ಎಂದು. ಪೀಠಾಧಿಪತಿಯಾಗಿ ನಾನು ಸಮಾಜದ ಯಾರನ್ನೋ ಸಿಎಂ ಇಲ್ಲವೇ ಸಚಿವರನ್ನಾಗಿಸಲು ಹೋರಾಟದ ಬದಲು ಸಮಾಜಕ್ಕೆ ಮೀಸಲು, ಶಿಕ್ಷಣಕ್ಕಾಗಿ ಧ್ವನಿ ಎತ್ತಿದ್ದೇನೆ. ಮೀಸಲು ಪರ ಧ್ವನಿ ಎತ್ತಿದ ಗುರುಗಳು ಯಾರೆಂಬುದು ಸಮಾಜಕ್ಕೆ ಗೊತ್ತಿದೆ.

ಮೀಸಲು ಹೋರಾಟದಿಂದ ಹಲವರು ಹಿಂದೆ ಸರಿದಿದ್ದಾರೆ, ಈಗ ವಕೀಲರ ಪರಿಷತ್ತು ಅಸ್ತಿತ್ವಕ್ಕೆ ಬಂದಿದೆ. ಇದು ಹೋರಾಟಕ್ಕೆ ಫಲ ನೀಡಲಿದೆ ಎಂದೆನಿಸುತ್ತಿದೆಯೇ?
ಖಂಡಿತ ಫಲ ನೀಡುವ ವಿಶ್ವಾಸ ಇದೆ. ಸಮಾಜದ ಹಲವು ಶಾಸಕರು ಕೈ ಕಟ್ಟಿ ಕುಳಿತರು. ಕಾನೂನಾತ್ಮಕ ಹೋರಾಟಕ್ಕೆ ವಕೀಲರ ಪರಿಷತ್ತು ಅಸ್ತಿತ್ವಕ್ಕೆ ಬಂದಿದೆ. ಶಾಸಕರನ್ನು ನಂಬಿ ಕುಳಿತಿದ್ದರೆ ಸಿಎಂ ಜತೆ ಸಭೆ ಆಯೋಜನೆ ಆಗುತ್ತಲೇ ಇರಲಿಲ್ಲ. ವಕೀಲರ ಹೋರಾಟದ ಬಿಸಿಯಿಂದ ಸಿಎಂ ಸಭೆ ಕರೆದು ಚರ್ಚಿಸಿದ್ದಾರೆ.

ಬಿಜೆಪಿ ಸರಕಾರ ನೀಡಿದ್ದ 2 ಡಿ ಮೀಸಲು ಒಪ್ಪಿಕೊಳ್ಳಲು ಅಡ್ಡಿ ಏನು?
2ಡಿ ಮೀಸಲು ಸುಪ್ರೀಂ ಕೋರ್ಟ್‌ ಮುಂದಿದೆ. ಸರಕಾರ ಮುಚ್ಚಳಿಕೆ ಬರೆದುಕೊಟ್ಟಿದೆ. ಮುಚ್ಚಳಿಕೆ ಹಿಂಪಡೆದು ಅದರ ಅನುಷ್ಠಾನಕ್ಕಾದರೂ ಸರಕಾರ ಮುಂದಾಗಲಿ. ಸದ್ಯದ ಸ್ಥಿತಿಯಲ್ಲಿ 2ಎ ಮೀಸಲು ಜೀವಂತವಿರಿಸಿ 2ಡಿ ಮೀಸಲು ಒಪ್ಪಿಕೊಳ್ಳಲು ಸಮಾಜ ಸಿದ್ದವಿದೆ. ಇದು ದೊರೆತರೆ 2ಎ ಮೀಸಲು ನಿಟ್ಟಿನಲ್ಲಿ ಮತ್ತೂಂದು ಹೆಜ್ಜೆ ಮುಂದೆ ಸಾಗಿದ್ದೇವೆ ಎಂದು ಭಾವಿಸುತ್ತೇವೆ.

ಪಂಚಮಸಾಲಿ ಸಮಾಜದ ಮೀಸಲು ಹೋರಾಟ ಮುಂದಿನ ಹೆಜ್ಜೆ ಏನು?
ಮುಖ್ಯಮಂತ್ರಿ ಅವರಿಂದ ನಮ್ಮ ಬೇಡಿಕೆಗೆ ಕಾಲಮಿತಿ ನಿಗದಿಯ ಸೂಕ್ತ ಭರವಸೆ ದೊರೆಯದಿರುವುದು ನೋವು ತರಿಸಿದೆ. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ಸುಮಾರು 10 ಲಕ್ಷ ಜನರೊಂದಿಗೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ. ವಿವಿಧ ಹಂತದ ಹೋರಾಟ ಮುಂದುವರೆಸುತ್ತೇವೆ. ನ್ಯಾಯ ಸಿಗುವ ತನಕ ಯಾವ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ.

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮುಂಚೂಣಿಯಲ್ಲಿದ್ದ ನೀವು ಈಗ ಕೇವಲ ಪಂಚಮಸಾಲಿ ಸಮಾಜಕ್ಕೆ ಮೀಸಲು ಬೇಡಿಕೆ ಇರಿಸಿದ್ದು ದ್ವಂದ್ವ ಅನ್ನಿಸುತ್ತಿಲ್ಲವೆ?
ನೋಡಿ, ಲಿಂಗಾಯತ ಧರ್ಮಕ್ಕೆ ಮಾನ್ಯತೆ ಎಂಬುದು ಸ್ವಾತಂತ್ರÂ ಹೋರಾಟ ರೀತಿ ಸಮಗ್ರತೆ ಹೊಂದಿದೆ. ಪಂಚಮಸಾಲಿ ಸಮಾಜದ ಮೀಸಲು ಹೋರಾಟ ಕನ್ನಡಿಗರು ನಡೆಸಿದ ಏಕೀಕರಣ ಹಾಗೂ ಕನ್ನಡತನದ ಹೋರಾಟದಂತೆ. ಆ ಹೋರಾಟ ಬಿಟ್ಟಿದ್ದೇವೆಂದು, ಮೀಸಲು ಬೇಡಿಕೆ ದ್ವಂದ್ವತೆ ಮೂಡಿಸುತ್ತದೆ ಎಂಬುದು ಸರಿಯಲ್ಲ. ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕರೆ ಅಲ್ಪಸಂಖ್ಯಾಕ ಸ್ಥಾನದೊಂದಿಗೆ ಎಲ್ಲ ಒಳ ಪಂಗಡಗಳಿಗೆ ನ್ಯಾಯ ದೊರೆಯುತ್ತದೆ. ಸಮಾನ ಮನಸ್ಕರೊಂದಿಗೆ ಸೇರಿ ಲಿಂಗಾಯತ ಧರ್ಮ ಹೋರಾಟ ಬಗ್ಗೆ ಚರ್ಚಿಸುವೆ.

ಉದಯವಾಣಿ ಸಂದರ್ಶನ:  ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next