ಹುಬ್ಬಳ್ಳಿ : ಕೇಂದ್ರ ಸರ್ಕಾರ ದೊಡ್ಡ ಭರವಸೆಯೊಂದಿಗೆ ಜಾರಿಗೊಳಿಸಿರುವ ಎಥೆನಾಲ್ ನೀತಿ ರೈತರಿಗೆ ನಿರೀಕ್ಷಿತ ಲಾಭ-ಪ್ರಯೋಜನ ತಂದಿಲ್ಲ. ಸಕ್ಕರೆ ಕಾರ್ಖಾನೆಗಳಿಗೆ ಅಲ್ಪ ಪ್ರಮಾಣ ಅನುಕೂಲವಾಗಿರಬಹುದು. ತೈಲ ಕಂಪನಿಗಳಿಗೆ ಹೆಚ್ಚಿನ ಲಾಭವಾಗಿದೆ ಎಂದು ಸಕ್ಕರೆ ಮತ್ತು ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
Advertisement
“ಉದಯವಾಣಿ’ ಜತೆ ಮಾತನಾಡಿದ ಅವರು, ಕಬ್ಬು ಬೆಳೆಯುವ ರೈತರಿಗೆ ವರದಾನವಾಗಲಿದೆ ಎಂಬ ದೊಡ್ಡ ಪ್ರಚಾರದೊಂದಿಗೆ ಕೇಂದ್ರ ಸರ್ಕಾರ ಎಥೆನಾಲ್ ನೀತಿ ಜಾರಿಗೊಳಿಸಿತ್ತು. ಕಬ್ಬು ಬೆಳೆಯುವ ರೈತರಿಗೆ ಅದರಿಂದ ಯಾವುದೇ ಪ್ರಯೋಜನ ಆಗಿದೆ ಎಂದೆನಿಸುತ್ತಿಲ್ಲ. ಕೇಂದ್ರ ಸರ್ಕಾರ ಅನುಸರಿಸುವ ದ್ವಂದ್ವ ನೀತಿಯೂ ಇದಕ್ಕೆ ಕಾರಣವಾಗಿರಬಹುದು. ಪೆಟ್ರೋಲ್‌ಗೆ 80 ರೂ.ನಂತೆ ದರ ನೀಡುವ ಕೇಂದ್ರ ಸರ್ಕಾರ, ಎಥೆನಾಲ್‌ಗೆ 65 ರೂ. ನಿಗದಿ ಪಡಿಸಿರುವುದು ರೈತರಿಗೆ ಹೆಚ್ಚಿನ ಲಾಭವಾಗುತ್ತಿಲ್ಲ ಎಂದರು.
ಕೆಲವೊಂದು ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ಮೋಸ ಆಗುತ್ತಿದೆ ಎಂಬ ಆರೋಪ ಬಂದಿದೆ. ಇಂತಹ ಆರೋಪ ಬಂದಿರುವ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರದಿಂದಲೇ ಎನ್‌ಲಾಕ್ ತೂಕದ ವೇಬ್ರಿಜ್ ವ್ಯವಸ್ಥೆ ಮಾಡಲಾಗುವುದು. 10 ಕೋಟಿ ರೂ. ಗಳಿಗೂ ಹೆಚ್ಚಿನ ಹಣದ ವೆಚ್ಚ ತಗುಲುತ್ತಿರುವುದರಿಂದ ಸಚಿವ ಸಂಪುಟದ ಒಪ್ಪಿಗೆ ಪಡೆಯಬೇಕಾಗಿದೆ ಎಂದರು. ರಾಜ್ಯದಲ್ಲಿ ಕಬ್ಬು ಬೆಳೆ ಇಳುವರಿ ಒಂದೇ ಮಾದರಿಯಲ್ಲಿ ಇಲ್ಲವಾಗಿದೆ. ಬೆಳಗಾವಿ, ಬಾಗಲಕೋಟೆ ಇನ್ನಿತರ ಕೆಲ ಜಿಲ್ಲೆಗಳಲ್ಲಿ ಕಬ್ಬು ಪ್ರತಿ ಎಕರೆಗೆ 60-80 ಟನ್ ಬಂದರೆ, ವಿಜಯಪುರ, ಕಲಬುರಗಿ, ಬೀದರ, ರಾಯಚೂರು ಜಿಲ್ಲೆಗಳಲ್ಲಿ ಎಕರೆಗೆ 30-40 ಟನ್ ಮಾತ್ರ ಬರುತ್ತಿದೆ. ಸರಾಸರಿಯಲ್ಲಿ ಏಕಪ್ರಮಾಣದ ಇಳುವರಿಗೆ ವೈಜ್ಞಾನಿಕ ಬೆಳೆ ಪದ್ಧತಿಗೆ ಮುಂದಾಗುವಂತೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
Related Articles
Advertisement
ಸಕ್ಕರೆ ಕಾರ್ಖಾನೆಗಳು ಸರ್ಕಾರದಿಂದ ವಿವಿಧ ಸೌಲಭ್ಯ, ರಿಯಾಯಿತಿ ಪಡೆದುಕೊಂಡು ಕೇವಲ ರೈತರ ಬೆಳೆಯುವಷ್ಟೇ ಕಬ್ಬನ್ನು ಪಡೆದುಕೊಂಡು ನುರಿಸುವ ಬದಲು, ತಮ್ಮ ಸುತ್ತಮುತ್ತಲು ಪ್ರದೇಶದಲ್ಲಿ ಕಬ್ಬು ಬೆಳೆ ಹೆಚ್ಚಳಕ್ಕೆ ಜಾಗೃತಿ ಮೂಡಿಸುವ, ಶ್ರಮವಹಿಸುವ ಜವಾಬ್ದಾರಿ ತೋರಬೇಕಾಗಿದೆ. ವಿಶ್ವದಲ್ಲಿಯೇ ಕಬ್ಬು ಬೆಳೆಗೆ ಅತಿ ಹೆಚ್ಚಿನ ದರ ನೀಡುವ ದೇಶ ಭಾರತವಾಗಿದೆ. ಎಫ್‌ಆರ್‌ಪಿ ಅಡಿಯಲ್ಲಿ ರೈತರಿಗೆ ದರ ನೀಡುತ್ತಿದ್ದು, ದರದ ವಿಚಾರದಲ್ಲಿ ತೊಂದರೆ ಇಲ್ಲ. ರೈತರಿಗೂ ಒಳ್ಳೆಯದಾಗಬೇಕು, ಕಾರ್ಖಾನೆಗಳು ಉಳಿಯಬೇಕಾಗಿದೆ ಎಂದರು. ಸಂಕಷ್ಟಕ್ಕೆ ಸಿಲುಕಿದ್ದ ಬಾಗಲಕೋಟೆ ಜಿಲ್ಲೆ ಮುಧೋಳದ ರನ್ನ ಸಕ್ಕರೆ ಕಾರ್ಖಾನೆ, ಮಂಡ್ಯದ ಮೈಶುಗರ್ ಕಾರ್ಖಾನೆ ಆರಂಭಿಸಲಾಗಿದೆ. ಜೀವ ಕಳೆದುಕೊಂಡಂತಿದ್ದ ನಂದಿ ಸಕ್ಕರೆ ಕಾರ್ಖಾನೆಗೆ ಬಲ ತುಂಬಲಾಗಿದ್ದು, ಅಲ್ಲಿನ ಅಂದಾಜು 400 ಕೋಟಿ ರೂ. ಗಳ ನಷ್ಟ ಹಾಗೂ ಅವ್ಯವಹಾರ ಬಗ್ಗೆ ಕ್ರಮಕ್ಕೆ ಸೂಚಿಸಲಾಗಿದೆ ಎಂದರು. ಉತ್ತರ ಪ್ರದೇಶದಲ್ಲಿ ಕಬ್ಬು ಬೆಳೆಯುವ ರೈತರಿಗೆ ಅನುಕೂಲವಾಗುವ, ಕಾರ್ಖಾನೆಗೆ ಕಬ್ಬು ಕಳಿಸಿದ್ದರ ಸಂಪೂರ್ಣ ಮಾಹಿತಿ, ಕಾಲಮಿತಿಯಲ್ಲಿ ಹಣ ಪಾವತಿಯನ್ನು ಡಿಜಿಟಲೀಕರಣಗೊಳಿಸಿರುವ “ಇ-ಗನ್ನಾ’ ಆ್ಯಪ್ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ಮಾಹಿತಿ ಪಡೆದುಕೊಂಡು ಅದರ ಸಾಧಕ-ಬಾಧಕ ಅವಲೋಕನ ಮಾಡಲಾಗುವುದು. ಬಿಜೆಪಿ ಸರ್ಕಾರವಿದ್ದಾಗ ರಾಜ್ಯದ ಅಧಿಕಾರಿಗಳ ತಂಡ ಉತ್ತರ ಪ್ರದೇಶಕ್ಕೆ ತೆರಳಿ ಆ್ಯಪ್ ಬಗ್ಗೆ ಅಧ್ಯಯನ ಮಾಡಿ ನೀಡಿರುವ ವರದಿಯನ್ನು ಪರಿಶೀಲಿಸುವುದಾಗಿ ಹೇಳಿದರು. 2 ಹೊಸ ಕೋರ್ಸ್ ಆರಂಭ
ಬೆಳಗಾವಿಯಲ್ಲಿ ಆರಂಭವಾಗಿರುವ ಎಸ್ .ನಿಜಲಿಂಗಪ್ಪ ಸಕ್ಕರೆ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಬಲಹೀನ ಸ್ಥಿತಿಗೆ ತಲುಪಿತ್ತು. ಅದನ್ನು ಬಲವರ್ಧನೆಗೊಳಿಸಲಾಗಿದ್ದು, ಕಬ್ಬು ಬೆಳೆಗಾರರಿಗೆ ಪೂರಕ ಹಲವು ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಸಂಸ್ಥೆಯಲ್ಲಿ ಅಲ್ಕೋಹಾಲ್ ಮತ್ತು ಎಥೆನಾಲ್ ವಿಷಯಗಳ ಎರಡು ಹೊಸ ಕೋರ್ಸ್ ಆರಂಭಿಸಲಾಗುತ್ತಿದೆ. ಸಂಸ್ಥೆ ಕಬ್ಬು ಬೆಳೆಯುವ ಪ್ರದೇಶದಲ್ಲಿ ಆಯಾ ಪ್ರದೇಶ, ನದಿ ಪಾತ್ರದಲ್ಲಿನ ಕಬ್ಬಿನ ಇಳುವರಿ, ರಿಕವರಿ ಪ್ರಮಾಣ, ನೀರು ಮತ್ತು ಮಣ್ಣು ಪರೀಕ್ಷೆ, ರೈತರಿಗೆ ವೈಜ್ಞಾನಿಕ ಕಬ್ಬು ಬೆಳೆ ಕೃಷಿ ಮನವರಿಕೆ ಕಾರ್ಯ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಚಿವ ಪಾಟೀಲ ತಿಳಿಸಿದರು. *ಅಮರೇಗೌಡ ಗೋನವಾರ