Advertisement
ಡಿ.ಪಾಳ್ಯ ಹೋಬಳಿಯ ವೆಂಕಟಾಪುರ ಗ್ರಾಮದ ಮಾದರಿ ರೈತ ನರಸಿಂಹರೆಡ್ಡಿ ತನ್ನ 2 ಎಕರೆ ಜಮೀನಿನಲ್ಲಿ ಬೆಳದ ಕಬ್ಬಿನ ಬೆಳೆಗೆ ಹನಿ ನೀರಾವರಿ ಬಳಸಿ ಹೆಚ್ಚು ಇಳುವರಿ ಪಡೆದು ಬೆಲ್ಲ ಉತ್ಪಾದನೆ ಮಾಡುತ್ತಿದ್ದಾರೆ.
Related Articles
Advertisement
ರೈತ ನರಸಿಂಹರೆಡ್ಡಿ ತನ್ನ 2 ಎಕರೆಯಲ್ಲಿ ಬೆಳೆದಿರುವ ಕಬ್ಬನ್ನು ಬೆಲ್ಲವನ್ನಾಗಿ ಮಾಡಲು ಸುಮಾರು 20 ದಿನ ಬೇಕು. ಒಂದು ಕೊಪ್ಪರಿಗೆೆ 12 ಬಿಂದಿಗೆ(ಕೊಡ)ಕಬ್ಬಿನ ರಸ ಹಾಕಲಾಗುತ್ತದೆ. ಒಂದು ಅಡಿಗೆಗೆ ಅಥವಾ ಒಂದು ಕೊಪ್ಪರಿಗೆ ಕಬ್ಬಿನ ರಸಕ್ಕೆ ಸುಮಾರು 36 ಕೆ.ಜಿ.ಬೆಲ್ಲ ಉತ್ಪಾದನೆ ಮಾಡಬಹುದು. ಪಾಳಿಗೆ ನಾಲ್ವರು ಕೆಲಸ ನಿರ್ವಹಿಸಲಿದ್ದಾರೆ.
ಇದರಲ್ಲಿ ಒಬ್ಬರು ಬೆಲ್ಲದ ಪಾಕ ತೆಗೆಯುವಲ್ಲಿ ನಿಪುಣತೆ ಹೊಂದಿರುತ್ತಾರೆ. ಬೆಲ್ಲ ಗಟ್ಟಿಯಾಗುವಿಕೆಗಾಗಿ, ಬಣ್ಣಕ್ಕಾಗಿ, ಹೈಡ್ರೋಸು, ಸುಣ್ಣ, ಅಡುಗೆ ಸೋಡಾ ಬಳಸಲಾಗುತ್ತದೆ. ಇವುಗಳನ್ನು ಬಳಿಸಿ ಉತ್ಪಾದಿಸುವ ಬೆಲ್ಲಕ್ಕೆ ಉತ್ತಮ ಬೆಲೆ ಸಿಗುತ್ತಿದೆ. ಕೆ.ಜಿ.ಬೆಲ್ಲ 60 ರೂ., ಚೀಲಕ್ಕೆ 3200 ರೂ.ಗಳು ಸಿಗುತ್ತೆ. ವ್ಯಾಪಾರಸ್ಥರು ಸ್ಥಳಕ್ಕೇ ಆಗಮಿಸಿ ಖರೀದಿ ಮಾಡುತ್ತಾರೆ.
ಕಬ್ಬಿನ ರಸ ಕುದಿಯುವಾಗ ಬರುವ ಮಡ್ಡಿಯನ್ನು ಹಂದಿ ಸಾಕಣೆದಾರರು ಖರೀದಿ ಮಾಡುತ್ತಾರೆ. ಬೆಲ್ಲದಲ್ಲಿ ಶ್ರೀಮಾರ್ಕ್, ಡಬ್ಬಲ್ ಶ್ರೀ ಮಾರ್ಕ್ ಮುಂತಾದ ಹೆಸರುಗಳಿಂದ ಬೆಲ್ಲದ ಬಣ್ಣವನ್ನು, ಗಟ್ಟಿಯನ್ನು ರೈತರು ಮತ್ತು ವ್ಯಾಪಾರಿಗಳಿಂದ ಗುರುತು ಮಾಡಲಾಗುತ್ತದೆ. ಎಲ್ಲಾ ಖರ್ಚುಗಳು ಕಳೆದು 60 ಕೆ.ಜಿ. ಚೀಲಕ್ಕೆ ಸುಮಾರು 1500 ರೂ. ಉಳಿಸಬಹುದಾಗಿದೆ ಎಂದು ನರಸಿಂಹರೆಡ್ಡಿ ತಿಳಿಸಿದ್ದಾರೆ.
ಶಾಶ್ವತ ನೀರು ಬೇಕು: 2.5ಲಕ್ಷ ರೂ., ವಹಿವಾಟಿನಲ್ಲಿ ಖರ್ಚೆಲ್ಲವೂ ಕಳೆದರೂ 1.5 ಲಕ್ಷ ರೂ,ಲಾಭ ಸಿಗುತ್ತದೆ. ಆದರೆ, ಕಾರ್ಮಿಕರ ನಿರ್ವಹಣೆ ಮತ್ತು ನೀರಿನ ಸಮಸ್ಯೆ ನಿಭಾಯಿಸುವುದೇ ಕಷ್ಟಕರವಾಗುತ್ತಿದೆ ಎನ್ನುವ ಅವರು, ಶಾಶ್ವತ ನೀರಾವರಿ ವ್ಯವಸ್ಥೆಯೊಂದೇ ಕೃಷಿ ಕಸಬು ಉಳಿಸಲು ಶಾಶ್ವತ ಪರಿಹಾರ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕಬ್ಬಿನ ಬೆಳೆಗೆ ಹನಿ ನೀರಾವರಿ ಅಳವಡಿಸುವ ಮೂಲಕ ಕಡಿಮೆ ನೀರು ಬಳಕೆ ಮಾಡಿ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯುತ್ತಿದ್ದೇನೆ. ಸಾಂಪ್ರದಾಯಿಕ ಆಲೇಮನೆ ಪ್ರಾರಂಭಿಸಿ ಬೆಲ್ಲ ಉತ್ಪಾದನೆ ಮಾಡಿ ಸಬಲನಾಗಿದ್ದೇನೆ.-ನರಸಿಂಹರೆಡ್ಡಿ, ಡಿ.ಪಾಳ್ಯ ಹೋಬಳಿ ವೆಂಕಟಾಪುರ ಮಾದರಿ ರೈತ * ವಿ.ಡಿ.ಗಣೇಶ್