Advertisement

Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!

02:27 PM Jan 05, 2025 | Team Udayavani |

ಲಾಲ್‌ಬಾಗ್‌: ಮಂಗಳೂರಿನ ಪಚ್ಚನಾಡಿ ಸಹಿತ ಕೆಲವು ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ಗಳಿಂದ ಸಂಸ್ಕರಣೆ ಮಾಡದ ತ್ಯಾಜ್ಯ ನೀರು ನದಿ ಹಾಗೂ ಕೆರೆಗಳಿಗೆ ಸೇರುತ್ತಿದ್ದು, ಸ್ಥಳೀಯರ ಆರೋಗ್ಯದ ವಿಚಾರವನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಬೇಕು ಎಂದು ಶನಿವಾರ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಒತ್ತಾಯಿಸಿದರು.

Advertisement

ಈ ಕುರಿತು ಪ್ರತಿಕ್ರಿಯಿಸಿದ ಮೇಯರ್‌ ಮನೋಜ್‌ ಕುಮಾರ್‌, ಆಡಳಿತ ಹಾಗೂ ವಿಪಕ್ಷ ಸದಸ್ಯರ ತಂಡ ಶೀಘ್ರ ಎಸ್‌ಟಿಪಿಗಳ ಪರಿಶೀಲನೆ ನಡೆಸಿ ಕೊಳಚೆ ನೀರು ನದಿ ಸೇರುತ್ತಿರುವುದು ಕಂಡು ಬಂದರೆ ಸಂಪೂರ್ಣ ತನಿಖೆಗೆ ಆದೇಶ ನೀಡಲಾಗುವುದು ಎಂದರು.

ಆರಂಭದಲ್ಲಿ ಪಾಲಿಕೆ ವಿಪಕ್ಷ ನಾಯಕ ಅನಿಲ್‌ ಕುಮಾರ್‌ ಮಾತನಾಡಿ, ಪಚ್ಚನಾಡಿ, ಕಾವೂರು, ಬಜಾಲ್‌ ಹಾಗೂ ಸುರತ್ಕಲ್‌ ಎಸ್‌ಟಿಪಿಗಳ ನಿರ್ವಹಣೆಗಾಗಿ 1.50 ಕೋ.ರೂ.ಗಳನ್ನು ಒದಗಿಸ ಲಾಗುತ್ತಿದೆ. ಆದರೆ ಪಚ್ಚನಾಡಿಯ ಕೊಳಚೆ ನೀರು ಮಂಜಲ್‌ಪಾದೆ ಮೂಲಕ ಮರವೂರು ಅಣೆಕ ಟ್ಟಿಗೆ ಸೇರುತ್ತಿದೆ. ಸುರತ್ಕಲ್‌ನಲ್ಲಿ ಖಂಡಿಗೆ ನದಿ ಸೇರು ತ್ತಿದೆ. ಅಭಿವೃದ್ಧಿಗೊಂಡ ಕಾವೂರು ಕೆರೆ, ಗುಜ್ಜರ ಕೆರೆಗಳೂ ಕೊಳಚೆ ನೀರು ಮುಕ್ತವಾಗಿಲ್ಲ ಎಂದರು.

ಬಿಜೆಪಿ ಸದಸ್ಯೆ ಸಂಗೀತಾ ಆರ್‌. ನಾಯಕ್‌ ಮಾತನಾಡಿ, 4 ವರ್ಷಗಳ ಹಿಂದೆ ಪಚ್ಚನಾಡಿ ಎಸ್‌ಟಿಪಿಯನ್ನು 3.5 ಕೋ.ರೂ. ಅನುದಾನದಲ್ಲಿ ದುರಸ್ತಿ ಮಾಡಲಾಗಿದೆ. ಆದರೂ ಸಮಸ್ಯೆ ಹಾಗೆಯೇ ಇದೆ. ಸರಿಯಾಗಿ ಕೆಲಸ ಮಾಡದ ಗುತ್ತಿಗೆದಾರರ ಬಗ್ಗೆ ಆಯುಕ್ತರಿಗೆ ದೂರು ನೀಡಿದ್ದರೂ ಮತ್ತೆ ಅದೇ ಗುತ್ತಿಗೆದಾರರಿಗೆ ಟೆಂಡರ್‌ ವಹಿಸಲಾಗಿದೆ ಎಂದರು.

ಶ್ವೇತಾ ಪೂಜಾರಿ ಮಾತನಾಡಿ, ಸುರತ್ಕಲ್‌ನಲ್ಲಿ ನಾಲ್ಕು ವೆಟ್‌ವೆಲ್‌ ಇದ್ದರೂ ಅದಕ್ಕೆ ಸಂಪರ್ಕ ನೀಡಲಾಗಿಲ್ಲ. ಕೊಳಚೆ ನೇರವಾಗಿ ಖಂಡಿಗೆ ನದಿಗೆ ಹರಿಯುತ್ತಿದೆ ಎಂದರು. ಉಪ ಮೇಯರ್‌ ಭಾನುಮತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀಣಾ ಮಂಗಳ, ಕದ್ರಿ ಮನೋಹರ ಶೆಟ್ಟಿ, ಸುಮಿತ್ರಾ, ಸರಿತಾ ಶ್ರೀಧರ್‌, ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ಉಪಸ್ಥಿತರಿದ್ದರು.

Advertisement

ಶೇ.50 ಮಂದಿಗೆ ಸಂಸ್ಕರಣೆಗೊಳ್ಳದ ನೀರು!
ಪ್ರವೀಣ್‌ಚಂದ್ರ ಆಳ್ವ ಮಾತನಾಡಿ, ಕಲುಷಿತವಾಗಿರುವ ರಾಜ್ಯದ 13 ನದಿಗಳಲ್ಲಿ ನೇತ್ರಾವತಿಯೂ ಇದೆ. ನಗರದಲ್ಲಿ ಶೇ 40ರಿಂದ ಶೇ. 50ರಷ್ಟು ಜನರಿಗೆ ಸಂಸ್ಕರಣೆಗೊಳ್ಳದ ನೀರು ಪೂರೈಕೆಯಾಗುತ್ತಿದೆ. ಎಸ್‌ಟಿಪಿಗಳ ನಿರ್ವಹಣೆಯಾಗುತ್ತಿಲ್ಲ ಎಂದರು. ಮೇಯರ್‌ ಉತ್ತರಿಸಿ ‘1971ರಿಂದ ಇದೇ ವ್ಯವಸ್ಥೆಯಲ್ಲಿ ನೀರು ಪೂರೈಕೆ ಆಗುತ್ತಿದೆ. ಸಂಸ್ಕರಿಸದ ನೀರು ಪೂರೈಕೆ ಎಂಬುದು ಸುಳ್ಳು’ ಎಂದರು.

ಸುಧೀರ್‌ ಶೆಟ್ಟಿ ಕಣ್ಣೂರು ಪ್ರತಿಕ್ರಿಯಿಸಿ, ತುಂಬೆಯ ನೀರು ಸಂಸ್ಕರಣೆ ಆಗಿಯೇ ಪೂರೈಕೆಯಾಗುತ್ತಿದೆ’ ಎಂದರು. ಹಿರಿಯ ಸದಸ್ಯ ಲ್ಯಾನ್ಸ್‌ಲಾಟ್‌ ಪಿಂಟೋ ಮಾತನಾಡಿ, ‘ಬೆಂದೂರ್‌ವೆಲ್‌ನಿಂದ ಒಂದು ಲೈನ್‌ ಸಂಸ್ಕರಣೆ ಆಗದೆಯೇ ಎಂಸಿಎಫ್ಗೆ ಹೋಗುತ್ತದೆ’ ಎಂದರು. ಸುಧೀರ್‌ ಶೆಟ್ಟಿ ಮಾತನಾಡಿ ‘ಅದು ನಿಮ್ಮ ಅವಧಿಯಲ್ಲೂ ಆಗುತ್ತಿತ್ತು’ ಎಂದರು.

ಸಂಗೀತ ಆರ್‌. ನಾಯಕ್‌ ಹಾಗೂ ಶ್ವೇತಾ ಅವರು ಮಾತನಾಡಿ, ಸದಸ್ಯರು ಮಾತನಾಡುತ್ತಿದ್ದರೆ ಅಧಿಕಾರಿಗಳು ಮೌನವಾಗಿ ಈ ಗಂಭೀರ ವಿಚಾರದಿಂದ ಜಾರಿಕೊಳ್ಳುತ್ತಾರೆ ಎಂದರು. ಎ.ಸಿ.ವಿನಯ್‌ರಾಜ್‌, ‘5 ವರ್ಷದಿಂದ ತ್ಯಾಜ್ಯ ನೀರು ಸಮಸ್ಯೆ ಪರಿಹಾರವನ್ನೇ ಕಂಡಿಲ್ಲ. ಆಡಳಿತ ವ್ಯವಸ್ಥೆ ಇಲ್ಲಿಯವರೆಗೆ ಮಾಡಿದ್ದೇನು?’ ಎಂದರು. ಈ ವಿಚಾರದಲ್ಲಿ ಮತ್ತೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ ವಿಪಕ್ಷ ಸದಸ್ಯರು ಮೇಯರ್‌ ಪೀಠದೆದುರು ತೆರಳಿ ಕಲುಷಿತ ನೀರು ಪೂರೈಕೆ ನಿಲ್ಲಿಸಿ ಎಂದು ಆಗ್ರಹಿಸಿದರು.

ಸತ್ಯಶೋಧನ ಸಮಿತಿ ಬೇಕು-ಬೇಡ!
ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಮಾತನಾಡಿ, ‘ಆಡಳಿತ ಹಾಗೂ ವಿಪಕ್ಷ ಸದಸ್ಯರನ್ನು ಒಳಗೊಂಡು ಸತ್ಯಶೋಧನ ಸಮಿತಿ ರಚಿಸಿ ತನಿಖೆ ನಡೆಸಲಿ’ ಎಂದು ಆಗ್ರಹಿಸಿದರು. ಮಾಜಿ ಮೇಯರ್‌ ಪ್ರೇಮಾನಂದ ಶೆಟ್ಟಿ ಮಾತನಾಡಿ, ‘ಎಲ್ಲಿಯೂ ಸಂಸ್ಕರಿಸದ ನೀರು ಕೊಡುತ್ತಿಲ್ಲ. ಅನಾವಶ್ಯಕ ಗೊಂದಲ ಬೇಡ. ತನಿಖೆಯ ಅಗತ್ಯವೂ ಇಲ್ಲ. ಈ ಪ್ರಸ್ತಾಪ ಕಡತದಿಂದ ತೆಗೆಯಬೇಕು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next