Advertisement

Recipe: ಈ ಬಾರಿಯ ಹಬ್ಬಕ್ಕೆ ಸಕ್ಕರೆ-ಬೆಲ್ಲ ಬಳಸದೇ ಈ ಸಿಹಿ ಖಾದ್ಯ ತಯಾರಿಸಿ

05:57 PM Sep 30, 2024 | ಶ್ರೀರಾಮ್ ನಾಯಕ್ |

ಮಹಾಲಯ ಮುಗಿಯಲು ಇನ್ನೇನು ಎರಡು ದಿನಗಳು ಮಾತ್ರ ಬಾಕಿ ಇದಾದ ಬಳಿಕ ನವರಾತ್ರಿ, ದೀಪಾವಳಿ ಹಬ್ಬಗಳು ಬರುತ್ತಿವೆ ಈ ಶುಭ ದಿನಗಳಲ್ಲಿ ಹೆಚ್ಚಿನ ಮನೆಗಳಲ್ಲಿ ಸಿಹಿ ಖಾದ್ಯಗಳನ್ನು ಮಾಡುತ್ತಾರೆ ಹಾಗಾಗಿ ಈ ಬಾರಿಯ ಹಬ್ಬಕ್ಕೆ ನೀವು ಮನೆಯಲ್ಲಿ ಹೊಸ ಬಗೆಯ ಸಿಹಿ ಖಾದ್ಯವನ್ನು ಪ್ರಯೋಗ ಮಾಡಿ ನೋಡಿ. ಈ ರೆಸಿಪಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇನ್ನೊಂದು ವಿಷಯವೇನೆಂದರೆ ಈ ಖಾದ್ಯಕ್ಕೆ ಸಕ್ಕರೆ ಹಾಗೂ ಬೆಲ್ಲದ ಅಗತ್ಯವಿಲ್ಲ. ಇದರಲ್ಲಿ ಅತೀ ಹೆಚ್ಚು ಪ್ರೋಟೀನ್ ಅಂಶವಿರುವುದರಿಂದ ಇದು ಮಕ್ಕಳ ಆರೋಗ್ಯಕ್ಕೂ ಬಹಳ ಒಳ್ಳೆಯದು. ಕೆಲವು ಮಕ್ಕಳು ಡ್ರೈ ಫ್ಯೂಟ್ಸ್‌ ತಿನ್ನಲು ಇಷ್ಟಪಡುವುದಿಲ್ಲ ಅದರ ಬದಲಿಗೆ ಈ ರೀತಿಯ ರೆಸಿಪಿ ಮಾಡಿಕೊಟ್ಟರೆ ಖಂಡಿತವಾಗಿಯೂ ತಿನ್ನುತ್ತಾರೆ. ಹಾಗಾದರೆ ಮತ್ಯಾಕೆ ತಡ ಈ ಬಾರಿಯ ಹಬ್ಬಕ್ಕೆ ಮನೆಯಲ್ಲೇ ಅಂಜೂರ ರೋಲ್ ಮಾಡಿ ಮನೆಮಂದಿಯೊಂದಿಗೆ ಸವಿಯಿರಿ. ಬನ್ನಿ ಹಾಗಾದರೆ “ಅಂಜೂರ ರೋಲ್” ಮಾಡುವುದು ಹೇಗೆಂದು ತಿಳಿದು ಬರೋಣ…

Advertisement

ಅಂಜೂರ ರೋಲ್‌ ರೆಸಿಪಿ
ಬೇಕಾಗುವ ಸಾಮಗ್ರಿಗಳು:
ಒಣ ಅಂಜೂರ -250ಗ್ರಾಂ, ಖರ್ಜೂರ-250ಗ್ರಾಂ, ತುಪ್ಪ- 4ಚಮಚ, ಗೋಡಂಬಿ-ಅರ್ಧ ಕಪ್‌, ಬಾದಾಮ್‌ – ಅರ್ಧ ಕಪ್‌, ವಾಲ್‌ ನಟ್ಸ್‌- ಅರ್ಧ ಕಪ್‌, ಪಿಸ್ತಾ- 2 ಚಮಚ, ಒಣದ್ರಾಕ್ಷಿ – 2 ಚಮಚ, ಏಪ್ರಿಕಾಟ್‌(ಜಲ್ದರು ಹಣ್ಣು)- 4, ಸೂರ್ಯಕಾಂತಿ ಬೀಜ- 2ಚಮಚ, ಗಸಗಸೆ- 1ಚಮಚ, ತೆಂಗಿನಕಾಯಿ ಪುಡಿ – 2 ಚಮಚ, ಏಲಕ್ಕಿ ಪುಡಿ- ಅರ್ಧ ಟೀಸ್ಪೂನ್‌.

ತಯಾರಿಸುವ ವಿಧಾನ:
-ಮೊದಲಿಗೆ ಒಂದು ಮಿಕ್ಸಿಜಾರಿಗೆ ಒಣ ಅಂಜೂರ ಮತ್ತು ಖರ್ಜೂರವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
-ನಂತರ ಒಲೆ ಮೇಲೆ ಒಂದು ಪ್ಯಾನ್‌ ಇಟ್ಟು ಅದಕ್ಕೆ 2 ಚಮಚದಷ್ಟು ತುಪ್ಪ ಹಾಕಿ ರುಬ್ಬಿಟ್ಟ ಅಂಜೂರ/ಖರ್ಜೂರವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ(ಮೃದು ಆಗುವ ತನಕ).
-ತದನಂತರ ಇನ್ನೊಂದು ಪ್ಯಾನ್‌ ಗೆ 2 ಚಮಚದಷ್ಟು ತುಪ್ಪವನ್ನು ಹಾಕಿ ಅದಕ್ಕೆ ಸಣ್ಣಗೆ ಕಟ್‌ ಮಾಡಿಟ್ಟ ಗೋಡಂಬಿ, ಬಾದಾಮ್‌, ವಾಲ್‌ ನೆಟ್ಸ್‌ ಪಿಸ್ತಾ, ಒಣದ್ರಾಕ್ಷಿ, ಜಲ್ದರ್‌ ಹಣ್ಣು ಮತ್ತು ಸೂರ್ಯಕಾಂತಿ ಬೀಜ ಇವೆಲ್ಲವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.


-ಆ ಬಳಿಕ ಗಸಗಸೆ, ತೆಂಗಿನ ಪುಡಿ ಹಾಕಿ ಪುನಃ ಹುರಿಯಿರಿ. ನಂತರ ಮೊದಲೇ ಮಾಡಿಟ್ಟ ಅಂಜೂರ/ಖರ್ಜೂರದ ಮಿಶ್ರಣ ಸೇರಿಸಿ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕೆ ಇರಿಸಿ ಸ್ವಲ್ಪ ತಣ್ಣಗಾಗಲು ಬಿಡಿ.
-ನಂತರ ಒಂದು ಪ್ಲೇಟ್ ಗೆ ಸಣ್ಣಗೆ ಚೂರು ಮಾಡಿಟ್ಟ ಪಿಸ್ತಾವನ್ನು ಹಾಕಿ, ಮಾಡಿಟ್ಟ ಅಂಜೂರದ ಮಿಶ್ರಣವನ್ನು ಹಾಕಿ ರೋಲ್‌ ಮಾಡಿ 30 ನಿಮಿಷ ಹಾಗೆ ಬಿಡಿ ಬಳಿಕ ಸಣ್ಣಗೆ ಕಟ್‌ ಮಾಡಿದರೆ ಅಂಜೂರ ರೋಲ್‌ ಸವಿಯಲು ಸಿದ್ಧ.

-ಶ್ರೀರಾಮ್ ಜಿ . ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next