ಬೆಂಗಳೂರು : ಬಿಗ್ ಬಾಸ್ ಅನ್ನು ಮನರಂಜನೆಯ ಆಗರ, ಕುತೂಹಲಗಳ ಸಾಗರ ಎಂದರೆ ತಪ್ಪಾಗುವುದಿಲ್ಲ. ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಿರುವ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಲು ಪ್ರೇಕ್ಷಕರು ಕಾದು ಕುಳಿತಿರುತ್ತಾರೆ. ಸದ್ಯ ಬಿಗ್ ಬಾಸ್ ಸೀಸನ್ 8 ಕಾರ್ಯಕ್ರಮ ನಡೆಯುತ್ತಿದ್ದು, ಕಳೆದ ಎರಡು ವಾರಗಳಿಂದ ವಾರಾಂತ್ಯ ಕಾರ್ಯಕ್ರಮಕ್ಕೆ ಸುದೀಪ್ ಭಾಗಿಯಾಗಿಲ್ಲ.
ಆರೋಗ್ಯ ಸಮಸ್ಯೆಯಿಂದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದ್ದ ಸುದೀಪ್ ಪ್ರೇಕ್ಷಕರು ಮತ್ತು ಬಿಗ್ ಬಾಸ್ ಸ್ಪರ್ಧಿಗಳಿಂದ ಎರಡುವಾರ ದೂರ ಉಳಿದಿದ್ದರು. ಆದ್ರೆ ಇದೀಗ ಮತ್ತೊಂದು ಶಾಕಿಂಗ್ ಸುದ್ದಿಯನ್ನು ನೀಡಿರುವ ಬಿಗ್ ಬಾಸ್ ತಂಡ, ಈ ವಾರವೂ ಕೂಡ ಸುದೀಪ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎಂದು ತಿಳಿಸಿದೆ.
ಕಳೆದ ಕೆಲವು ದಿನಗಳ ಹಿಂದೆ ಈ ಬಗ್ಗೆ ಮಾಹಿತಿ ನೀಡಿದ್ದ ಸುದೀಪ್ ನಾನು ಸದ್ಯ ಚೇತರಿಸಿಕೊಂಡಿದ್ದೇನೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೆ ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು.
ಆದ್ರೆ ಸದ್ಯ ಇರುವ ಸಂಕಷ್ಟದಲ್ಲಿ ವಾರಾಂತ್ಯದ ಚಿತ್ರೀಕರಣ ನಡೆಯುತ್ತಿಲ್ಲ. ಈ ಕಾರಣದಿಂದ ವಾರಾಂತ್ಯದ ಸಂಚಿಕೆಯಲ್ಲಿ ಸುದೀಪ್ ಇರುವುದಿಲ್ಲ ಎಂದು ಬಿಗ್ ಬಾಸ್ ತಂಡ ತಿಳಿಸಿದೆ.
ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸುದೀಪ್ ವಾರಾಂತ್ಯ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಉಳಿದಿರುವುದು. ಇದರಿಂದ ಬಿಗ್ ಬಾಸ್ ಸ್ಪರ್ಧಿಗಳು ಸೇರಿದಂತೆ ಬಿಗ್ ಬಾಸ್ ವೀಕ್ಷಕರಿಗೂ ಬೇಸರ ತರಿಸಿದೆ.