ವಿಜಯಪುರ: ಸೂಕ್ತ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ಸಾರಿಗೆ ಸಂಸ್ಥೆ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಸರಿಯಾದ ಸಮಯಕ್ಕೆ ಬಸ್ ಬಾರದ ಕಾರಣ ಶಾಲಾ-ಕಾಲೇಜು ತರಗತಿಗಳಿಗೆ ಹಾಜರಾಗಲು ತೊಂದರೆಯಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಸಾರಿಗೆ ಸಂಸ್ಥೆಯ ಆಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಉಪಯೋಗವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲಾ ಕಾಲೇಜು ವೇಳೆಗೆ ಬಸ್ ಸೌಲಭ್ಯ ಬೇಕೆಂದು ಬೇಡಿಕೆ ಮುಂದಿಟ್ಟುಕೊಂಡು ಇಂಡಿ, ಝಳಕಿಯಲ್ಲಿರುವ ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಆದರೆ ಮಹಾರಾಷ್ಟ್ರ ಬಸ್ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರುವ ವಿದ್ಯಾರ್ಥಿಗಳು, ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗಳಿಗೆ ಮಸಿ ಬಳಿಯುತ್ತಿದ್ದರೂ ಕರ್ನಾಟಕದಲ್ಲಿ ಮಹಾರಾಷ್ಟ್ರ ಬಸ್ ಗಳಿಗೆ ಸಮಸ್ಯೆ ಮಾಡದೇ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ಭಾಷೆಯ ಹೆಸರಿನಲ್ಲಿ ಮಹಾರಾಷ್ಟ್ರ ಜನರು ತಪ್ಪು ಮಾಡುತ್ತಿದ್ದಾರೆ. ಅದೇ ತಪ್ಪನ್ನು ನಾವು ಮಾಡಬಾರದೆಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ನಂತರ ಸ್ಥಳಕ್ಕೆ ಆಗಮಿಸಿದ ಸಾರಿಗೆ ಸಂಸ್ಥೆ ಅಧಿಕಾರಿಗಳು ಶಾಲಾ, ಕಾಲೇಜು ಸಮಯಕ್ಕೆ ಸೂಕ್ತ ಬಸ್ ವ್ಯವಸ್ಥೆ ಮಾಡುವ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಅಂತ್ಯಗೊಳಿಸಿದರು.