Advertisement
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ಗಾಂಧಿ ಜಯಂತಿ ಪ್ರಯುಕ್ತ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ “ಗಾಂಧಿ ಗ್ರಾಮ ಪುರಸ್ಕಾರ’ ಪ್ರದಾನ ಮಾಡಿ ಅವರು ಮಾತನಾಡಿದರು. ಗ್ರಾಮ ಪಂಚಾಯ್ತಿ ಮಟ್ಟದಲ್ಲಿನ ಭ್ರಷ್ಟಾಚಾರವನ್ನು ಕೊನೆಗೊಳಿಸಲು ಎಷ್ಟರ ಮಟ್ಟಿಗೆ ಶ್ರಮ ವಹಿಸುತ್ತೀರೋ, ಅಷ್ಟರ ಮಟ್ಟಿಗೆ ಅಭಿವೃದ್ಧಿಯಾಗುತ್ತದೆ. ಇಲ್ಲದಿದ್ದರೆ ಹಣ ದುರುಪಯೋಗವಾಗುತ್ತದೆ ಎಂದು ಹೇಳಿದರು.
Related Articles
Advertisement
ತಲಾ 5 ಲಕ್ಷ ರೂ. ಪ್ರಶಸ್ತಿ: 2018-19ನೇ ಸಾಲಿನ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ 176 ಗ್ರಾಮ ಪಂಚಾಯ್ತಿಗೆ ತಲಾ 5 ಲಕ್ಷ ರೂ.ಪ್ರಶಸ್ತಿ ಹಣ ನೀಡಲಾಯಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ರಾಜ್ಯ ಯೋಜನಾ ಮಂಡಳಿ ಉಪಾ ಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಉಪಸ್ಥಿತರಿದ್ದರು.
ಉದ್ಯೋಗ ಖಾತರಿ – ಸ್ಥಗಿತ ಇಲ್ಲ: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ಸ್ಥಗಿತ ಗೊಳಿಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು. ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ರಾಜ್ಯದಲ್ಲಿ ನರೇಗಾ ಯೋಜನೆಯನ್ನು ಸ್ಥಗಿತಗೊಳಿಸಲಾಗುತ್ತಿದ್ದು, ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಕೇಂದ್ರ ಸರ್ಕಾರ ಕೂಲಿ ಹಣ ಬಿಡುಗಡೆ ಮಾಡಿಲ್ಲ ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್ ಮಾಡಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಆರೋಪ ಕೇಳಿ ನನಗೆ ಆಶ್ಚರ್ಯವಾಯಿತು. ಯಾವುದೇ ಕಾರಣಕ್ಕೂ ಉದ್ಯೋಗ ಖಾತರಿ ಯೋಜನೆ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದರು.
ಕೇಂದ್ರ ಸರ್ಕಾರದಿಂದ ಬರ ಬೇಕಿದ್ದ 485 ಕೋಟಿ ರೂ.ಬಾಕಿ ಪೈಕಿ, ಬುಧವಾರ 347 ಕೋಟಿ ರೂ.ಬಿಡುಗಡೆಯಾಗಿದ್ದು, 86 ಕೋಟಿ ರೂ. ಬಾಕಿ ಬರಬೇಕಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೂಲಿ ಹಣ ಹಾಗೂ ಸಾಮಗ್ರಿ ಹಣ ಸೇರಿ ಒಟ್ಟು 950 ಕೋಟಿ ರೂ.ಬಾಕಿ ಹಣ ಬಿಡುಗಡೆಯಾಗಿದ್ದು, ಇದಕ್ಕಾಗಿ ಪ್ರಧಾನಿ ಮೋದಿಯವರನ್ನು ಅಭಿನಂದಿಸಲಾಗುವುದು ಎಂದರು. ರಾಜ್ಯದ 6,022 ಗ್ರಾಪಂ ಗಳ ಪೈಕಿ ತಾಲೂಕಿಗೊಂದರಂತೆ 176 ಗ್ರಾಪಂಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. 176 ಗ್ರಾಪಂಗಳು ಇತರರಿಗೆ ಮಾದರಿಯಾಗಿವೆ. ಆದರೆ ಎರಡನೇ, ಮೂರನೇ ಸ್ಥಾನ ಪಡೆದವರು ಮುಂದೆ ಮೊದಲ ಸ್ಥಾನಕ್ಕೆ ಬರಲು ಪ್ರೇರಣೆ ನೀಡಬೇಕಿದೆ ಎಂದರು.
ಕುಡಿಯುವ ನೀರು ಹಾಗೂ ತುರ್ತು ಸ್ಪಂದನೆಗಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್ ರಚಿಸಲು ತೀರ್ಮಾನಿಸಲಾಗಿದ್ದು, ಪ್ರತಿ ಜಿಲ್ಲಾ ಪಂಚಾಯತ್‌ಗೆ ತಲಾ 1 ಕೋಟಿ ರೂ.ಅನುದಾನ ನೀಡಲಾಗುವುದು. ಉತ್ತರ ಕರ್ನಾಟಕದ 10-12 ಜಿಲ್ಲೆಯ ಜನರ ಅನುಕೂಲಕ್ಕಾಗಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಇಲಾಖೆಯ ವಿಶೇಷ ಕಚೇರಿ ಆರಂಭಿಸಿ, ಆಡಳಿತಾತ್ಮಕ ಹಾಗೂ ಆರ್ಥಿಕ ಅನುಮೋದನೆ ನೀಡುವ ಅಧಿಕಾರ ನೀಡಲಾಗುವುದು ಎಂದು ಹೇಳಿದರು.
ಶಾಸಕರು, ಸಂಸದರನ್ನು ಆಯ್ಕೆ ಮಾಡುವ ಮತದಾರರು ದೊಡ್ಡ ಸಂಖ್ಯೆಯಲ್ಲಿರುತ್ತಾರೆ. ಆದರೆ ಗ್ರಾಮ ಪಂಚಾಯ್ತಿಯಲ್ಲಿ ಸೀಮಿತ ಮತದಾರರಿರುತ್ತಾರೆ. ನಿಮ್ಮ ಪ್ರತಿಯೊಂದು ಹೆಜ್ಜೆಯನ್ನು ಜನ ಗಮನಿಸುತ್ತಿರುತ್ತಾರೆ. ಏನೇ ಹೇಳಿದರೂ ನಡೆ, ನುಡಿ, ವ್ಯವಹಾರವನ್ನು ಜನ ಗಮನಿಸುತ್ತಿರುತ್ತಾರೆ ಎಂಬುದು ತಿಳಿದಿರಲಿ.-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗತೊಡಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವತ್ಛ ಭಾರತ, ಫಿಟ್ ಇಂಡಿಯಾ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಜತೆಗೆ, ಗ್ರಾಮೀಣ ಪ್ರದೇಶದ ಮೂಲ ಸೌಕರ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.
-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ ಮೋದಿಯವರಿಗೆ “ಫಿಟ್ ಇಂಡಿಯಾ’ ಪರಿಕಲ್ಪನೆಯ ವಿಶೇಷ ಯೋಜನೆಯನ್ನು ಗ್ರಾಮ ಪಂಚಾಯ್ತಿ ಮೂಲಕ ಜಾರಿಗೊಳಿಸುವ ಅಪೇಕ್ಷೆ ಇದೆ. ಗ್ರಾಮೀಣ ಯುವಜನತೆ, ಹೆಣ್ಣು ಮಕ್ಕಳು, ಇತರರು ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಪೂರಕವಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ತೆರೆದ ವ್ಯಾಯಾಮ ಶಾಲೆ ಆರಂಭಿಸಲು ತೀರ್ಮಾನಿಸಲಾಗಿದೆ.
-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ