Advertisement
ಕಡಬ ತಾಲೂಕು ಕೇಂದ್ರವಾಗಿ ರೂಪುಗೊಂಡ ಬಳಿಕ ತಾಲೂಕು ಕೇಂದ್ರವಾಗಿರುವ ಕಡಬ ಪಟ್ಟಣ ಗ್ರಾಮ ಪಂಚಾಯತ್‌ನಿಂದ ಸಹಜವಾಗಿ ಜನಸಂಖ್ಯೆ ಆಧಾರದಲ್ಲಿ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದೆ. ಹಿಂದೆ ಗ್ರಾಮ ಪಂಚಾಯತ್ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡದಲ್ಲಿಯೇ ಪಟ್ಟಣ ಪಂಚಾಯತ್ ಕಾರ್ಯನಿರ್ವಹಿಸುತ್ತಿದ್ದು, ಹಿಂದೆ ಗ್ರಾಮ ಪಂಚಾಯತ್‌ನಲ್ಲಿ ಸಿಬಂದಿಯಾಗಿದ್ದವರೇ ಪಟ್ಟಣ ಪಂಚಾಯತ್ ಸಿಬಂದಿಯಾಗಿದ್ದಾರೆ.
ಕಡಬ ಪಟ್ಟಣ ಪಂಚಾಯತ್‌ನಲ್ಲಿ ಮುಖ್ಯಾಧಿಕಾರಿ ಮತ್ತು ಎಂಜಿನಿಯರ್ ಹುದ್ದೆ ಮಾತ್ರ ಭರ್ತಿಯಾಗಿದ್ದು, ಉಳಿದ ಹುದ್ದೆಗಳು ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿದೆ. ಒಟ್ಟು 40 ಹುದ್ದೆಗಳಿದ್ದು ಆ ಪೈಕಿ 33 ಹುದ್ದೆಗಳು ಖಾಲಿ ಇದೆ. ಈ ಹಿಂದೆ ಗ್ರಾ.ಪಂ.ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 6 ಮಂದಿ ಸಿಬ್ಬಂದಿಗಳು ಪಟ್ಟಣ ಪಂಚಾಯತ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರನ್ನು ನೇರ ಪಾವತಿಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಕೆಲವು ಸಿಬಂದಿಯನ್ನು ಹೊರಗುತ್ತಿಗೆಯಾಧಾರಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಎಲ್ಲ ಹುದ್ದೆಗಳು ಭರ್ತಿಯಾಗದೆ ಇರುವುದರಿಂದ ಇರುವ ಸಿಬಂದಿಗೆ ಕೆಲಸದ ಹೊರೆ ಹೆಚ್ಚಾಗಿದೆ.
Related Articles
Advertisement
ಕೆಲಸಗಳಿಗೆ ಅಲೆದಾಟ: ಜನರ ಆಕ್ರೋಶವ್ಯಾಪಾರ ಪರವಾನಿಗೆಯಿಂದ ಹಿಡಿದು ವಿವಿಧ ಕೆಲಸ ಕಾರ್ಯಗಳಿಗೆ ದಿನ ನಿತ್ಯ ಹಲವಾರು ಗ್ರಾಮಸ್ಥರು ಪಂಚಾಯತ್‌ಗೆ ಭೇಟಿ ನೀಡುತ್ತಿದ್ದು, ಇಲ್ಲಿ ಕೆಲಸಗಳಿಗಾಗಿ ಪದೇ ಪದೇ ಅಲೆದಾಡಬೇಕಿದೆ ಎನ್ನುವುದು ಬಹುತೇಕ ಗ್ರಾಮಸ್ಥರ ಆರೋಪ. ಬಹುತೇಕ ಸಂದರ್ಭಗಳಲ್ಲಿ ಇಲ್ಲಿ ಕೊಟ್ಟ ಅರ್ಜಿಗಳು, ದಾಖಲೆಗಳು ನಾಪತ್ತೆಯಾಗುತ್ತವೆ. ತಿಂಗಳು ಗಟ್ಟಳೆ ಅದನ್ನು ಹುಡುಕಿ ಕೊನೆಗೆ ಹೊಸ ಅರ್ಜಿ, ದಾಖಲೆಗಳನ್ನು ಕೊಡುವ ಅನಿವಾರ್ಯ ಪರಿಸ್ಥಿತಿ ಎದುರಾದ ಹಲವು ಉದಾಹರಣೆಗಳು ಇಲ್ಲಿವೆ. ಅನುದಾನ ಬಳಕೆ ಅಸಮರ್ಪಕ: ಆರೋಪ
ಪಟ್ಟಣ ಪಂಚಾಯತ್ ನಿಂದ ಹಲವಾರು ಅಭಿವೃದ್ಧಿ ಕಾರ್ಯಗಳು ಈಗಾಗಲೇ ನಡೆದಿವೆ. ಆದರೆ ಅನುದಾನಗಳು ಸಮರ್ಪಕವಾಗಿ ಬಳಕೆಯಾಗಿಲ್ಲ ಎನ್ನುವ ಆರೋಪ ಬಲವಾಗಿ ಕೇಳಿ ಬರುತ್ತಿದೆ. ಅದಕ್ಕೆ ಪೂರಕ ಎಂಬಂತೆ ಈ ಹಿಂದೆ ಕಡಬಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ನಗರೋತ್ಥಾನ ಯೋಜನೆಯ ಕಾಮಗಾರಿ ಪರಿಶೀಲಿಸಿ ಎಂಜಿನಿಯರ್ ಹಾಗೂ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜತೆಯಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ನಡೆಯಲು ಸಾಧ್ಯ. ಆದರೆ ಇಲ್ಲಿ ಕೇವಲ ಅಧಿಕಾರಿಗಳದ್ದೇ ಆಡಳಿತ. 13 ವಾರ್ಡ್‌ಗಳಾಗಿ ವಿಂಗಡನೆ
ಈಗಾಗಲೇ ಕಳಾರ, ಕೋಡಿಬೈಲು, ಪನ್ಯ, ಬೆದ್ರಾಜೆ, ಮಾಲೇಶ್ವರ, ಕಡಬ, ಪಣೆಮಜಲು, ಪಿಜಕಳ, ಮೂರಾಜೆ, ದೊಡ್ಡಕೊಪ್ಪ, ಕೋಡಿಂಬಾಳ, ಮಜ್ಜಾರು, ಪುಳಿಕುಕ್ಕು ಎಂಬ 13 ವಾರ್ಡುಗಳನ್ನಾಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯನ್ನು ವಿಂಗಡಣೆ ಮಾಡಲಾಗಿದೆ. 2011ರ ಜನಗಣತಿ ಪ್ರಕಾರ ಎರಡು ಗ್ರಾಮಗಳಲ್ಲಿ 10500 ಜನಸಂಖ್ಯೆ ಇದೆ. ತಯಾರಾಗದ ಮತದಾರರ ಪಟ್ಟಿ
ಪಟ್ಟಣ ಪಂಚಾಯತ್ ರಚನೆಯಾಗಿ 4 ವರ್ಷ ಕಳೆದರೂ ಇದರ ವ್ಯಾಪ್ತಿಯ ಮತದಾರರ ಪಟ್ಟಿ ಮಾಡಲು ಸಂಬಂಧಿಸಿದ ಇಲಾಖೆಗೆ ಆಗದಿರುವುದು ಚುನಾವಣೆ ಪ್ರಕ್ರಿಯೆ ವಿಳಂಬಕ್ಕೆ ಒಂದು ಮುಖ್ಯ ಕಾರಣ ಎಂದು ಇದೀಗ ಹೇಳಲಾಗುತ್ತಿದೆ. ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ನಿಗದಿಯಾದ ಮೀಸಲಾತಿ ರದ್ದಾಗಿದೆ ಎಂಬ ಸುದ್ದಿಯೂ ಈಗ ಹರಿದಾಡಲು ಆರಂಭಿಸಿದೆ. ಕಡಬ ಪ.ಪಂ.ವ್ಯಾಪ್ತಿಯ ವಾರ್ಡ್ ವಿಂಗಡಣೆ ಇತ್ಯಾದಿ ಕೆಲಸಗಳು ಈಗಾಲೇ ಪೂರ್ತಿಗೊಂಡಿದೆ. ಅಗತ್ಯ ಸಿಬಂದಿ ನೇಮಕ ಮತ್ತು ಶೀಘ್ರ ಇಲ್ಲಿ ಚುನಾವಣೆ ನಡೆಸಿ ಜನರಿಗೆ ಅನುಕೂಲವಾಗುವಂತೆ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳನ್ನು ಆರಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಸಚಿವರಿಗೆ ಒತ್ತಡ ಹೇರಲಾಗುವುದು.
-ಭಾಗೀರಥಿ ಮುರುಳ್ಯ, ಶಾಸಕರು, ಸುಳ್ಯ -ನಾಗರಾಜ್ ಎನ್.ಕೆ.