Advertisement

Kota: ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಂಪೂರ್ಣ ಕ್ಯಾಶ್‌ಲೆಸ್‌

03:59 PM Jan 02, 2025 | Team Udayavani |

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಆಡಳಿತವನ್ನು ಇನ್ನಷ್ಟು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಕಚೇರಿಯನ್ನು ಸಂಪೂರ್ಣ ನಗದು ರಹಿತ ವ್ಯವಹಾರಕ್ಕೆ ಸಿದ್ಧಪಡಿಸಲಾಗಿದೆ. ಆನ್‌ಲೈನ್‌ ಪಾವತಿಗಷ್ಟೇ ಆವಕಾಶ ಕಲ್ಪಿಸಲಾಗಿದೆ.

Advertisement

ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಬಿಬಿಪಿಎಸ್‌. ವ್ಯವಸ್ಥೆಯಡಿ ಕ್ಯಾಶ್‌ಲೆಸ್‌ ಬಳಕೆ ಜಾರಿಯಾಗಿ ವರ್ಷ ಕಳೆದರೂ ಸಾಲಿಗ್ರಾಮದ ಪಟ್ಟಣ ಪಂಚಾಯತ್‌ನಲ್ಲಿ ಪೂರ್ಣ ಪ್ರಮಾಣದ ಅನುಷ್ಠಾನವಾಗಿರಲಿಲ್ಲ. ಇದೀಗ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಳವಡಿಸಲಾಗಿದೆ.

ಪಟ್ಟಣ ಆಡಳಿತ ವ್ಯವಸ್ಥೆಯಲ್ಲಿ ಲೋಪದೋಷಗಳಿರುವ ಬಗ್ಗೆ ಹಾಗೂ ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಸಾಕಷ್ಟು ವಿಳಂಬವಾಗುತ್ತಿರುವ ಕುರಿತು ಈ ಹಿಂದೆ ದೂರುಗಳಿದ್ದವು. ಹೀಗಾಗಿ ಈ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ತರಲು ಪ.ಪಂ. ಮುಂದಾಗಿದೆ.

ಕ್ಯಾಶ್‌ಲೆಸ್‌ ವ್ಯವಹಾರ ಹೇಗೆ?
ಬಿ.ಬಿ.ಪಿ.ಎಸ್‌. (ಭಾರತ್‌ ಬಿಲ್‌ ಫೇಮೆಂಟ್‌ ಸಿಸ್ಟಮ್‌) ಎನ್ನವುದು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಆಡಳಿತಕ್ಕೆ ಅನುಕೂಲವಾಗುವ ರೀತಿಯಲ್ಲಿ ಎಲ್ಲ ಬಗೆಯ ಪಾವತಿಗಳನ್ನು ಒಂದೇ ಮಾಧ್ಯಮದ ಮೂಲಕ ನಿರ್ವಹಿಸಲು ರೂಪಿಸಿದ ಆನ್‌ಲೈನ್‌ ವ್ಯವಸ್ಥೆಯಾಗಿದೆ. ಇದರ ಮೂಲಕ ಕ್ಯಾಶ್‌ಲೆಸ್‌ನ ಎಲ್ಲ ಸೌಕರ್ಯಗಳನ್ನು ಬಳಸಿ ಸಾರ್ವಜನಿಕರು ವ್ಯವಹರಿಸಬಹುದಾಗಿದೆ.

ಚಲನ್‌ ಮೂಲಕ ಪಾವತಿಗೆ ಅವಕಾಶ
ಕ್ಯಾಶ್‌ಲೆಸ್‌ ವ್ಯವಸ್ಥೆ ಬಗ್ಗೆ ಮಾಹಿತಿ ಇಲ್ಲದವರಿಗೆ ನೇರವಾಗಿ ಬ್ಯಾಂಕ್‌ಗೆ ಭೇಟಿ ನೀಡಿ ಚಲನ್‌ ಮೂಲಕ ಪಾವತಿ ಮಾಡುವ ಅವಕಾಶ ಕೂಡ ಇದೆ. ಪ.ಪಂ. ಕೂಗಳತೆ ದೂರದಲ್ಲೇ ರಾಷ್ಟ್ರೀಕೃತ ಬ್ಯಾಂಕ್‌ಗಳು ಇರುವುದು ಇದಕ್ಕೆ ಪೂರಕವಾಗಿದೆ. ಮುಂದೆ ರಾಷ್ಟ್ರೀಕೃತ ಬ್ಯಾಂಕ್‌ನ ಕೌಂಟರ್‌ವೊಂದನ್ನು ಪ.ಪಂ.ನಲ್ಲಿ ತೆರೆಯುವ ಆಲೋಚನೆ ಕೂಡ ಇದ್ದು ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಪಾರದರ್ಶಕ ಆಡಳಿತಕ್ಕೆ ಸೂತ್ರ
ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸಂಪೂರ್ಣ ಕ್ಯಾಶ್‌ಲೆಸ್‌ ಸೂತ್ರ ಅಳವಡಿಸಿಕೊಳ್ಳಲಾಗಿದೆ. ಇನ್ನು ಮುಂದೆ ಯಾವುದೇ ವಿಭಾಗದಲ್ಲಿ ನಗದು ಹಣವನ್ನು ಸ್ವೀಕರಿಸಲಾಗುವುದಿಲ್ಲ ಹಾಗೂ ಮಧ್ಯವರ್ತಿಗಳ ವ್ಯವಹಾರಕ್ಕೆ ಕೂಡ ಕಡಿವಾಣ ಹಾಕಲಾಗಿದ್ದು,ಅವರಿಂದ ಬರುವ ಕಡತಗಳ ನಿಗಾವಹಿಸಲಾಗುವುದು. ಅಧಿಕಾರಿಗಳು ಅಥವಾ ಸಿಬಂದಿಗಳು ಹಣದ ಬೇಡಿಕೆ ಇಟ್ಟಲ್ಲಿ ನೇರವಾಗಿ ಸಂಪರ್ಕಿಸಿ ದೂರು ನೀಡಬಹುದು.
-ಅಜಯ್‌ ಭಂಡಾರ್ಕರ್‌, ಮುಖ್ಯಾಧಿಕಾರಿ ಸಾಲಿಗ್ರಾಮ ಪ.ಪಂ.

Advertisement

Udayavani is now on Telegram. Click here to join our channel and stay updated with the latest news.

Next