ಚಂಡೀಗಢ: ಪಂಜಾಬಿನ ಗ್ರಾಮ ಪಂಚಾಯತ್ ಒಂದು ನಾಗರಿಕ ಸೇವಾ ಪರೀಕ್ಷೆ, ಎಂಬಿಬಿಎಸ್ ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಅಲ್ಲಿನ ಆಕಾಂಕ್ಷಿಗಳಿಗೆ ಹಣ ಸಹಾಯ ಮಾಡಲು ನಿರ್ಧರಿಸಿದೆ.
ಪಟಿಯಾಲದ ಅಕ್ರಿ ಗ್ರಾಮ ಪಂಚಾಯತ್ ಈ ನಿರ್ಣಯವನ್ನು ಕೈಗೊಂಡಿದೆ. ಸುಮಾರು 800 ಮಂದಿಯನ್ನು ಹೊಂದಿರುವ ಈ ಗ್ರಾಮದ ಪಂಚಾಯಿತಿಗೆ ಚುನಾವಣೆ ನಡೆದಿತ್ತು.
ಚುನಾವಣೆಯ ನಂತರ ಮೊದಲ ಬಾರಿಗೆ ಸಭೆ ಸೇರಿದ ಗ್ರಾಮಸ್ಥರು ಇಲ್ಲಿ ಹಲವು ನಿರ್ಣಯಗಳನ್ನು ಕೈಗೊಂಡಿದ್ದಾರೆ. ಹೊಸತಾಗಿ ಆಯ್ಕೆಯಾದವರೆಲ್ಲರೂ 40 ವರ್ಷದೊಳಗಿನವರಾಗಿದ್ದು, ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಒಬ್ಬ ಮುಖಂಡ ಸುದ್ದಿಗಾರರೊಂದಿಗೆ ಮಾತನಾಡಿ, “ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಹಣ ಸಹಾಯ ಮಾಡಲು ಡಿ.22ರಂದು ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಅರ್ಹತೆಯುಳ್ಳ ಯುವಕರಿಗೆ ಈ ಹಣ ನೀಡುತ್ತೇವೆ. ಅವರು ಭವಿಷ್ಯದಲ್ಲಿ ಉನ್ನತ ಹುದ್ದೆ ಪಡೆದ ಬಳಿಕ ಗ್ರಾಮಕ್ಕೆ ಸಹಾಯ ಮಾಡುವುದನ್ನು ಮುಂದುವರಿಸಬಹುದು. ಅವರ ಈ ಸಾಧನೆಯ ಮೂಲಕ ಇನ್ನಷ್ಟು ಯುವಕರು ಸ್ಪೂರ್ತಿ ಪಡೆಯುತ್ತಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.