ಪುಣೆ : ಮದುವೆಯ ಮೊದಲ ರಾತ್ರಿ ವಧುವಿನ ಕನ್ಯತ್ವವನ್ನು ಪರೀಕ್ಷಿಸುವ ಸಂಪ್ರದಾಯದ ವಿರುದ್ಧ ಪುಣೆಯ ಕಂಜಾರ್‌ಭಾತ್ ಸಮುದಾಯದ ಯುವಕರ ಸಮೂಹವೊಂದು ಜಾಗೃತಿ ಅಭಿಯಾನ ಕೈಗೊಳ್ಳುವ ಸಲುವಾಗಿ ವಾಟ್ಸಾಪ್ ಗ್ರೂಪ್ ರಚಿಸಿಕೊಂಡಿದ್ದಾರೆ.
“ಸ್ಟಾಪ್ ದಿ ವಿ ರಿಚುವಲ್’ ಎಂಬ ಹೆಸರಿನ ಈ ವಾಟ್ಸಾಪ್ ಅಭಿಯಾನಕ್ಕೆ ಅನೇಕರು ಬೆಂಬಲಿಸಿದ್ದಾರೆ. ಈ ಅಭಿಯಾನವನ್ನು ಆರಂಭಿಸಿರುವ ಯುವಕರ ಸಮೂಹವು “ಮದುವೆಯ ಮೊದಲ ರಾತ್ರಿ ವಧುವಿನ ಕನ್ಯತ್ವವನ್ನು ಪರೀಕ್ಷಿಸುವ ಸಂಪ್ರದಾಯ’ದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ವಧುವಿನ ಕನ್ಯತ್ವ ಪರೀಕ್ಷಿಸುವ ಸಂಪ್ರದಾಯದ ಪ್ರಕಾರ ಗ್ರಾಮ ಮುಖ್ಯಸ್ಥನು ನೂತನ ವಧೂವರರ ಮೊದಲ ರಾತ್ರಿಯ ಹಾಸಿಗೆ ಮೇಲೆ ಬಿಳಿ ಬಟ್ಟೆಯೊಂದನ್ನು ಹರಡುತ್ತಾನೆ; ಮರುದಿನ ಆ ಬಿಳಿ ಬಟ್ಟೆಯ ಮೇಲೆ ರಕ್ತದ ಕಲೆಗಳು ಕಂಡು ಬಂದರೆ ವಧುವು ಕನ್ಯೆಯಾಗಿರುವುದಕ್ಕೆ ಸಾಕ್ಷಿ ಎಂದು ತಿಳಿಯಲಾಗುತ್ತದೆ. ಒಂದು ವೇಳು ಬಟ್ಟೆಯ ಮೇಲೆ ರಕ್ತದ ಕಲೆ ಕಂಡು ಬಾರದಿದ್ದಲ್ಲಿ ಆ ಹುಡುಗಿಯು ಮದುವೆಗೆ ಮೊದಲು ಪುರುಷನ ಜತೆಗೆ ಲೈಂಗಿಕ ಸಂಬಂಧ ಹೊಂದಿದ್ದಳು ಎಂದು ತಿಳಿಯಲಾಗುತ್ತದೆ.
ಈ ರೀತಿಯ ಕನ್ಯತ್ವ ಪರೀಕ್ಷೆಯನ್ನು ಹೆಚ್ಚಿನ ಸಂದರ್ಭಗಳಲ್ಲಿ ವಧುವಿನ ಅನುಮತಿ ಇಲ್ಲದೆಯೇ ನಡೆಸಲಾಗುತ್ತದೆ.
“ಇದೊಂದು ಅತ್ಯಂತ ಕ್ರೂರ ಕ್ರಮ; ಇದನ್ನು ವಿರೋಧಿಸುವ ಬಗ್ಗೆ ಮತ್ತು ಕನ್ಯತ್ವ ಕುರಿತಾದ ತಪ್ಪು ನಂಬಿಕೆಗಳನ್ನು ಹೋಗಲಾಡಿಸುವ ಬಗ್ಗೆ ಒಂದು ಗುಂಪನ್ನು ಕಟ್ಟಿಕೊಂಡು ನಾವು ವಾಟ್ಸಾಪ್ ಮೂಲಕ ಜಾಗೃತಿ ಅಭಿಯಾನ ಆರಂಭಿಸಿದ್ದೇವೆ; ಈ ಹಿಂದೆ ನಾವು ತ್ರಿವಳಿ ತಲಾಕ್ ಮತ್ತು ಫೇಸ್ ಬುಕ್‌ನಲ್ಲಿ ಖಾಸಗಿತನದ ಹಕ್ಕಿನ ಬಗ್ಗೆಯೂ ಜನಜಾಗೃತಿಯನ್ನು ವಾಟ್ಸಾಪ್ ಮೂಲಕ ಕೈಗೊಂಡಿದ್ದೆವು’ ಎಂದು ವಾಟ್ಸಾಪ್ ಗ್ರೂಪ್ ಆ್ಯಡ್ಮಿನ್ ಆಗಿರುವ ವಿವೇಕ್ ತಮಾಯಿಚೇಕರ್ ಹೇಳಿದರು.
ಮುಂಬಯಿಯಲ್ಲಿ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸಯನ್ಸಸ್ (ಟಿಐಎಸ್‌ಎಸ್) ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿರುವ ತಮಾಯಿಚೇಕರ್, “ವಧುವಿನ ಕನ್ಯತ್ವ ಪರೀಕ್ಷಾ ಕ್ರಮವು ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆಯಾಗುತ್ತದೆ ಎಂದು ಹೇಳಿದರು.
“ವಧುವಿನ ಕನ್ಯತ್ವ ಪರೀಕ್ಷಾ ಕ್ರಮವು ಸುಮುದಾಯದ ಸಂಪ್ರದಾಯವಾಗಿದ್ದು ಇದನ್ನು ಕೈಬಿಟ್ಟಲ್ಲಿ ಸಮುದಾಯದ ಹುಡುಗಿಯರು ಕೆಟ್ಟು ಹೋಗುತ್ತಾರೆ ಎಂಬ ಭಾವನೆ ಇಲ್ಲಿನ ಜನರಲ್ಲಿದೆ; ಈ ತಪ್ಪು ಭಾವನೆಯನ್ನು ಹೋಗಲಾಗಡಿಸುವುದು ಕೂಡ ನಮ್ಮ ಉದ್ದೇಶವಾಗಿದೆ” ಎಂದು ತಮಾಯಿಚೇಕರ್ ಹೇಳಿದರು.