ಸ್ಟಾರ್ ಸಿನಿಮಾಗಳಿಗೆ ಒಂದು ಅಭಿಮಾನಿ ವರ್ಗವೇ ಇರುತ್ತದೆ. ಸಹಜವಾಗಿಯೇ ದೊಡ್ಡ ಓಪನಿಂಗ್, ಬಿಝಿನೆಸ್ ಎಲ್ಲವೂ ಆಗುತ್ತದೆ. ಆದರೆ, ಹೊಸಬರ ಸಿನಿಮಾಗಳಿಗೆ, ಕಂಟೆಂಟ್ ಆಧಾರಿತ ಸಿನಿಮಾಗಳಿಗೆ ಆರಂಭದಲ್ಲಿ ಯಾರ ಬೆಂಬಲವೂ ಇರುವುದಿಲ್ಲ. ಒಮ್ಮೆ ಚಿತ್ರಮಂದಿರಕ್ಕೆ ಬಂದು ಜನ ನೋಡಿ, ಅವರಿಂದ ಮೆಚ್ಚುಗೆ ಪಡೆಯುವವರೆಗೆ ಈ ತರಹದ ಕಂಟೆಂಟ್ ಸಿನಿಮಾಗಳಿಗೆ ದೊಡ್ಡ ಮಟ್ಟದ ಬೆಂಬಲ ಇರೋದಿಲ್ಲ.
ಆದರೆ, ಒಮ್ಮೆ ಸಿನಿಮಾ ಚೆನ್ನಾಗಿದೆ ಎಂದು ಗೊತ್ತಾದರೆ ಈ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತವೆ. ಈಗಾಗಲೇ ಕನ್ನಡದಲ್ಲಿ ಗಟ್ಟಿಕಥಾಹಂದರವಿರುವ ಸಾಕಷ್ಟು ಕಂಟೆಂಟ್ ಸಿನಿಮಾಗಳು ಹಿಟ್ ಆಗಿವೆ. ಸ್ಟಾರ್‌ಗಳ ಸಿನಿಮಾಗಳು ಮಾಡುವ ಮಟ್ಟಕ್ಕೆ ಬಿಝಿನೆಸ್ ಕೂಡಾ. ಇದು ಸ್ಟಾರ್‌ಗಳ ಗಮನಕ್ಕೂ ಬಂದಿದೆ. ನಟ ಸುದೀಪ್, ಕಂಟೆಂಟ್ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗುವುದನ್ನು ಗಮನಿಸಿದ್ದಾರೆ.
“ಇವತ್ತು ಚಿಕ್ಕ ಸಿನಿಮಾ, ದೊಡ್ಡ ಸಿನಿಮಾ ಎಂಬುದು ಯಾವುದೂ ಇಲ್ಲ. ಅದರಲ್ಲೂ ಕಂಟೆಂಟ್ ಸಿನಿಮಾಗಳು ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ಸು ಕಾಣುತ್ತಿವೆ. ಇವತ್ತು ಕಂಟೆಂಟ್ ಸಿನಿಮಾಗಳ ಮುಂದೆ ಸ್ಟಾರ್‌ಡಮ್ ಕೂಡಾ ಅಲ್ಲಾಡುತ್ತಿದೆ. ಆ ಮಟ್ಟಿಗೆ ಕಂಟೆಂಟ್ ಸಿನಿಮಾಗಳು ಹಿಟ್ ಆಗುತ್ತಿವೆ’ ಎನ್ನುವ ಮೂಲಕ ಹೊಸ ಬಗೆಯ ಸಿನಿಮಾಗಳನ್ನು ಜನ ಒಪ್ಪಿಕೊಳ್ಳುತ್ತಿರುವ ಬಗ್ಗೆ ಖುಷಿಪಟ್ಟರು ಸುದೀಪ್.
ಅಂದಹಾಗೆ, ಕಂಟೆಂಟ್ ಸಿನಿಮಾಗಳ ಮಾತಿಗೆ ವೇದಿಕೆಯಾಗಿದ್ದು “ಮಿಸ್ಸಿಂಗ್ ಬಾಯ್’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ. “ಮಿಸ್ಸಿಂಗ್ ಬಾಯ್’ ಕೂಡಾ ನೈಜ ಘಟನೆಯನ್ನಾಧರಿಸಿದ ಚಿತ್ರ. ಚಿಕ್ಕಂದಿನಲ್ಲಿ ಕಳೆದು ಹೋಗಿ ಬೇರೆ ದೇಶ ಸೇರುವ ಯುವಕ ಹಲವು ವರ್ಷಗಳ ನಂತರ ತನ್ನ ಪಾಲಕರನ್ನು ಹುಡುಕಿಕೊಂಡು ಕರ್ನಾಟಕಕ್ಕೆ ಬಂದ ಘಟನೆಯನ್ನಿಟ್ಟುಕೊಂಡು “ಮಿಸ್ಸಿಂಗ್ ಬಾಯ್’ ಸಿನಿಮಾ ಮಾಡಲಾಗಿದೆ. ಈ ಚಿತ್ರವನ್ನು ರಘುರಾಮ್ ನಿರ್ದೇಶಿಸಿದ್ದಾರೆ. ಗುರುನಂದನ್ ಈ ಚಿತ್ರದ ನಾಯಕ.