Advertisement
ಮಲ್ಪೆ ಸರಕಾರಿ ಪ.ಪೂ. ಕಾಲೇಜಿನ ಪುನೀತ್ ನಾಯ್ಕ, ಉಡುಪಿ ಬಾಲಕಿಯರ ಸರಕಾರಿ ಪ.ಪೂ. ಕಾಲೇಜಿನ ಗಾಯತ್ರಿ, ಕಾಳಾವರ ಸರಕಾರಿ ಪ್ರೌಢಶಾಲೆಯ ನಿಶಾ, ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ವೈಷ್ಣವಿ ಶೆಟ್ಟಿ ಮತ್ತು ಒಳಕಾಡು ಸರಕಾರಿ ಪ್ರೌಢಶಾಲೆಯ ಕೇದಾರ್ ನಾಯಕ್ 625ಕ್ಕೆ 625 ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಸಾಧನೆಗೆ ಹಲವು ವಿನೂತನ ಪ್ರಯತ್ನವೂ ನಡೆದಿದೆ.
Related Articles
Advertisement
ಸರಕಾರಿ ಶಾಲೆಗಳಲ್ಲೂ ಸ್ಮಾರ್ಟ್ ಕ್ಲಾಸ್ ಮೂಲಕ ತರಗತಿ ನಡೆಯುತ್ತಿದೆ ಎಂದರೆ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಸತ್ಯ. ಒಳಕಾಡು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳ ಜತೆಗೆ ಸ್ಮಾರ್ಟ್‌ಕ್ಲಾಸ್ ಕೂಡ ನಡೆಯುತಿತ್ತು. ಒಂದೇ ಪಾಠವನ್ನು ನಿತ್ಯ ಎರಡೆರೆಡು ಬಾರಿ ಕೇಳುವ ಅವಕಾಶ ವಿದ್ಯಾರ್ಥಿಗಳಿತ್ತು. ಇದರ ಜತೆಗೆ ಅನೇಕ ಪ್ರೌಢಶಾಲೆಗಳು ಕಂಪ್ಯೂಟರ್ ಆಧಾರಿತ ಶಿಕ್ಷಣವನ್ನು ಗಣಿತ ಮತ್ತು ವಿಜ್ಞಾನದ ವಿಷಯಕ್ಕೆ ನೀಡಿದ್ದವು.
ಶಿಕ್ಷಕರೇ ಟ್ಯೂಷನ್ ನೀಡುವುದು
ಇನ್ನೂ ಒಂದು ವಿಶೇಷವೆಂದರೆ ಸರಕಾರಿ ಪ್ರೌಢಶಾಲೆಯಲ್ಲಿ cಎಸೆಸೆಲ್ಸಿ ಓದಿದ ವಿದ್ಯಾರ್ಥಿಗಳಿಗೆ ಅಲ್ಲಿನ ಶಿಕ್ಷಕರೇ ಉಚಿತ ಟ್ಯೂಷನ್ ನೀಡುತ್ತಿದ್ದರು. ಅಂದರೆ ನಿತ್ಯದ ತರಗತಿಯ ಜತೆಗೆ ತರಗತಿ ಅವಧಿ ಮುಗಿದ ಅನಂತರ ಒಂದು ಅಥವಾ ಎರಡು ಗಂಟೆ ಆಯಾ ವಿಷಯ ಶಿಕ್ಷಕರೇ ಖುದ್ದು ಅದೇ ಶಾಲೆಯಲ್ಲಿ ಟ್ಯೂಷನ್ ನೀಡುತ್ತಿದ್ದರು. ಇನ್ನು ಕೆಲವು ಶಾಲೆಯ ಶಿಕ್ಷಕರು ಶನಿವಾರ ಮಧ್ಯಾಹ್ನ, ರವಿವಾರವೂ ವಿಶೇಷ ತರಗತಿ ನಡೆಸುತ್ತಿದ್ದರು. ಹೀಗೆ ಜಿಲ್ಲೆಯ ಸರಕಾರಿ ಶಾಲೆಗಳು ಎಸೆಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಲು ಈ ರೀತಿಯ ಹಲವು ಮಾದರಿ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿತ್ತು.
ವಿಶೇಷ ಗುಂಪು
ಎಸೆಸೆಲ್ಸಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಕೆಲವು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರತ್ಯೇಕ ಗುಂಪು ರಚನೆ ಮಾಡಲಾಗಿತ್ತು. ವಿದ್ಯಾರ್ಥಿಗಳ ಹಿಂದಿನ ಪರೀಕ್ಷೆ ಮತ್ತು ತರಗತಿಯಲ್ಲಿ ಅವರ ಕಲಿಕೆಯ ಮಟ್ಟ ಆಧರಿಸಿ ಈ ಗುಂಪು ರಚನೆ ಮಾಡಲಾಗಿತ್ತು. ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾಗಬಲ್ಲ ವಿದ್ಯಾರ್ಥಿಗಳ ಗುಂಪು, ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಬಲ್ಲ ವಿಶ್ವಾಸವಿದ್ದ ವಿದ್ಯಾರ್ಥಿಗಳ ಗುಂಪು, ಸಾಮಾನ್ಯ ಶ್ರೇಣಿ ಹಾಗೂ ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳ ಪ್ರತ್ಯೇಕ ಗುಂಪು ರಚಿಸಲಾಗಿತ್ತು. ಕ್ರಮವಾಗಿ ಮೊದಲ ಗುಂಪಿಗೆ ಕಲಿಕೆಗೆ ಬೇಕಾದ ಸಾಮಗ್ರಿ ಒದಗಿಸಲಾಗುತಿತ್ತು. ಎರಡನೇ ಗುಂಪಿಗೆ ಮಾರ್ಗದರ್ಶನ ಜತೆಗೆ ಕಲಿಕಾ ಸಾಮಗ್ರಿ ನೀಡಲಾಗುತಿತ್ತು. ಮೂರು ಮತ್ತು ನಾಲ್ಕನೇ ಗುಂಪಿನ ವಿದ್ಯಾರ್ಥಿಗಳು ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಪಡೆಯಲು ಅಗತ್ಯವಿರುವ ಮೂಲಾಂಶಗಳನ್ನು ಶಿಕ್ಷಕರು ನಿತ್ಯ ಕಲಿಸುತ್ತಿದ್ದರು. ಗಣಿತ, ವಿಜ್ಞಾನ, ಇಂಗ್ಲಿಷ್ ವಿಷಯದಲ್ಲಿ ಅವರನ್ನು ವಿಶೇಷವಾಗಿ ತಿದ್ದಲಾಗುತ್ತಿತ್ತು ಎಂದು ಮುಖ್ಯಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ.
ಸ್ಮಾರ್ಟ್ ಕ್ಲಾಸ್
ನಮ್ಮಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಯ ಜತೆಗೆ ಸ್ಮಾರ್ಟ್ ಕ್ಲಾಸ್ ಕೂಡ ನೀಡಲಾಗುವುದು. ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಸ್ಮಾರ್ಟ್ ಕ್ಲಾಸ್‌ಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಗುತ್ತಿದೆ. –ನಿರ್ಮಲಾ ಬಿ., ಮುಖ್ಯಶಿಕ್ಷಕಿ, ಒಳಕಾಡು ಸರಕಾರಿ ಪ್ರೌಢಶಾಲೆ ಉಡುಪಿ
ಬೇಕಾದ ಎಲ್ಲ ತರಬೇತಿ
ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿಜ್ಞಾನ ಹಾಗೂ ಗಣಿತ ತರಗತಿಗಳನ್ನು ನೀಡುವ ಜತೆಗೆ ಶಿಕ್ಷಕರೇ ಟ್ಯೂಷನ್ ನೀಡುವ (ರಜಾ ದಿನ ಹಾಗೂ ತರಗತಿಯ ಅನಂತರ ವಿಶೇಷ ತರಗತಿ) ಮೂಲಕ ಎಸೆಸೆಲ್ಸಿ ಮಕ್ಕಳಿಗೆ ಬೇಕಾದ ಎಲ್ಲ ತರಬೇತಿಯನ್ನು ನೀಡಲಾಗುತ್ತದೆ. –ಅಶೋಕ್ ವರ್ಣೇಕರ್, ಮುಖ್ಯಶಿಕ್ಷಕರು, ಸರಕಾರಿ ಪ್ರೌಢಶಾಲೆ ಕಾಳಾವರ
ವಿದ್ಯಾರ್ಥಿ ದತ್ತು
ಪ್ರತೀ ವಿದ್ಯಾರ್ಥಿಯ ಮೇಲೂ ನಿಗಾ ವಹಿಸಲಾಗುತ್ತದೆ. ವಿದ್ಯಾರ್ಥಿಗಳ ಗುಂಪನ್ನು ರಚಿಸಿ ಬೋಧಿಸಲಾಗುವುದು. ಪ್ರತೀ ಶಿಕ್ಷಕರಿಗೂ ತಲಾ ಐದು ವಿದ್ಯಾರ್ಥಿಗಳನ್ನು ದತ್ತು ನೀಡಿ, ಆ ಮೂಲಕ ಎಸೆಸೆಲ್ಸಿಯಲ್ಲಿ ಉತ್ತಮ ಸಾಧನೆಗೆ ಕಾರಣವಾಗಿದೆ. –ಜಯಲಕ್ಷ್ಮೀ, ಹಿರಿಯ ಸಹಾಯಕ ಶಿಕ್ಷಕಿ, ಉಡುಪಿ ಸರಕಾರಿ ಬಾಲಕಿಯರ ಪಿಯು ಕಾಲೇಜು, (ಪ್ರೌಢಶಾಲಾ ವಿಭಾಗ)