Advertisement

ಎಸೆಸೆಲ್ಸಿ ಪರೀಕ್ಷೆ: ವಿದ್ಯಾರ್ಥಿಗಳೇ ಸವಾಲನ್ನು ಧೈರ್ಯದಿಂದ ಎದುರಿಸಿ

02:39 AM Jul 05, 2021 | Team Udayavani |

ಕೊರೊನಾ ಮಹಾಮಾರಿಯಿಂದಾಗಿ 2020- 21ನೇ ಸಾಲಿನಲ್ಲಿ ಹತ್ತನೇ ತರಗತಿಯ ಭೌತಿಕ ಪಾಠಗಳು ನಿಯಮಿತವಾಗಿ ನಡೆದಿರಲಿಲ್ಲ. ಶೇ. 30ರಷ್ಟು ಪಠ್ಯವನ್ನು ಪರೀûಾ ದೃಷ್ಟಿಯಿಂದ ಕೈಬಿಟ್ಟು ವಿನಾಯಿತಿಯನ್ನು ನೀಡಲಾಗಿತ್ತು. ಜುಲೈ ಬಳಿಕ ಆನ್‌ಲೈನ್‌, ವಿದ್ಯಾಗಮ ಮುಂತಾದ ಕ್ರಮದಲ್ಲಿ ಕುಂಟುತ್ತಾ ಸಾಗಿದ ಪಾಠಗಳು ಮುಂದೆ ಜನವರಿಯಲ್ಲಿ ಭೌತಿಕ ತರಗತಿಗಳು ಆರಂಭಗೊಂಡಿದ್ದವು. ಜೂನ್‌ 21ರಿಂದ ಪಬ್ಲಿಕ್‌ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟಗೊಂಡು ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯುತ್ತಿದ್ದವು. ಹಠಾತ್ತನೇ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡು ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಸರಕಾರ ಹತ್ತನೇ ತರಗತಿ ಪಬ್ಲಿಕ್‌ ಪರೀಕ್ಷೆಗಳನ್ನು ಮುಂದೂಡಿ ಆದೇಶಿಸಿತ್ತು. ಇದೀಗ ಸಂಕ್ಷಿಪ್ತ ರೂಪದಲ್ಲಿ ಅಂದರೆ ಎರಡು ದಿನಗಳಲ್ಲಿ ಆರು ವಿಷಯಗಳ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿ ವೇಳಾಪಟ್ಟಿಯನ್ನು ಪ್ರಕಟಿಸಿದೆ.

Advertisement

2019-2020ನೇ ಸಾಲಿನಲ್ಲಿ ಕೊರೊನಾ ಮಹಾ ಮಾರಿಯ ಮೊದಲ ಅಲೆಯ ನಡುವೆಯೇ ನಡೆದ ಎಸೆಸೆಲ್ಸಿ ಪರೀಕ್ಷೆಗಳು ತುಂಬ ಶಿಸ್ತುಬದ್ಧವಾಗಿ ನಡೆದು ಇಡೀ ರಾಷ್ಟ್ರವೇ ರಾಜ್ಯದ ಸಾಧನೆಗೆ ಮೆಚ್ಚು ಗೆಯನ್ನು ವ್ಯಕ್ತಪಡಿಸಿತ್ತು. ಈ ವರ್ಷ ಬದಲಾದ ಸನ್ನಿ ವೇಶದಲ್ಲಿ ರಾಷ್ಟ್ರೀಯ ಹಂತದಲ್ಲಿ ಸಿ.ಬಿ.ಎಸ್‌.ಇ./ ಐ.ಸಿ.ಎಸ್‌.ಇ. ಮಂಡಳಿಗಳು, ಹೆಚ್ಚಿನೆಲ್ಲ ರಾಜ್ಯಗಳು ಹತ್ತನೇ ತರಗತಿ ಪಬ್ಲಿಕ್‌ ಪರೀಕ್ಷೆಗಳನ್ನು ರದ್ದುಗೊಳಿಸಿವೆ. ಆದರೆ ರಾಜ್ಯ ಸರಕಾರ ಹೊಸ ಮಾದರಿಯಲ್ಲಿ ಪರೀಕ್ಷೆಯನ್ನು ನಡೆಸುವ ನಿರ್ಧಾರ ಕೈಗೊಂಡಿದೆ.

ರಾಜ್ಯ ಪಠ್ಯಕ್ರಮದ ಕರ್ನಾಟಕದ ವಿದ್ಯಾರ್ಥಿಗಳಿಗೆ 2019-2020ನೇ ಸಾಲಿನಲ್ಲಿ 9ನೇ ತರಗತಿ ವಾರ್ಷಿಕ ಪರೀಕ್ಷೆಗಳು ನಡೆದಿರಲಿಲ್ಲ. ಆದುದರಿಂದ ಆ ಅಂಕ ಗಳನ್ನು ಪರಿಗಣಿಸುವ ಸಾಧ್ಯತೆಗಳು ಇರಲಿಲ್ಲ. ಬೇರೆ ಯಾವುದೇ ಮಾನದಂಡಗಳ ಮೂಲಕ ಫ‌ಲಿತಾಂಶ ನೀಡುವುದು ಸಾಧ್ಯವಿಲ್ಲ ಎಂದಾದ ಬಳಿಕ ಎರಡು ದಿನಗಳಲ್ಲಿ ಆರು ಪತ್ರಿಕೆಗಳ ಪರೀಕ್ಷೆಯನ್ನು ನಡೆಸುವ ವಿನೂತನ ವಿಧಾನವನ್ನು ಅಳವಡಿಸುವ ಚಿಂತನೆಗಳು ಕಾರ್ಯರೂಪಕ್ಕೆ ಬಂದಿದೆ. ಎಲ್ಲ ವಿದ್ಯಾರ್ಥಿಗಳು ಪಾಸ್‌ ಎಂದು ಪರೀಕ್ಷೆಗೆ ಮುಂಚಿತವಾಗಿಯೇ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಅಷ್ಟರಮಟ್ಟಿಗೆ ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆಗೊಳಿಸಲಾಗಿದೆ. ಆದುದರಿಂದ ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆಯನ್ನು ಎದುರಿಸಲು ಸಿದ್ಧತೆಗಳನ್ನು ನಡೆಸಲು ಸಾಧ್ಯವಾಗಿದೆ. ಮುಂದಿನ 15 ದಿನಗಳ ಕಾಲ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಪರೀಕ್ಷಾ ಸಿದ್ಧತೆಗಳನ್ನು ನಡೆಸಬೇಕಾಗಿದೆ.

ಈ ಬಾರಿಯ ಪರೀಕ್ಷೆಗಳಲ್ಲಿ ಬಹು ಆಯ್ಕೆ ರೂಪದ ಪ್ರಶ್ನೆಗಳನ್ನು ಮಾತ್ರ ಕೇಳಲಾಗುತ್ತದೆ. ಉತ್ತರಗಳನ್ನು ಒ.ಎಂ.ಆರ್‌.ನಲ್ಲಿ ಶೇಡ್‌ ಮಾಡುವ ಮೂಲಕವೇ ನಮೂದಿಸಬೇಕಾಗಿದೆ. ಇದರಿಂದಾಗಿ ಪರೀಕ್ಷೆ ಮುಗಿಸಿದ ಒಂದೆರಡು ವಾರಗಳಲ್ಲಿ ಫ‌ಲಿತಾಂಶವನ್ನು ವಸ್ತುನಿಷ್ಠವಾಗಿ ನೀಡುವುದು ಸಾಧ್ಯವಾಗುತ್ತದೆ. ಮೌಲ್ಯಮಾಪಕರು ತಪ್ಪಾಗಿ ಅಂಕ ಕಳೆಯುವ ಸಾಧ್ಯತೆಗಳೇ ಇಲ್ಲದಿರುವುದರಿಂದ ಮರು ಮೌಲ್ಯಮಾಪನ, ಛಾಯಾಪ್ರತಿ ತರಿಸುವ ಸಂದರ್ಭಗಳು ಬರುವುದಿಲ್ಲ ಎನ್ನುವುದನ್ನು ಗಮನಿಸಬೇಕಿದೆ.

ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಲವಾರು ಪರೀಕ್ಷೆಗಳು ಬಹು ಆಯ್ಕೆಯ ಪ್ರಶ್ನೋತ್ತರಗಳನ್ನು ಅಳವಡಿಸಿಕೊಂಡು ನಡೆಯುತ್ತವೆ. ಕೆಲವಾದರೂ ವಿದ್ಯಾರ್ಥಿಗಳು ಈ ಹಿಂದೆ ನವೋದಯ ಶಾಲೆಗಳ ಪ್ರವೇಶ ಪರೀಕ್ಷೆ, ಎನ್‌.ಎಂ.ಎಂ.ಎಸ್‌./ಎನ್‌.ಡಿ.ಎಸ್‌.ಇ. ಪರೀಕ್ಷೆಗಳಲ್ಲಿ ಈ ಮಾದರಿಯಲ್ಲಿಯೇ ಉತ್ತರಿಸಿ ಅನುಭವ ಗಳಿಸಿರುವ ಸಾಧ್ಯತೆಗಳಿವೆ. ಜುಲೈ 19 ರಂದು ನಡೆಯುವ ಎಸೆಸೆಲ್ಸಿ ಕೋರ್‌ ವಿಷಯಗಳ ಪರೀಕ್ಷೆಯಲ್ಲಿ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯದ ಪರೀಕ್ಷೆಗಳು ಮತ್ತು ಜುಲೈ 22 ರಂದು ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ. ಪ್ರತೀ ದಿನ ಮೂರು ವಿಷಯಗಳಿಗೆ ತಲಾ 40 ಅಂಕಗಳಂತೆ ಒಟ್ಟು 120 ಅಂಕಗಳಿಗಾಗಿ 120 ಪ್ರಶ್ನೆಗಳಿಗೆ ಉತ್ತರಿಸುವ ಸವಾಲು ವಿದ್ಯಾರ್ಥಿಗಳಿಗೆ ಎದುರಾಗಿದೆ. ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸುವಾಗ ಪ್ರಶ್ನೆಗಳನ್ನು ಪೂರ್ಣವಾಗಿ, ನಿಧಾನವಾಗಿ ಓದಿಕೊಳ್ಳುವುದು ಮೊದಲನೇ ಕೆಲಸ. ಖಚಿತವಾಗಿ ಉತ್ತರ ಗೊತ್ತಿರುವ ಪ್ರಶ್ನೆಗಳ ಉತ್ತರವನ್ನು ಗುರುತಿಸುತ್ತಾ ಮುಂದೆ ಸಾಗುವುದು, ಉತ್ತರಿಸುವಲ್ಲಿ ಗೊಂದಲ ಉಂಟಾದ ಪ್ರಶ್ನೆಗಳನ್ನು ಎರಡನೇ ಸುತ್ತಿನಲ್ಲಿ ಉತ್ತರಿಸುವುದು ಹಾಗೂ ತುಂಬಾ ಸಂಕೀರ್ಣವೆಂದು, ಬಹಳ ಸಮಯವನ್ನು ನಿರೀಕ್ಷಿಸುವ ಪ್ರಶ್ನೆಗಳನ್ನು ಅಂತಿಮ ಸುತ್ತಿನಲ್ಲಿ ಉತ್ತರಿ ಸುವುದು ಒಳ್ಳೆಯದು. ಮೂರು ವಿಷ‌ಯಗಳ ಪ್ರಶ್ನೆ ಪತ್ರಿಕೆಗಳಿಗೆ ಸಮಾನ ಸಮಯ (ತಲಾ ಒಂದು ಗಂಟೆ)ವನ್ನು ನಿಗದಿಪಡಿಸಿ ಉತ್ತರಿಸುವ ಸಿದ್ಧತೆಯನ್ನು ವಿದ್ಯಾರ್ಥಿಗಳು ಮಾಡಿಕೊಳ್ಳುವುದು ಉತ್ತಮ.

Advertisement

ಇನ್ನು ವಿದ್ಯಾರ್ಥಿಗಳು ಈ ವಾರದಲ್ಲಿಯೇ ಪ್ರವೇಶ ಪತ್ರಗಳನ್ನು ಮುಖ್ಯ ಶಿಕ್ಷಕರಿಂದ ಪಡೆದುಕೊಳ್ಳುವುದು ಒಳ್ಳೆಯದು. ಪರೀಕ್ಷೆಯ ದಿನ ಒಂದು ಗಂಟೆ ಮುಂಚಿತ ವಾಗಿಯೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿರುವುದು. ಪೆನ್‌, ಪ್ರವೇಶ ಪತ್ರ, ಮಾಸ್ಕ್ ಧಾರಣೆ, ಸ್ಯಾನಿಟೈಸರ್‌ ಬಳಕೆ, ಕುಡಿಯಲು ನೀರು, ತಿನ್ನಲು ತಿಂಡಿ (ಅಗತ್ಯವಿದ್ದಲ್ಲಿ) ತೆಗೆದುಕೊಂಡು ಹೋಗುವುದು, ವೈಯಕ್ತಿಕ ಅಂತರವನ್ನು ಸದಾ ಕಾಲ ಕಾಪಾಡುವುದು, ಸಮಾಧಾನ ಚಿತ್ತದಿಂದ ಪರೀಕ್ಷೆಗಳನ್ನು ಎದುರಿಸುವುದು ಅತ್ಯಗತ್ಯವಾಗಿದೆ.
ಯಾವುದೇ ಕಾರಣದಿಂದ ಈ ಬಾರಿ ಪರೀಕ್ಷೆ ಬರೆಯು ವುದು ಸಾಧ್ಯವಿಲ್ಲ ಎಂದಾದಲ್ಲಿ ಮುಂದೆ ಒಂದೆರಡು ತಿಂಗಳಿನಲ್ಲಿ ಮತ್ತೆ ನಡೆಸಲಾಗುವ ಪರೀಕ್ಷೆಯನ್ನು ಪ್ರಥಮ ಅವಕಾಶ ಎಂದು ಪರಿಗಣಿಸಿ ಪರೀಕ್ಷೆ ಬರೆಯುವ ಅವಕಾಶ ಇದೆೆ ಎಂಬುದನ್ನು ವಿದ್ಯಾರ್ಥಿಗಳು ಗಮನಿಸಬೇಕು.

ಪರೀಕ್ಷಾ ಕೇಂದ್ರಗಳ ಸ್ಯಾನಿಟೈಸೇಶನ್‌ ನಡೆಸಲಾಗುತ್ತದೆ. ಒಂದು ಬೆಂಚಿನಲ್ಲಿ ಓರ್ವ ವಿದ್ಯಾರ್ಥಿಗೆ ಮಾತ್ರ ಆಸನ ವ್ಯವಸ್ಥೆ. ಪ್ರತೀ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ತಪಾಸಣ ಕೌಂಟರ್‌, ಥರ್ಮಲ್‌ ಸ್ಕಾನರ್‌, ಪಲ್ಸ್‌ ಆಕ್ಸಿಮೀಟರ್‌ ಲಭ್ಯ ಇರುತ್ತದೆ. ಕೆಮ್ಮು/ನೆಗಡಿ ಜ್ವರ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು, ಕೋವಿಡ್‌ ಸೋಂಕಿತರಾಗಿದ್ದಲ್ಲಿ ಕೋವಿಡ್‌ಕೇರ್‌ ಸೆಂಟರ್‌ನಲ್ಲಿಯೇ ಪರೀಕ್ಷೆ ಬರೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಸುರಕ್ಷೆಯನ್ನು ಖಾತರಿ ಪಡಿಸಿಕೊಂಡೇ ಈ ಪರೀಕ್ಷೆಯನ್ನು ನಡೆಸುವ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ವಿದ್ಯಾರ್ಥಿಗಳಾಗಲೀ ಮತ್ತವರ ಹೆತ್ತವರಾಗಲೀ ಭಯ ಪಡುವ ಅಗತ್ಯವಿಲ್ಲ.

ಹೌದು, ಜೀವನದಲ್ಲಿ ಅನಿರೀಕ್ಷಿತ ಸಂಗತಿಗಳು ಧುತ್ತನೇ ಎದುರಾಗುತ್ತವೆ. ಆ ಸಂದರ್ಭಗಳನ್ನು ತುಂಬ ದೈರ್ಯದಿಂದ ಎದುರಿಸಬೇಕು. ಅಂತಹುದೇ ಒಂದು ಸನ್ನಿವೇಶ ಇದೀಗ ಎಸೆಸೆಲ್ಸಿ ವಿದ್ಯಾರ್ಥಿಗಳೆದುರಿಗೆ ಬಂದಿದೆ. ಶಿಕ್ಷಕರು, ಹೆತ್ತವರ ನೆರವು ಸದಾ ಇರುವುದರಿಂದ ವಿದ್ಯಾರ್ಥಿಗಳು ಈ ಸವಾಲನ್ನು ಸಮರ್ಥವಾಗಿ ಎದುರಿಸಿ ಗೆಲ್ಲಬೇಕಿದೆ. ಯಶಸ್ಸಿಗೆ ಅಡ್ಡದಾರಿಗಳು ಇಲ್ಲ (No shortcut for success)ಎನ್ನುತ್ತಾರೆ. ನಿರಂತರ ಪರಿಶ್ರಮ, ಧನಾತ್ಮಕ ಚಿಂತನೆಗಳಿಂದ ಭವ್ಯ ಭವಿಷ್ಯಕ್ಕೆ ಮುನ್ನುಡಿ ಬರೆಯಲು ಈ ಪರೀಕ್ಷೆಗಳು ದಾರಿದೀಪವಾಗಲಿವೆ.

– ಡಾ| ಅಶೋಕ ಕಾಮತ್‌, ಉಪಪ್ರಾಂಶುಪಾಲ, ಡಯಟ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next