Advertisement

Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ

02:32 AM Jan 05, 2025 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಶೀತಗಾಳಿಯ ಜತೆಗೆ ಗಡಗಡ ನಡುಗುವ ಚಳಿಯೂ ತೀವ್ರಗೊಳ್ಳುತ್ತಿದೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಮುಂದಿನ 2-3 ದಿನಗಳಲ್ಲಿ ಕನಿಷ್ಠ ಉಷ್ಣಾಂಶ 3 ಡಿಗ್ರಿಯಷ್ಟು ಇಳಿಕೆಯಾಗಲಿದ್ದು, ಅತ್ಯಧಿಕ ಚಳಿ ಉಂಟಾಗಲಿದೆ.

Advertisement

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ 2 ಡಿ.ಸೆ. ತಾಪಮಾನ ತಗ್ಗಲಿದೆ. ಬೆಂಗಳೂರಿನಲ್ಲಿ 11 ಡಿ.ಸೆ.ಗೆ ಇಳಿಕೆಯಾಗುವ ಲಕ್ಷಣ ಗೋಚರಿಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಒಂದು ವೇಳೆ 11 ಡಿ.ಸೆ. ಕನಿಷ್ಠ ತಾಪಮಾನ ದಾಖಲಾದರೆ ಕಳೆದ 12 ವರ್ಷಗಳಲ್ಲೇ ರಾಜ್ಯ ರಾಜಧಾನಿಯಲ್ಲಿ ದಾಖಲಾಗಿರುವ ದಾಖಲೆಯ ಅತಿ ಕಡಿಮೆ ತಾಪಮಾನವಾಗಲಿದೆ. 2012ರ ಜನವರಿ 16ರಂದು ಬೆಂಗಳೂರಿನಲ್ಲಿ 12 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.

ಮುಂದಿನ ವಾರದೊಳಗೆ ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ 2 ಡಿ.ಸೆ ಕನಿಷ್ಠ ಉಷ್ಣಾಂಶ ಇಳಿಕೆಯಾಗುವ ಸಾಧ್ಯತೆಗಳಿವೆ. ಉತ್ತರ ಒಳನಾಡಿನ ವಿಜಯಪುರದಲ್ಲಿ ಶನಿವಾರ 9 ಡಿ.ಸೆ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಮುಂದಿನ 2 ದಿನಗಳಲ್ಲಿ ಈ ಭಾಗಗಳಲ್ಲಿ ಇದರ ಪ್ರಮಾಣ 7ರಿಂದ 8 ಡಿ.ಸೆ.ಗೆ ಇಳಿಕೆಯಾಗಲಿದೆ.

ರಾಜ್ಯದಲ್ಲಿ ಏಕಾಏಕಿ ಚಳಿ ಏಕೆ?
ಉತ್ತರ ಭಾರತದಿಂದ ಗಾಳಿ ಬೀಸಲು ಪ್ರಾರಂಭವಾದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ಚಳಿಯ ವಾತಾವರಣ ಉಂಟಾಗಿದೆ. ಇದೇ ಕಾರಣದಿಂದ ಉತ್ತರ ಒಳನಾಡಿನಲ್ಲೂ ಶೀತಗಾಳಿ ಬೀಸಲು ಪ್ರಾರಂಭವಾಗಿದೆ. ಜತೆಗೆ ಮೋಡ ಕವಿದ ವಾತಾವರಣ‌ ಇಲ್ಲದೇ ಶುಭ್ರ ಆಕಾಶವಿದೆ. ಹೀಗಾಗಿ ಕರಾವಳಿ ಕರ್ನಾಟಕ ಹೊರತುಪಡಿಸಿ ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಜನವರಿ ಅಂತ್ಯದವರೆಗೂ ಈ ವರ್ಷ ವಾಡಿಕೆಗಿಂತ ಹೆಚ್ಚಿನ ಚಳಿ ನಿರೀಕ್ಷೆ ಮಾಡಬಹುದು. ಈ ಭಾಗದ ಜನರು ಮನೆಯಿಂದ ಹೊರ ಹೋಗುವ ವೇಳೆ ಸೂಕ್ತ ಮುನ್ನೆಚ್ಚರಿಕೆ ವಹಿಸಿದರೆ ಉತ್ತಮ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

*ಶನಿವಾರ ಎಲ್ಲೆಲ್ಲಿ ಎಷ್ಟೆಷ್ಟು ಕನಿಷ್ಠ ತಾಪಮಾನ ದಾಖಲು ?
ಜಿಲ್ಲೆ- ಕನಿಷ್ಠ ತಾಪಮಾನ (ಡಿ.ಸೆ.ಗಳಲ್ಲಿ )
ವಿಜಯಪುರ- 9
ಬೆಂಗಳೂರು-14
ಬೆಳಗಾವಿ- 14.5
ಬೀದರ್‌-11.5
ಬಾಗಲಕೋಟೆ- 11.8
ಧಾರವಾಡ- 10.6
ಕಲಬುರಗಿ-13.6
ಹಾವೇರಿ-11
ಗದಗ- 12,
ಬಳ್ಳಾರಿ- 11.1
ಚಿಕ್ಕಮಗಳೂರು- 11.2
ಚಿತ್ರದುರ್ಗ- 14.1
ದಾವಣಗೆರೆ-11
ಹಾಸನ-10.3
ಮೈಸೂರು-14.9
ಶಿವಮೊಗ್ಗ- 12.8
ರಾಯಚೂರು-12,
ಮಂಗಳೂರು-20.5
ಶಿವಮೊಗ್ಗ-12.8
ಚಾಮರಾಜನಗರ-11.1
ಚಿತ್ರದುರ್ಗ -14.1
ಹೊನ್ನಾವರ-19.9

Advertisement

‘ಕರ್ನಾಟಕದ ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ವಾರದೊಳಗೆ ಚಳಿ ಹೆಚ್ಚಾಗಲಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲೂ 2 ಡಿ.ಸೆ. ತಾಪಮಾನ ಕುಸಿದು ಸದ್ಯ ಇರುವ ವಾತಾವರಣಕ್ಕಿಂತ ಹೆಚ್ಚಿನ ಚಳಿ ನಿರೀಕ್ಷಿಸಬಹುದು.’
– ಸಿ.ಎಸ್‌. ಪಾಟೀಲ್‌, ನಿರ್ದೇಶಕ, ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next