Advertisement
ನಗರದ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಒಎಂಆರ್ ಶೀಟ್ ಸಂಖ್ಯೆ-ಅಭ್ಯರ್ಥಿಗಳ ನೋಂದಣಿ ಸಂಖ್ಯೆ, ಓಎಂಆರ್ ಶೀಟ್-ಪ್ರಶ್ನೆ ಪತ್ರಿಕೆ ನಡುವೆ ತಾಳೆಯಾಗದೆ ಪರೀಕ್ಷಾರ್ಥಿಗಳು ಗೊಂದಲಕ್ಕೆ ಒಳಗಾದರು. ಇದನ್ನು ಪ್ರತಿಭಟಿಸಿ ಕೆಲ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿಲ್ಲ. ಅಲ್ಲದೇ, ಮರು ಪರೀಕ್ಷೆಯಲ್ಲೂ ಇಂತಹ ಲೋಪಗಳು ಕಾಣಿಸಿಕೊಂಡ ಪರಿಣಾಮ ಇಡೀ ವ್ಯವಸ್ಥೆ ಬಗ್ಗೆಯೇ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದರು.
Related Articles
Advertisement
ಪರೀಕ್ಷಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಕೆಪಿಎಸ್ಸಿ ಅಧಿಕಾರಿಗಳೊಂದಿಗೆ ಮಾತನಾಡಿದರು. ಬಳಿಕ ಅಭ್ಯರ್ಥಿಗಳಿಗೆ ತಾವೇ ತಮ್ಮ ನೋಂದಣಿ ಸಂಖ್ಯೆ, ಓಎಂಆರ್ ಶೀಟ್ ಸಂಖ್ಯೆ ಮತ್ತು ಸರಣಿಯನ್ನು ಬರೆಯುವಂತೆ ತಿಳಿಸಿದರು. ಅಲ್ಲದೇ, ಈ ಗೊಂದಲದಿಂದ ಪರೀಕ್ಷೆಗೆ ವಿಳಂಬವಾದ ಸಮಯ ಸರಿದೂಗಿಸಲು ಹೆಚ್ಚುವರಿ ಸಮಯ ಕೊಡುವುದಾಗಿಯೂ ಭರವಸೆ ನೀಡಿದರು.
ಈ ವೇಳೆ, ಕೆಲ ಪರೀಕ್ಷಾರ್ಥಿಗಳು ನಮ್ಮ ಕೈಯಿಂದಲೇ ನೋಂದಣಿ ಸಂಖ್ಯೆ, ಓಎಂಆರ್ ಶೀಟ್ ಸಂಖ್ಯೆ ನಮೂದಿಸಿದರೆ, ಇದಕ್ಕೆ ಯಾವ ಮಾನ್ಯತೆ ಇರುತ್ತದೆ?. ಅದನ್ನು ಹೇಗೆ ಪರಿಗಣಿಸುತ್ತಾರೆ ಎಂದು ಪ್ರಶ್ನಿಸಿ ಪರೀಕ್ಷೆಯನ್ನು ಬರೆಯಲಿಲ್ಲ. ಜತೆಗೆ ಇಂತಹ ಗೊಂದಲದ ಪರೀಕ್ಷೆಗೆ ಕುಳಿತರೆ, ಪರೀಕ್ಷೆಯ ಒಂದು ಅವಕಾಶವೂ ತಪ್ಪಿದಂತಾಗುತ್ತದೆ ಎಂದು ಪರೀಕ್ಷೆ ಬರೆಯದೆ ಕೊಠಡಿಯಿಂದ ಬರಬೇಕಾಯಿತು ಎಂದು ಅಭ್ಯರ್ಥಿಗಳು ತಮ್ಮ ಆಳಲು ತೋಡಿಕೊಂಡರು. ಇನ್ನು, ಪರೀಕ್ಷೆ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.
ಪರೀಕ್ಷೆಗೆ 6,677 ಅಭ್ಯರ್ಥಿಗಳು ಗೈರು:ಜಿಲ್ಲೆಯಲ್ಲಿ 32 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 12,741 ಅಭ್ಯರ್ಥಿಗಳು ಪರೀಕ್ಷೆಯ ಬರಬೇಕಾಗಿತ್ತು. ಆದರೆ, ಮೊದಲ ಅವಧಿ ಪರೀಕ್ಷೆಗೆ 6,064 ಅಭ್ಯರ್ಥಿಗಳು ಹಾಜರಾಗಿ, 6,677 ಅಭ್ಯರ್ಥಿಗಳು ಗೈರಾಗಿದ್ದರು. ಎರಡನೇ ಅವಧಿಯ ಪರೀಕ್ಷೆಗೆ 6,078 ಅಭ್ಯರ್ಥಿಗಳು ಕುಳಿತಿದ್ದರು. ಉಳಿದ 6,663 ಪರೀಕ್ಷಾರ್ಥಿಗಳು ಗೈರಾಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಅರ್ಧಕ್ಕಿಂತ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಿಂದ ದೂರ ಉಳಿದಿರುವುದು ಸ್ಪಷ್ಟವಾಗಿದೆ. ಹೆಚ್ಚಿನ ಗೊಂದಲ ಸೃಷ್ಟಿಯಾದ ವಿಕಾಸ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ 240 ಅಭ್ಯರ್ಥಿಗಳ ಪೈಕಿ 48 ಅಭ್ಯರ್ಥಿಗಳು ಮಾತ್ರವೇ ಪರೀಕ್ಷೆ ಬರೆದಿದ್ದಾರೆ. ಮಧ್ಯಮ ವರ್ಗ ಜನರಿಗೆ ಸರ್ಕಾರಿ ನೌಕರಿ ಪಡೆಯಬೇಕು ಎಂಬ ಆಸೆ ಇರುತ್ತದೆ. ಆದರೆ, ಪತ್ರಿ ಪರೀಕ್ಷೆಗಳಲ್ಲೂ ಇಂತಹ ಗೊಂದಲಗಳನ್ನು ಸೃಷ್ಟಿಸಿ ನಮ್ಮ ಆತ್ಮವಿಶ್ವಾಸವನ್ನೇ ಕುಗ್ಗುವಂತೆ ಮಾಡಲಾಗುತ್ತದೆ. ಈ ಹಿಂದೆ ರಾಯಚೂರು ಕೇಂದ್ರದಲ್ಲಿ ಪರೀಕ್ಷೆ ಬರೆದಾಗಲೂ ಲೋಪಗಳು ಆಗಿದ್ದವು. ಈಗ ಮರು ಪರೀಕ್ಷೆಯಲ್ಲೂ ಗೊಂದಲ ಸೃಷ್ಟಿ ಮಾಡಿ ಪರೀಕ್ಷೆಯಿಂದ ದೂರ ಉಳಿಯುಂತೆ ಮಾಡಲಾಗಿದೆ ಎಂದು ಹರಪನಹಳ್ಳಿ ಮೂಲದ ಪರೀಕ್ಷಾರ್ಥಿ ನೊಂದುಕೊಂಡರು. ಕೆಪಿಎಸ್ಸಿ ಪರೀಕ್ಷೆಯ 4 ಕೇಂದ್ರಗಳಲ್ಲಿ ಗೊಂದಲ ಉಂಟಾಗಿದೆ. ಒಎಂಆರ್ ಶೀಟ್ ಸಂಖ್ಯೆ, ಅಭ್ಯರ್ಥಿಗಳ ನೋಂದಣಿ ಸಂಖ್ಯೆ ವ್ಯತ್ಯಾಸ ಕಂಡುಬಂದಿದೆ. ಕೂಡಲೇ ಕೆಪಿಎಸ್ಸಿ ಅಧಿಕಾರಿಗಳನ್ನು ಸಂಪರ್ಕಿಸಿ, ನೋಂದಣಿ ಸಂಖ್ಯೆ ನಮೂದಿಸುವಂತೆ ಅಭ್ಯರ್ಥಿಗಳಿಗೆ ನಿರ್ದೇಶನ ನೀಡಲಾಗಿತ್ತು. ಇದನ್ನು ವಿಶೇಷ ಪ್ರಕರಣ ಎಂದು ಕೆಪಿಎಸ್ಸಿ ಪರಿಗಣಿಸಲಿದೆ ಎಂದು ಜಿಪಂ ಸಿಇಒ ರಿಷಿ ಆನಂದ ತಿಳಿಸಿದರು.