ಕೋಲಾರ: ಮೀಸಲಾತಿ ಹೋರಾ ಟಕ್ಕೆ ಸ್ವಾಮೀಜಿಗಳು ಕರೆ ನೀಡಿದಾಗ ಬರಲು ಒಕ್ಕಲಿಗರು ಸಿದ್ಧರಿರಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾ ನಂದನಾಥ ಸ್ವಾಮೀಜಿ ಕರೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಚಾರವಾಗಿ 1993 ರಲ್ಲಿ ದೊಡ್ಡ ಚಳವಳಿ ನಡೆದಿತ್ತು. ಅಂಥ ಮತ್ತೊಂದು ಹೋರಾಟದ ಅಗತ್ಯ ಇರುವ ಬಗ್ಗೆ ಸಮುದಾಯದ ಮುಖಂಡರು ಮಾತನಾ ಡುತ್ತಿದ್ದಾರೆ. ಜತೆಗೆ ಬೆಂಗಳೂರು ಸುತ್ತಮುತ್ತಲಿನ ಭಾಗದಲ್ಲಿ ಒಕ್ಕಲಿಗರ ಭೂಮಿ ಕೈ ತಪ್ಪುತ್ತಿದೆ. ಮುಂದೆ ಹೋರಾಟ ಅನಿವಾರ್ಯ ಎಂದರು.
ಶೇ.16ರಷ್ಟು ಇರುವ ಒಕ್ಕಲಿಗರಿಗೆ ಶೇ.4 ಮೀಸಲಾತಿ ಸಾಕಾಗುವುದಿಲ್ಲ, ನಮ್ಮ ಬೇಡಿಕೆ ಕಾನೂನಿನ ಪ್ರಕಾರ ಈಡೇರದಿದ್ದರೆ ಮುಂದೆ ಧ್ವನಿ ಎತ್ತಬೇಕೆಂಬ ಆಗ್ರಹವೂ ಸಮುದಾಯದಲ್ಲಿದೆ ಎಂದರು.
ಒಟ್ಟಾರೆ ಮೀಸಲಾತಿ ಶೇ. 50 ದಾಟುವಂತಿಲ್ಲ ಎಂಬುದು ಕಾನೂನಿನ ಆಶೋತ್ತರವಾಗಿದೆ. ಆ ಮಿತಿ ದಾಟಿ ಮೀಸಲಾತಿ ನೀಡಲು ರಾಜ್ಯ ಸರಕಾರ ಕೈ ಹಾಕುವುದಾದರೆ ಒಕ್ಕಲಿಗರಿಗೂ ಶೇ.4ರಿಂದ 12ಕ್ಕೆ ಮೀಸಲಾತಿ ಹೆಚ್ಚಿಸಬೇಕೆಂಬ ಭಾವನೆಯೂ ಸಮುದಾಯದಲ್ಲಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಈಗಿನ ಜನಸಂಖ್ಯೆ ಒಂದೂವರೆ ಕೋಟಿ. ರಾಜ್ಯದ ಶೇ.60 ಆದಾಯ ಬೆಂಗಳೂರಿನಿಂದಲೇ ಬರುತ್ತದೆ. ಇದಕ್ಕೆ ಬೇಕಾದ ಪೂರಕ ಸೌಲಭ್ಯ ನಿರ್ಮಿಸಲು ಈ ಭಾಗದ ರೈತರ ಭೂಮಿ ಪಡೆಯಲಾಗಿದೆ. ಆ ಭಾಗದ ಒಕ್ಕಲಿಗರ ಪ್ರಮಾಣ ಶೇ.70ಕ್ಕೂ ಅಧಿಕವಿದೆ. ಒಕ್ಕಲಿಗರೇ ಹೆಚ್ಚಿನ ಪ್ರಮಾಣದಲ್ಲಿ ಜಮೀನು ಕಳೆದುಕೊಂಡಿದ್ದಾರೆ.
ಜಮೀನು ಕಳೆದುಕೊಂಡ ಒಕ್ಕಲಿಗರು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಕೊಳೆಗೇರಿಗಳಲ್ಲಿ ವಾಸಿಸುತ್ತಾ ಕೂಲಿ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.