Advertisement

Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ

09:32 AM Jan 05, 2025 | Team Udayavani |

ಉಡುಪಿ: ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ನೀಡುವ ಪ್ರತಿಷ್ಠಿತ ‘ಅಭಿವೃದ್ಧಿ ಪತ್ರಿಕೋದ್ಯಮ’ ಪ್ರಶಸ್ತಿಗೆ ಹಿರಿಯ ಅಂಕಣಕಾರ ಗಿರೀಶ್ ಲಿಂಗಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

ಬಾಹ್ಯಾಕಾಶ, ರಕ್ಷಣೆ, ಮತ್ತು ವಿದೇಶಾಂಗ ನೀತಿಯ ವಿಚಾರಗಳಲ್ಲಿ ಮಾಹಿತಿಪೂರ್ಣ ಲೇಖನಗಳನ್ನು ಬರೆಯುತ್ತಿರುವ ಗಿರೀಶ್ ಲಿಂಗಣ್ಣ ಅವರ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿಯ ಜೊತೆಗೆ ಒಂದು ಲಕ್ಷ ರೂ. ಗಳ ನಗದು ಬಹುಮಾನವನ್ನೂ ನೀಡಲಾಗುತ್ತದೆ.

ಆದರೆ, ಗಿರೀಶ್ ಲಿಂಗಣ್ಣ ಈ ಬಹುಮಾನದ ಮೊತ್ತವನ್ನು ಕರ್ನಾಟಕ ವೃತ್ತಿ ನಿರತ ಪತ್ರಕರ್ತರ ಸಂಘಕ್ಕೆ ಹಸ್ತಾಂತರಿಸಿ ಅದರಿಂದ ಹಿರಿಯ ಪರಮಾಣು ವಿಜ್ಞಾನಿ, ಕರ್ನಾಟಕದವರೇ ಆದ ಡಾ. ರಾಜಾ ರಾಮಣ್ಣ ಅವರ ಹೆಸರಿನಲ್ಲಿ ದತ್ತಿ ನಿಧಿಯೊಂದನ್ನು ಸ್ಥಾಪಿಸಿ, ಅದರಿಂದ ಬರುವ ಮೊತ್ತವನ್ನು ಪ್ರತಿ ವರ್ಷವೂ ವಿಜ್ಞಾನದ ಕುರಿತು ಮಾಹಿತಿಪೂರ್ಣ ಲೇಖನಗಳನ್ನು ಪ್ರಕಟಿಸುವ ಪತ್ರಕರ್ತ ಅಥವಾ ಅಂಕಣಕಾರರಿಗೆ ನೀಡಬೇಕೆಂದು ಕೆಯುಡಬ್ಲ್ಯುಜೆಗೆ ಮನವಿ ಮಾಡಿಕೊಂಡಿದ್ದರು.

ಅವರ ಮನವಿಯನ್ನು ಕರ್ನಾಟಕ ರಾಜ್ಯ ವೃತ್ತಿ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಒಪ್ಪಿಕೊಂಡು, ಪ್ರಶಂಸೆ ವ್ಯಕ್ತಪಡಿಸಿ, ದತ್ತಿ ನಿಧಿಯನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ, ಸ್ವತಃ ಪ್ರತಿಷ್ಠಿತ ಐಐಟಿ ಪದವೀಧರ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಗಿರೀಶ್ ಲಿಂಗಣ್ಣ ಅವರಿಗೆ ಪ್ರಶಸ್ತಿ ಘೋಷಿಸಿರುವುದನ್ನು ಸ್ವಾಗತಿಸಿ, ಗಿರೀಶ್ ಲಿಂಗಣ್ಣ ಅವರನ್ನು ಅಭಿನಂದಿಸಿದ್ದಾರೆ.
ಹೊಸ ಪೀಳಿಗೆಗೆ ಸ್ಫೂರ್ತಿ ನೀಡುವಲ್ಲಿ, ಸುಶಿಕ್ಷಿತರನ್ನಾಗಿಸುವಲ್ಲಿ ಬಾಹ್ಯಾಕಾಶ, ರಕ್ಷಣಾ ವ್ಯವಸ್ಥೆ ಹಾಗೂ ವಿದೇಶಾಂಗ ವ್ಯವಹಾರಗಳ ಕ್ಷೇತ್ರಗಳಲ್ಲಿ ಸಮರ್ಥವಾಗಿ ಬರವಣಿಗೆ ಮಾಡಬಲ್ಲ ಪ್ರತಿಭಾವಂತ ಲೇಖಕರ ಪಾತ್ರ ಬಹು ನಿರ್ಣಾಯಕವಾದುದು. ಅಂತಹ ಪ್ರತಿಭಾಶಾಲಿ ಲೇಖಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೃಷ್ಟಿಯಾಗಬೇಕಾದ ಅಗತ್ಯವಿದೆ. ಈ ಹಿನ್ನೆಲೆ ಒಕ್ಕಲಿಗ ಸಮುದಾಯದ ಹೆಮ್ಮೆಗೆ ಕಾರಣಕರ್ತರಾದ ಗಿರೀಶ್ ಲಿಂಗಣ್ಣನವರ ಸಾಧನೆ ಶ್ಲಾಘನೀಯವಾದುದು ಎಂದು ಸ್ವಾಮೀಜಿ ಹೇಳಿದ್ದಾರೆ.

Advertisement

ಶ್ರೀ ಮಹದೇಶ್ವರ ಬೆಟ್ಟ, ಶ್ರೀ ಸಾಲೂರು ಬೃಹನ್ಮಠದ ಶ್ರೀ ವಿದ್ವಾನ್ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳೂ ಗಿರೀಶ್ ಲಿಂಗಣ್ಣ ಅವರನ್ನು ಅಭನಂದಿಸಿದ್ದಾರೆ.

ಇಂದು ಜಗತ್ತು ವಿಜ್ಞಾನ, ತಂತ್ರಜ್ಞಾನ ಕೇಂದ್ರಿತವಾಗಿದೆ. ಬಾಹ್ಯಾಕಾಶ, ರಕ್ಷಣೆ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳು ಬಹಳ ಮುಖ್ಯ ವಿಚಾರಗಳಾಗಿದ್ದು, ಅವುಗಳ ಕುರಿತು ಜ್ಞಾನ ಹೊಂದುವುದು ಅತ್ಯಂತ ಅವಶ್ಯಕವಾಗಿದೆ. ಇಂತಹ ಮುಖ್ಯವಾದ ಕ್ಷೇತ್ರಗಳ ಕುರಿತು ಬರೆದು, ಓದುಗರಿಗೆ, ಯುವ ಜನರಿಗೆ ಜ್ಞಾನ ಹಂಚುವಂತಹ ಬರಹಗಾರರ ಅವಶ್ಯಕತೆ ಇಂದು ಬಹಳ ಹೆಚ್ಚಿದೆ ಎಂದು ಸ್ವಾಮೀಜಿ ಹೇಳಿದರು.

ಈ ನಿಟ್ಟಿನಲ್ಲಿ, ಅಂಕಣಕಾರ ಗಿರೀಶ್ ಲಿಂಗಣ್ಣ ಅವರು ಬಾಹ್ಯಾಕಾಶ, ರಕ್ಷಣೆ, ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಕುರಿತು ಬರೆಯುತ್ತಾ ಓದುಗರ ಜ್ಞಾನ ಹೆಚ್ಚಿಸುತ್ತಿದ್ದಾರೆ. ಅವರ ಬರಹ, ಕೊಡುಗೆಗಳನ್ನು ಪರಿಗಣಿಸಿ, ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಪ್ರತಿಷ್ಠಿತ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ಅವರಿಗೆ ನೀಡುತ್ತಿರುವುದು ಅವರ ಕೊಡುಗೆಗಳಿಗೆ ಸಂದ ಗೌರವವಾಗಿದೆ. ಇದಕ್ಕಾಗಿ ಗಿರೀಶ್ ಲಿಂಗಣ್ಣ ಅವರಿಗೆ ಮತ್ತು ಅವರನ್ನು ಗುರುತಿಸಿರುವುದಕ್ಕೆ ಸರ್ಕಾರವನ್ನೂ ನಾವು ಅಭಿನಂದಿಸುತ್ತೇವೆ ಎಂದರು.

ಪ್ರಶಸ್ತಿಯ ಜೊತೆಗೆ ನೀಡುವ ಮೊತ್ತವನ್ನು ಕರ್ನಾಟಕ ರಾಜ್ಯ ವೃತ್ತಿ ನಿರತ ಪತ್ರಕರ್ತರ ಸಂಘಕ್ಕೆ ನೀಡಿ, ಕರ್ನಾಟಕದ ಹೆಮ್ಮೆಯ ವಿಜ್ಞಾನಿ ಡಾ. ರಾಜಾ ರಾಮಣ್ಣನವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸುವುದಾಗಿ ಗಿರೀಶ್ ಲಿಂಗಣ್ಣ ಅವರು ನಿರ್ಧರಿಸಿರುವುದು ಶ್ಲಾಘನೀಯ ನಡೆ ಎಂದ ಅವರು, ಈ ದತ್ತಿ ನಿಧಿಯಿಂದ ವಿಜ್ಞಾನ ಬರವಣೆಗೆಯಲ್ಲಿ ತೊಡಗುವ ಬರಹಗಾರರನ್ನು ಗುರುತಿಸಿ, ಅವರಿಗೆ ಬಹುಮಾನ ನೀಡಲಾಗುತ್ತದೆ. ಇದು ವಿಜ್ಞಾನ ಬರವಣೆಗೆಯ ಕುರಿತು ಯುವ ಜನರಲ್ಲಿ ಆಸಕ್ತಿ ಮೂಡಿಸಿ, ಇನ್ನಷ್ಟು ಜನರು ವಿಜ್ಞಾನ ಬರವಣಿಗೆಯಲ್ಲಿ ಆಸಕ್ತಿ ಹೊಂದಲು ಪ್ರೇರೇಪಣೆ ನೀಡಬಹುದು. ಇದು ನಮ್ಮ ನಾಡಿನ ವಿಜ್ಞಾನಿ ಡಾ. ರಾಜಾ ರಾಮಣ್ಣನವರಿಗೆ ನೀಡುವ ಸೂಕ್ತ ಗೌರವವಾಗಿದೆ ಎಂದು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next