Advertisement

Congress ಪಂಚಮಸಾಲಿಗಳಿಗೆ “ಮೀಸಲು’ ಬಿಸಿ; ಅಧಿವೇಶನ ಸಂದರ್ಭದಲ್ಲೇ ಹೋರಾಟ ತೀವ್ರ

11:10 PM Dec 11, 2024 | Team Udayavani |

ಬೆಂಗಳೂರು: ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಈಗ ಅಕ್ಷರಶಃ ಕಾಂಗ್ರೆಸ್‌ನಲ್ಲಿ ಅದರಲ್ಲೂ ವಿಶೇಷವಾಗಿ ಅದರಲ್ಲಿರುವ ಪಂಚಮಸಾಲಿ ಸಮುದಾಯದ ಶಾಸಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

Advertisement

ಅಧಿವೇಶನ ಸಂದರ್ಭದಲ್ಲೇ ನಡೆದ ಈ ಹೋರಾಟದ ವಿಚಾರದಲ್ಲಿ ಯಾವ ನಿಲುವು ತಳೆಯುವುದು ಹಾಗೂ ಅದನ್ನು ಹೇಗೆ ಸಮರ್ಥಿಸಿಕೊಳ್ಳುವುದು ಎನ್ನುವುದೇ ಕಾಂಗ್ರೆಸ್‌ ನಾಯಕರಿಗೆ ಸವಾಲಾಗಿದೆ.

ಒಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮುದಾಯ ಬಿಜೆಪಿ ಕಡೆಗೆ ಮುಖಮಾಡಿದೆ ಎಂಬ ಬೇಸರದ ನಡುವೆಯೂ, ಪಂಚಮಸಾಲಿಗೆ ಸೇರಿದ ಬಹುತೇಕರು ಈಗಲೂ ಕೈ ಹಿಡಿದಿದ್ದಾರೆ. ಅದನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕಾಣಬಹುದು. ಪ್ರಸ್ತುತ ಕಾಂಗ್ರೆಸ್‌ನಲ್ಲಿ 12 ಜನ ಪಂಚಮಸಾಲಿ ಶಾಸಕರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರೆ, ಬಿಜೆಪಿಯಿಂದ 8 ಮಂದಿ ಮಾತ್ರ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೀಗ, ಇದೇ ಕಾಂಗ್ರೆಸ್‌ ಸರಕಾರವು 2ಎ ಮೀಸಲಾತಿ ಕೇಳಿಕೊಂಡು ಬಂದ ಪಂಚಮಸಾಲಿ ಸಮುದಾಯದ ಮೇಲೆ ಲಾಠಿ ಪ್ರಹಾರ ಮಾಡಿದೆ. ಇದೇ ಈಗ ಇಕ್ಕಟ್ಟಿಗೆ ಕಾರಣವಾಗಿದೆ. ಸರಕಾರದ ಈ ನಡೆಯನ್ನು ಕಾಂಗ್ರೆಸ್‌ನ ಪಂಚಮಸಾಲಿ ಶಾಸಕರು ಸಮರ್ಥಿಸಿಕೊಂಡರೆ ಸಮುದಾಯದ ಕೆಂಗಣ್ಣಿಗೆ ಗುರಿ ಆಗಬೇಕಾಗುತ್ತದೆ. ಸಮುದಾಯದ ಹೋರಾಟಕ್ಕೆ ದನಿಗೂಡಿಸಿದರೆ, ಸರಕಾರದ ನಡೆಯನ್ನು ಪ್ರಶ್ನಿಸಬೇಕಾಗುತ್ತದೆ.

ಅಧಿವೇಶನದಲ್ಲೂ ಈ ಸಂಬಂಧ ಧ್ವನಿ ಎತ್ತುವ ಮೂಲಕ ಬದ್ಧತೆ ಪ್ರದರ್ಶಿಸಬೇಕಾಗುತ್ತದೆ.ಸಚಿವಾಕಾಂಕ್ಷಿಗಳಿಗೆ ಭಯಸಂಪುಟ ವಿಸ್ತರಣೆ ಚರ್ಚೆ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕೆಲ ಪಂಚಮಸಾಲಿ ಶಾಸಕರು ಸಚಿವ ಆಕಾಂಕ್ಷಿಗಳೂ ಆಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರದ ವಿರುದ್ಧ ಗುಡುಗಬೇಕಾಗುತ್ತದೆ. ಧ್ವನಿ ಎತ್ತದಿದ್ದರೆ, ಮುಂಬರುವ ದಿನಗಳಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದು ಕಾಂಗ್ರೆಸ್‌ನಲ್ಲಿರುವ ಪಂಚಮಸಾಲಿ ಸಮುದಾಯದ ಶಾಸಕರ ಮೇಲಷ್ಟೇ ಅಲ್ಲ. ಪಕ್ಷದ ಮೇಲೂ ಪರಿಣಾಮ ಬೀರದಿರದು. ಸರಿಯಾಗಿ 2 ವರ್ಷಗಳ ಹಿಂದೆ ಇದೇ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಅದೇ 2ಎ ಮೀಸಲಾತಿ ಬೇಡಿಕೆ ಇಟ್ಟು ಹೋರಾಟ ನಡೆಸಿದಾಗ ಕಾಂಗ್ರೆಸ್‌ನ ಪಂಚಮಸಾಲಿ ಶಾಸಕರ ಜತೆಗೆ ಆ ಪಕ್ಷದ ನಾಯಕರು ಹೋರಾಟದ ಮುಂಚೂಣಿಯಲ್ಲಿದ್ದರು. ಬಿಜೆಪಿಯಲ್ಲಿದ್ದ ಆ ಸಮುದಾಯದ ನಾಯಕರೂ ಈ ಸಂಬಂಧ ತಮ್ಮದೇ ಸರಕಾರದ ಮೇಲೆ ಒತ್ತಡ ಹಾಕಿದ್ದರು. ಅಂತಿಮವಾಗಿ ಮಣಿದ ಅಂದಿನ ಸರಕಾರ, ಅಲ್ಪಸಂಖ್ಯಾತರ ಮೀಸಲಾತಿ ಹಿಂಪಡೆದು, ಎರಡೂ ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರಿಗೆ 2ಡಿ ಮತ್ತು 2ಸಿ ಹಂಚಿಕೆ ಮಾಡುವ ಮೂಲಕ ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದರು. ನಂತರ ಸುಪ್ರೀಂ ಕೋರ್ಟ್‌ನಲ್ಲಿ ಅದೇ ಬಿಜೆಪಿ ಸರಕಾರ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದು ಇತಿಹಾಸ. ಆದರೆ, ಹೋರಾಟಕ್ಕೆ ಸ್ಪಂದನೆಯಂತೂ ಸಿಕ್ಕಿತ್ತು. ಆದರೆ, ಕಾಂಗ್ರೆಸ್‌ ಆಡಳಿತದಲ್ಲಿ ಲಾಠಿ ಏಟು ಸಿಕ್ಕಿತು ಎಂಬ ಆಕ್ರೋಶ ಕೇಳಿಬರುತ್ತಿದೆ.

Advertisement

ಸದ್ಯಕ್ಕಂತೂ ಈ ವಿಚಾರ ಕೋರ್ಟ್‌ನಲ್ಲಿದೆ. ಹಿಂದುಳಿದ ವರ್ಗಗಳ ಆಯೋಗ ನೀಡುವ ವರದಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಅಂತ ಸಮಜಾಯಿಷಿ ನಡುವೆಯೇ ಮಂಗಳವಾರ ಈ ಬೆಳವಣಿಗೆ ನಡೆದಿದೆ. ಕೂಡಲ ಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸುವರ್ಣ ವಿಧಾನಸೌಧ ಚಲೋದಲ್ಲಿ ಕಾಂಗ್ರೆಸ್‌ನ ಪಂಚಮಸಾಲಿ ಶಾಸಕರು ಮಾತ್ರ ಕಾಣಿಸಿಕೊಂಡಿಲ್ಲ. ಇದೆಲ್ಲವೂ ಗುರುವಾರ ಪುನಾರಂಭಗೊಳ್ಳಲಿರುವ ಅಧಿವೇಶನದಲ್ಲಿ ತೀವ್ರ ಕಾವು ಪಡೆದುಕೊಳ್ಳುವ ಸಾಧ್ಯತೆ ಇದೆ.

ವಿಪಕ್ಷಗಳಿಗೆ ಪ್ರಮುಖ ಅಸ್ತ್ರ
ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್‌ನಿಂದ ವಿಪಕ್ಷಗಳಿಗೆ ಪ್ರಮುಖ ಅಸ್ತ್ರ ಸಿಕ್ಕಂತಾಗಿದೆ. ಈ ಮೊದಲು ವಕ್ಫ್ ಆಸ್ತಿ ವಿವಾದ, ಮುಡಾ ನಿವೇಶನ ಹಂಚಿಕೆ ಪ್ರಕರಣ ಸೇರಿದಂತೆ ಹಲವು ಅಸ್ತ್ರಗಳು ಬಿಜೆಪಿ ಬತ್ತಳಿಕೆಯಲ್ಲಿದ್ದವು. ಆದರೆ, ಉಪಚುನಾವಣೆ ಸೋಲು ಮತ್ತು ಪಕ್ಷದೊಳಗಿನ ಬಣಗಳ ಬಡಿದಾಟ ಅದರ ನೈತಿಕ ಸ್ಥೈರ್ಯವನ್ನು ಕುಗ್ಗುವಂತೆ ಮಾಡಿತ್ತು. ಆದರೆ, ಲಾಠಿಚಾರ್ಜ್‌ ಮೂಲಕ ಹೊಸ ಅಸ್ತ್ರ ಕೊಟ್ಟಂತಾಗಿದೆ. ಅದನ್ನು ಬಳಸಿಕೊಂಡು ಆಡಳಿತ ಪಕ್ಷದ ಮೇಲೆ ಪ್ರತಿಪಕ್ಷಗಳು ಮುಗಿಬೀಳಲಿವೆ.

ಖಂಡಿಸುವ ಪ್ರಶ್ನೆಯೇ ಇಲ್ಲ
ಲಾಠಿ ಚಾರ್ಜ್‌ ಘಟನೆಯನ್ನು ಖಂಡಿಸುವ ಪ್ರಶ್ನೆಯೇ ಬರುವುದಿಲ್ಲ. ಕಾನೂನು ಕೈಗೆತ್ತಿಕೊಂಡಾಗ ಅದನ್ನು ಹತೋಟಿಗೆ ತರುವುದು ಇಲಾಖೆಯ ಹೊಣೆಯಾಗಿದೆ. ಅದನ್ನೇ ಪೊಲೀಸರು ಮಾಡಿದ್ದಾರೆ. ಪ್ರಚೋದನಕಾರಿ ಭಾಷಣದ ಮೂಲಕ ಅಮಾಯಕರನ್ನು ಕೆರಳಿಸಲಾಗಿದೆ. ಅದೊಂದು ಬಿಜೆಪಿ ಪ್ರೇರಿತ ಹೋರಾಟವಾಗಿದ್ದು, ಅದರ ನೇತೃತ್ವ ವಹಿಸಿಕೊಂಡವರಿಗೆ ನಿಯಂತ್ರಣವೂ ಇಲ್ಲ. ಈ ಹಿಂದೆ ನಮ್ಮ ನೇತೃತ್ವದಲ್ಲೂ ಹಲವು ಹೋರಾಟಗಳು ನಡೆದಿದ್ದವು. ಆಗ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ. ಇಲ್ಲಿ ನಾಯಕರಾದವರಾರಿಗೂ ಏಟು ಬಿದ್ದಿಲ್ಲ. ಏಟು ತಿಂದವರು ಅಮಾಯಕರಾಗಿದ್ದಾರೆ. ಅದೇನೇ ಇರಲಿ, ಆದಷ್ಟು ಬೇಗ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ತರಿಸಿಕೊಂಡು 2ಎ ಮೀಸಲಾತಿ ಕಲ್ಪಿಸುವ ನಮ್ಮ ಹೋರಾಟ ಮಾತ್ರ ಮುಂದುವರಿಯಲಿದೆ.
-ವಿಜಯಾನಂದ ಕಾಶಪ್ಪನವರ,
ಅಖಿಲ ಭಾರತ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next