ಹಾಡೆಂದರೆ ಮಗುವಮ್ಮ… ಕಿಲಕಿಲ ಕಿಲಕಿಲ ನಗುವಮ್ಮ’ ಹಾಡುಗಳೇ ಹಾಗೆ ದಿವ್ಯ ಸಮಾಧಾನ ಕೊಡುತ್ತವೆ. ನಮ್ಮ ಏಕಾಂತದಲ್ಲಿ ಯಾವಾಗಲೂ ಇರುವ ಜೊತೆಗಾರ. ಭಾವತೀವ್ರತೆ ಹೆಚ್ಚಾದಾಗ ರಮಿಸಿ ಮುದ್ದುಮಾಡುವ ಅಮ್ಮನ ಹಾಗೆ. ನಮ್ಮ ಖುಷಿಗಳಿಗೆ ನೃತ್ಯವಾಗುವ ಸಹಚರ. ನಮ್ಮ ಭಾವಲಹರಿಗೆ ಸಾಕ್ಷಿಯಾಗುವ ಕಕ್ಷೀದಾರ. ಪ್ರತಿಯೊಂದು ಹಾಡುಗಳು ಒಂದೊಂದು ಕಥೆಗೆ, ವ್ಯಕ್ತಿಗೆ, ಸಂದರ್ಭಕ್ಕೆ ಸರಿಹೊಂದುವ ಹಾಗೆ ಇರುತ್ತದೆ. ನಮ್ಮನ್ನ ತನ್ನ ಪ್ರಪಂಚದೊಳಗೆ ಸೆಳೆದುಕೊಂಡು ಬಿಡುತ್ತವೆ.
ಪ್ರತಿಯೊಬ್ಬರಿಗೂ ತಮ್ಮ ಅಭಿರುಚಿಗೆ ತಕ್ಕಂತೆ ತುಂಬ ಇಷ್ಟದ ಹಾಡುಗಳಿರುತ್ತವೆ. ಎಂಥದ್ದೇ ಸಮಯದಲ್ಲಿ ಕೇಳಿದ್ರೂ ಮನಸ್ಸು ಹಗುರ ಮಾಡುವಂಥ ಶಕ್ತಿ ಅವಕ್ಕಿರುತ್ತೆ. ಕೆಲವರಿಗೆ ಭಾವಗೀತೆಗಳು, ಇನ್ನು ಕೆಲವರಿಗೆ ಫೀಲಿಂಗ್ ಸಾಂಗ್ಸ್, ರಾಕ್ ಸಾಂಗ್ಸ್, ಮತ್ತೆ ಕೆಲವರಿಗೆ ಹಾಡಿನ ಅರ್ಥ, ಪದಗಳು, ಮ್ಯೂಸಿಕ್ ಇಷ್ಟವಾಗುತ್ತೆ.
ಮುಂಚಿನಿಂದಲೂ ಹಾಡುಗಳು ಜನರಿಗೆ ತುಂಬ ಹತ್ತಿರವಾಗೇ ಇವೆ. ಸಂಗೀತದ ಶಕ್ತಿಯೇ ಅದು, ಪ್ರತಿಯೊಬ್ಬರಿಗೂ ಅನ್ವಯವಾಗುತ್ತೆ, ಸ್ಫೂರ್ತಿಯಾಗುತ್ತೆ, ದಿವ್ಯ ಸಮಾಧಾನವನ್ನು ಕೊಡುತ್ತೆ. ಪ್ರೀತಿಗೆ, ಪ್ರೀತಿಸಿದವರ ನೋವಿಗೆ, ವಿರಹಕ್ಕೆ, ಸರಸಕ್ಕೆ, ಮೋಸಕ್ಕೆ, ಬೇಸರಕ್ಕೆ, ಸಿಟ್ಟಿಗೆ, ಸಮರಕ್ಕೆ ಎಲ್ಲದಕ್ಕೂ ಹಾಡುಗಳು. ಹಾಡುಗಳು ಮುಟ್ಟದ ಭಾವವಿಲ್ಲ, ಪ್ರತಿ ಹೆಜ್ಜೆಗೂ ಗೆಜ್ಜೆಯ ನಿನಾದ ನೀಡುತ್ತದೆ. ಹಾಡು ಆಕಾಶದಂತೆ ಅಗಾಧ, ಹಕ್ಕಿಯ ಚಿಲಿಪಿಲಿಯಂತೆ ಇಂಪು. ಆಗಷ್ಟೇ ಅರಳುವ ಮೊಗ್ಗಿನ ಘಮದಂತೆ ಆಹ್ಲಾದಕರ.
– ಲಾವಣ್ಯ ಎನ್. ಕೆ.
ತೃತೀಯ ಪತ್ರಿಕೋದ್ಯಮ
ಎಸ್.ಡಿ.ಎಮ್.ಕಾಲೇಜು, ಉಜಿರೆ