ಪೀಸಾದಲ್ಲಿ ಭಾರತೀಯರ ಮಿಲನ ಒಂದಾನೊಂದು ಕಾಲದಲ್ಲಿ ಇಟಲಿಯಲ್ಲಿ ಭಾರತೀಯರನ್ನು ಕಾಣುವ ಭಾಗ್ಯವೇ ಇರಲಿಲ್ಲ. ಆದರೆ ಇಂದು ಇದೇ ದೇಶ ಭಾರತದ ದೀಪಾವಳಿ ಆಚರಿಸಿತು ಅಂದರೆ ಇದು ನಿಜಕ್ಕೂ ಆಶ್ಚರ್ಯ !
ಮೇಡಂ ನೀವು ಖಂಡಿತ ಬರಬೇಕು’ ಎಂದು ಸಂಜಯ್ ಕರೆದಾಗ ಒಂದುಗಳಿಗೆ ಅವಾಕ್ಕಾದೆ! ಯುವಕ-ಯುವತಿಯರ ನಡುವೆ ಯುವತಿಯಾಗಿ ನಾನು ಹೊರೆಟೆ ದೀಪಾವಳಿ ಆಚರಿಸಲು! ನನ್ನ ಜತೆ ನನ್ನ ಬಲಗೈ ಆಂಜೆಲಾ, ಜತೆಯಲ್ಲಿ ಪುಸ್ತಕಗಳಲ್ಲಿ ಹಬ್ಬಗಳ ಬಗ್ಗೆ ಪುಸ್ತಕದಲ್ಲಿ ಬರೆದಿದ್ದೆವು, ಆದರೆ ಅದರ ಅನುಭವ ಪೀಸಾಲಿ ಪಡೆಯಲು ಉತ್ಸಾಹದಿಂದ ಹೊರಟೆವು, ಇಂಡಿಯಾ ರೆಸ್ಟೋರೆಂಟ್ ಕಡೆ. ನಾನು ಉಟ್ಟ ಸೀರೆಗೆ ಭಾರತದ ಭೂಪಟದ ಪ್ರಿಂಟ್ಸ್! ತಂಗಿಯ ಉಡುಗೊರೆಗೆ ಮನ ನಮಿಸಿತ್ತು.
ಸುತ್ತಲೂ ಏಳು ಗಂಟೆಗೆ ಕತ್ತಲು ಆದರೆ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಆಲಂಕೃತವಾಗಿದ್ದ ಭಾರತ ಗೃಹ ನಮ್ಮನ್ನು ಸ್ವಾಗತಿಸಿತು.
ನೀರಜ್ ರಂಗೋಲಿ ಹಾಕುತ್ತ, ಕೃಷ್ಣ ಸಾಲು ದೀಪಗಳನ್ನು ಹಚ್ಚುತ್ತಾ ಸ್ವಾಗತಿಸಿದರು ನನಗೆ ನಮಸ್ಕರಿಸುತ್ತಾ. ಎಷ್ಟು ಒಳ್ಳೆಯ ಭಾರತೀಯ ಸಂಸ್ಕಾರ ! ಒಳಗೆ ನಡೆಯುತ್ತಿದ್ದಂತೆ ಅಡುಗೆಯ, ಊದಿನಕಡ್ಡಿಯ ಸುವಾಸನೆ ಜತೆಗೆ ದೀಪಗಳ ಬೆಳಕು ಅದಕ್ಕೆ ಹೊಂದುವಂತೆ ದೇವರ ಹಾಡು, ವಾತಾವರಣ ಮನಸೆಳೆದು ಭಾರತಕ್ಕೆ ಹಿಂದಿರುಗಿದಂತೆ ಭಾಸವಾಯಿತು.
ಸಂಜಯ್ ರೆಸ್ಟೋರೆಂಟ್ ಅಂದೇ ಆರಂಭವಾಗಲಿತ್ತು. ಬಾಲಾಜಿ, ಲಕ್ಷ್ಮೀ, ಗಣೇಶನ ಚಿತ್ರಗಳು ಪೂಜೆಗೆ ಸಿದ್ಧವಾಗಿದ್ದವು. ಹಣ್ಣು, ಕಾಯಿ , ಹೂವು, ಅರಿಶಿನ ಕುಂಕುಮ, ಆರತಿ ತಟ್ಟೆ ಎಲ್ಲ ಸಿದ್ಧ. ಎಲ್ಲರ ಹಣೆಯಲ್ಲೂ ಕುಂಕುಮ ಶೋಭಿಸಿತ್ತು. ಸೀರೆ ಉಟ್ಟ ಆಲಂಕೃತ ಯುವತಿಯರು ಭಾರತದ ಎಲ್ಲ ರಾಜ್ಯದಿಂದಲೂ ಬಂದು ಸಾರುವಂತಿತ್ತು. ಎಲ್ಲ ಕಡೆಗಳಲ್ಲೂ ಸಂತಸದ ಮಾತುಗಳ ಹೊನಲು, ಪೂಜೆ ಆರಂಭವಾಗುತ್ತಿದ್ದಂತೆ ಎಲ್ಲರು ಕೈಜೋಡಿಸಿ ದೇವರ ಪ್ರಾರ್ಥಿಸಿ, 50 ಜನ ಒಟ್ಟಿಗೆ ಓಂ ಜೈ ಲಕ್ಷ್ಮೀ ಮಾತಾ ‘ ಹಾಡಿದಾಗ ಆರತಿ ಬೆಳಗುವ ಭಾಗ್ಯ ನನ್ನದಾಗಿತ್ತು.
ಚಿಕ್ಕ ರೆಸ್ಟೋರೆಂಟ್ 50 ಜನರು !ಕೃಷ್ಣನೇ ಜಾಗ ಮಾಡಿಸಿದಂತಿತ್ತು. ಪೂಜೆಯ ಅನಂತರ ಸ್ವಾದಿಷ್ಟ ಊಟ ! ನಾನು ಸೌಖ್ಯ, ಪ್ರಸಿದ್ಧ ಕವಿ, ಎಚ್ .ಎಸ್ ವೆಂಕಟೇಶ ಮೂರ್ತಿ ಅವರ ಮೊಮ್ಮಗಳು, ಕನ್ನಡದಲ್ಲಿ ಮಾತಾಡುತ್ತ ಸ್ವಾದಿಷ್ಟ ಊಟ ಮಾಡಿದಾಗ ಆತ್ಮ ತೃಪ್ತಿಯಾಗಿತ್ತು. ಇಲ್ಲೇ ಹುಟ್ಟಿರುವ ಮಕ್ಕಳು ಪುಟ್ಟ ಪುಟ್ಟ ಹೆಜ್ಜೆಯಿಂದ ಓಡಾಡುತ್ತಿದ್ದರೆ ಮನಸ್ಸು ಆನಂದದ ಕಡಲಲ್ಲಿ ಮುಳುಗಿತ್ತು. ಮುದ್ದು ವೈದೇಹಿ ಎಲ್ಲರ ಮನ ಸೆಳೆದಿದ್ದಳು.
ಊಟದ ಅನಂತರ ದೀಪಾವಳಿ ಅಂದರೆ ಪಟಾಕಿ ಇರಬೇಕಲ್ಲವೇ! ದೊಡ್ಡ ಪಟಾಕಿಗಳನ್ನು ಸಿಡಿಸಲು ಇಲ್ಲಿ ಅನುಮತಿ ಇರುವುದಿಲ್ಲ. ಆದರೆ sಠಿಚಿಡಿಞಟಛಿಡಿs ತಮ್ಮದೇ ಬೆಳಕಿನಿಂದ ಗಗನದ ತಾರೆಗಳಂತೆ ಧರೆ ಬೆಳಗಿ ಜನರ ನಗುವಿನಲ್ಲಿ ಭಾಗಿಯಾಗಿತ್ತು.
ನಡುರಾತ್ರಿ ಕಳೆದರು ವೇಳೆ ಕಳೆದಿದ್ದೆ ತಿಳಿಯಲಿಲ್ಲ. ಹತ್ತಾರು, ನೂರಾರು ಚಿತ್ರಗಳನ್ನು ಸ್ಮಾರ್ಟ್ ಫೋನ್ ಸೆರೆಹಿಡಿದಿತ್ತು. ಎಲ್ಲ ಮುಗಿದು ಮನೆಯ ಕಡೆ ಹೊರಟಾಗ ಮನಸ್ಸು ಹಗುರವಾಗಿ ಚಿಟ್ಟೆಯಂತೆ ಹಾರುತ್ತಿರುವಂತೆ ಭಾಸವಾಯಿತು. ಮನಸ್ಸಿದ್ದರೆ ಮಾರ್ಗ ಅನ್ನುವಂತೆ ನಾವಿರುವ ತಾಣವೇ ಗಂಧದಗುಡಿ ಆಗಬಹುದು ಇದಕ್ಕೆ ಸಂಶಯವಿಲ್ಲ !
*ಜಯಮೂರ್ತಿ, ಇಟಲಿ