ನವದೆಹಲಿ: ಜನಪ್ರಿಯ ಗಾಯಕ ದಿಲ್ಜಿತ್ ದೋಸಾಂಜೆಯ “Dilluminati” ಸಂಗೀತ ಕಾರ್ಯಕ್ರಮ ಹಾಗೂ ಖ್ಯಾತ Rock Band ಕೋಲ್ಡ್ ಪ್ಲೇ ಮ್ಯೂಸಿಕ್ ಕಾರ್ಯಕ್ರಮದ ಟಿಕೆಟ್ ಅನ್ನು ಅಕ್ರಮವಾಗಿ ಮತ್ತು ದುಬಾರಿ ಬೆಲೆಗೆ ಮಾರಾಟ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದೆಹಲಿ, ಮುಂಬೈ, ಜೈಪುರ್, ಬೆಂಗಳೂರು ಸೇರಿದಂತೆ ಹಲವೆಡೆ ದಾಳಿ ನಡೆಸಿದೆ.
BookMyShow ಮತ್ತು Zomato ಟಿಕೆಟ್ ಹಂಚಿಕೆ ಪಾಲುದಾರರು, ಒಂದೇ ನಿಮಿಷದಲ್ಲಿ ಎರಡೂ ಸಂಗೀತ ಕಾರ್ಯಕ್ರಮಗಳ ಟಿಕೆಟ್ ಮಾರಾಟವಾಗಿರುವುದಾಗಿ ತಿಳಿಸಿತ್ತು. ಇದು ಟಿಕೆಟ್ ಅನ್ನು ಬ್ಲ್ಯಾಕ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಹುನ್ನಾರ ಎಂದು ಸಂಗೀತ ಪ್ರಿಯರು ಆರೋಪಿಸಿದ್ದರು. ಅಷ್ಟೇ ಅಲ್ಲ ನಕಲಿ ಟಿಕೆಟ್ ಮಾರಾಟ ಮತ್ತು ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡಿದ್ದರ ಬಗ್ಗೆ ಹಲವಾರು ದೂರುಗಳು ಕೆಲವು ರಾಜ್ಯಗಳಲ್ಲಿ ದಾಖಲಾಗಿತ್ತು.
ಬುಕ್ ಮೈ ಶೋ ಕೂಡಾ ಹಲವಾರು ಶಂಕಿತರ ವಿರುದ್ಧ ದೂರು ದಾಖಲಿಸಿದೆ. ಅಕ್ರಮ ಹಣ ವರ್ಗಾವಣೆಯ ಅನುಮಾನದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಂಡಿತ್ತು. ಇದರ ಪರಿಣಾಮ ಅಕ್ಟೋಬರ್ 25ರಂದು ಐದು ನಗರಗಳ 25 ಕಡೆಗಳಲ್ಲಿ ದಾಳಿ ನಡೆಸಿತ್ತು.
ದಾಳಿಯಲ್ಲಿ ಮೊಬೈಲ್ ಫೋನ್ ಗಳು, ಲ್ಯಾಪ್ ಟಾಪ್ಸ್, ಸಿಮ್ ಕಾರ್ಡ್ಸ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಇನ್ಸ್ಟಾಗ್ರಾಮ್, ವಾಟ್ಸಪ್ ಮತ್ತು ಟೆಲಿಗ್ರಾಮ್ ಬಳಸಿಕೊಂಡು ನಕಲಿ ಟಿಕೆಟ್ ಅನ್ನು ಮಾರಾಟ ಮಾಡುತ್ತಿದ್ದರು ಎಂಬ ಅಂಶ ತನಿಖೆಯಲ್ಲಿ ಪತ್ತೆಯಾಗಿದೆ.
ಟಿಕೆಟ್ ಗಳ ಅಕ್ರಮ ಮಾರಾಟ, ಈ ಹಗರಣಕ್ಕೆ ಬೆಂಬಲ ನೀಡಿರುವ ಆರ್ಥಿಕ ಜಾಲದ ಪತ್ತೆಯ ಗುರಿಯೊಂದಿಗೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗಿದೆ ಎಂದು ವರದಿ ತಿಳಿಸಿದೆ. 2025ರ ಜನವರಿ 18, 19, 21ರಂದು ಮುಂಬೈನಲ್ಲಿ ಕೋಲ್ಡ್ ಪ್ಲೇ ರಾಕ್ ಬ್ಯಾಂಡ್ ಸಂಗೀತ ಕಾರ್ಯಕ್ರಮ ನಡೆಯಲು ವೇದಿಕೆ ಸಿದ್ಧವಾಗಿದೆ.
ಅದೇ ರೀತಿ ಜನಪ್ರಿಯ ಗಾಯಕ ದಿಲ್ಜಿತ್ ದೋಸಾಂಜ್ ಅವರ ದಿಲ್ಲುಮಿನಾಟಿ ಸಂಗೀತ ಕಾರ್ಯಕ್ರಮದ ಭಾರತ ಪ್ರವಾಸ ಅಕ್ಟೋಬರ್ 26ರಂದು ದೆಹಲಿಯಿಂದ ಆರಂಭವಾಗಲಿದೆ. ನಂತರ ನವೆಂಬರ್ 2ರಂದು ಜೈಪುರ್, ನವೆಂಬರ್ 6ರಂದು ಬೆಂಗಳೂರು, ನ.15ರಂದು ಹೈದರಾಬಾದ್, ನವೆಂಬರ್ 17 ಅಹಮದಾಬಾದ್, ನ.22ರಂದು ಲಕ್ನೋ, ಡಿಸೆಂಬರ್ 29ರಂದು ಗುವಾಹಟಿಯಲ್ಲಿ ಕಾರ್ಯಕ್ರಮ ನಿಗದಿಯಾಗಿದೆ ಎಂದು ವರದಿ ತಿಳಿಸಿದೆ.