ಗೋಕಾಕ: ನಗರದ 24×7 ನೀರು ಸರಬರಾಜು ಯೋಜನೆ ಇನ್ನೆರಡು ತಿಂಗಳಲ್ಲಿ ಸರಿಪಡಿಸಿ ಜನರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕೆಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೂಚನೆ ನೀಡಿದರು.
ಶನಿವಾರ ನಗರಸಭೆ ಸಭಾಂಗಣದಲ್ಲಿ ನಡೆದ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 24×7 ನೀರು ಪೂರೈಕೆಯಲ್ಲಿ ಸಾಕಷ್ಟು ಸಮಸ್ಯೆಗಳು ಇರುವುದರಿಂದ ಶೇ. 70ರಷ್ಟು ಜನರು ಮಾತ್ರ ನೀರಿನ ಕರವನ್ನು ಪಾವತಿಸುತ್ತಿದ್ದಾರೆ. ಪ್ರತಿ ವಾರ್ಡ ಸದಸ್ಯರೊಂದಿಗೆ ವಾರ್ಡಗಳಿಗೆ ಭೇಟಿ ನೀಡಿ, ಆ ವಾರ್ಡ್‌ದಲ್ಲಿ ಎಷ್ಟು ಜನರಿಗೆ 24×7 ನೀರು ಸರಬರಾಜು ಇದೆ, ಅವರು ಏಕೆ ನೀರಿನ ಕರ ತುಂಬುತ್ತಿಲ್ಲ ಎಂಬೆಲ್ಲ ವಿಷಯಗಳನ್ನು ತಿಳಿದುಕೊಂಡು ಸ್ಥಳದಲ್ಲೇ ಅವರ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಿ ಬಾಕಿ ಉಳಿದಿರುವ ನೀರಿನ ಕರವನ್ನು ಹಂತ ಹಂತವಾಗಿ ಪಾವತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
2010ರ ನಂತರ ಹುಟ್ಟಿಕೊಂಡ ಕೆಲ ಹೊಸ ಬಡಾವಣೆಗಳಿಗೂ 24×7ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ನಗರದ ಶೌಚಾಲಯಗಳು, ಗಟಾರುಗಳು ಸಂಪೂರ್ಣ ಹದಗೆಟ್ಟಿವೆ. ಅಧಿಕಾರಿಗಳು ಅದನ್ನು ಗಮನಿಸುತ್ತಿಲ್ಲ ಹಾಗೂ ನಿರ್ವಹಣೆ ಮಾಡುತ್ತಿಲ್ಲ. ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ನಗರವನ್ನು ಸುಂದರ ಹಾಗೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಳೆಗಾಲ ಬಂದಿರುವುದರಿಂದ ಡೆಂಘೀದಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ಕೈಗೊಳ್ಳಬೇಕೆಂದು ಸಚಿವರು ಹೇಳಿದರು.
ಪ್ರವಾಹದಲ್ಲಿ ಮನೆ ಕಳೆದುಕೊಂಡ ಸುಮಾರು 214 ಸಂತ್ರಸ್ತರಿಗೆ ಇನ್ನೂ 1 ಲಕ್ಷ ರೂ. ಪರಿಹಾರದ ಹಣ ಜಮಾ ಆಗಿಲ್ಲ ಎಂದು ಸದಸ್ಯರೊಬ್ಬರು ಸಚಿವರ ಗಮನಕ್ಕೆ ತಂದಾಗ, ಕೂಡಲೇ ಮನೆಗಳ ಜೆಪಿಎಸ್ ಮಾಡಿಸಿ ಜಿಲ್ಲಾ ಧಿಕಾರಿಗಳಿಗೆ ಮರು ವರದಿ ಸಲ್ಲಿಸಬೇಕು. ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಕೂಡಲೇ ಹಣ ಬಿಡುಗಡೆಗೆ ಕ್ರಮ ಜರುಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಪೌರಾಯುಕ್ತ ಶಿವಾನಂದ ಹಿರೇಮಠ, ನಗರಸಭೆ ಹಿರಿಯ ಸದಸ್ಯ ಎಸ್.ಎ. ಕೊತವಾಲ ಸೇರಿದಂತೆ ಎಲ್ಲ ಅಧಿಕಾರಿಗಳು ಇದ್ದರು. ಸಭೆಯ ನಂತರ ಸಚಿವರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.