ಹುಣಸೂರು: ಒಕ್ಕಣೆ ಮಾಡಿದ ಭತ್ತದ ಹುಲ್ಲನ್ನು ಟ್ರ್ಯಾಕ್ಟರ್ನಲ್ಲಿ ಸಾಗಿಸುತ್ತಿದ್ದ ವೇಳೆ ನಾಲಾ ಏರಿ ರಸ್ತೆಯಲ್ಲಿ ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಹುಲ್ಲು ಸಂಪೂರ್ಣ ಭಸ್ಮವಾಗಿದ್ದರೆ, ರೈತರ ಸಕಾಲಿಕ ಕ್ರಮದಿಂದಾಗಿ ಟ್ರ್ಯಾಕ್ಟರ್ ಮತ್ತದರ ಚಾಲಕ ಬಚಾವಾಗಿರುವ ಘಟನೆ ತಾಲೂಕಿನ ಕಸಬಾ ಹೋಬಳಿಯ ನಂಜಾಪುರದಲ್ಲಿ ನಡೆದಿದೆ.
ಹನಗೋಡು ಅಣೆಕಟ್ಟೆಯ ಉದ್ದೂರು ನಾಲೆಯ 4ನೇ ಬ್ರಾಂಚ್ ಏರಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಗ್ರಾಮದ ರೈತ ಮೂರ್ತಿ ಅವರಿಗೆ ಸೇರಿದ ಎಕರೆಯಷ್ಟು ಹುಲ್ಲು ಸಂಪೂರ್ಣ ಸುಟ್ಟು ಹೋಗಿದೆ.
ತಮ್ಮ ಜಮೀನಿನಲ್ಲಿ ಭತ್ತದ ಒಕ್ಕಣೆ ನಡೆಸಿದ ಹುಲ್ಲನ್ನು ಟ್ರ್ಯಾಕ್ಟರ್ನಲ್ಲಿ ಮನೆಗೆ ಸಾಗಿಸುತ್ತಿದ್ದ ವೇಳೆ ಜೋತು ಬಿದ್ದಿದ್ದ ತಂತಿ ಹುಲ್ಲು ತಗುಲುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿದ್ದನ್ನು ಕಂಡ ಟ್ರ್ಯಾಕ್ಟರ್ ಹಿಂದಿದ್ದ ರೈತರು ಗಮನಿಸಿ ತಕ್ಷಣವೇ ಟ್ರ್ಯಾಕ್ಟರ್ನ ಹಗ್ಗ ತುಂಡರಿಸಿ ಹುಲ್ಲುನ್ನು ರಸ್ತೆಗೆ ಕೆಡವಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ಸೆಸ್ಕ್ ನಿರ್ಲಕ್ಷ್ಯ:
ಏರಿ ಮೇಲೆ ಕೆಳಮಟ್ಟದಲ್ಲಿ ವಿದ್ಯುತ್ ತಂತಿ ಜೋತು ಬಿದ್ದಿರುವ ಬಗ್ಗೆ ಹಲವಾರು ಬಾರಿ ಸೆಸ್ಕ್ ಎಂಜಿನಿಯರ್ರಿಗೆ ಮನವಿ ಮಾಡಿದ್ದರೂ ದುರಸ್ತಿಗೊಳಿಸದಿದ್ದರಿಂದಾಗಿ ಘಟನೆ ಸಂಭವಿಸಿದೆ. ಇದಕ್ಕೆ ಸೆಸ್ಕ್ ಅಧಿಕಾರಿಗಳ ನಿರ್ಲಕ್ಷವೇ ಕಾರಣವಾಗಿದ್ದು, ಹುಲ್ಲಿನ ನಷ್ಟವನ್ನು ಅಧಿಕಾರಿಗಲೇ ಭರಿಸಬೇಕು ಹಾಗೂ ನಿರ್ಲಕ್ಷ್ಯವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಉದ್ದೂರು ಕಾವಲ್ ಗ್ರಾಪಂ ಅಧ್ಯಕ್ಷೆ ಪದ್ಮಮ್ಮ, ನಂಜಾಪುರ ಸದಸ್ಯ ಮನುಕುಮಾರ್ ಆಗ್ರಹಿಸಿದ್ದಾರೆ.