ಸಕಲೇಶಪುರ: ಎತ್ತಿನಹೊಳೆ ಯೋಜನೆ ಸುರಂಗ ಮಾರ್ಗ ನಿರ್ಮಾಣ ಸಂತ್ರಸ್ತರಿಗೆ ಪರಿಹಾರ ನೀಡದ್ದನ್ನು ಖಂಡಿಸಿ ತಾಲೂಕಿನ ಹೆಬ್ಬನಹಳ್ಳಿ ಹಾಗೂ ಮೂಗಲಿ ಗ್ರಾಮಸ್ಥರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.
ಈ ವೇಳೆ ಯೋಜನಾ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ದರಿಂದ ಹೋರಾಟ ವನ್ನು ಎರಡೇ ದಿನಕ್ಕೆ ಮುಕ್ತಾಯಗೊಂಡಿದೆ. ತಾಲೂಕಿನ ಹೆಬ್ಬನಹಳ್ಳಿ ಸಮೀಪ ಎತ್ತಿನಹೊಳೆ ಯೋಜನೆಗಾಗಿ ಕಳೆದ 2 ವರ್ಷಗಳಿಂದ ಸುರಂಗ ಮಾರ್ಗ ನಿರ್ಮಾಣ ಮಾಡಲಾಗುತ್ತಿದ್ದು, ಇದನ್ನು ಖಾಸಗಿ ಕಂಪನಿಯೊಂದು ಗುತ್ತಿಗೆ ಪಡೆದಿದೆ. ಸುರಂಗ ಮಾರ್ಗಕ್ಕಾಗಿ ಸಿಡಿ ಮದ್ದುಗಳನ್ನು ಸಿಡಿಸುತ್ತಿರುವುದರಿಂದ ಸುತ್ತಮುತ್ತಲಿನ ಸುಮಾರು 15 ಕುಟುಂಬಗಳಿಗೆ ಸಾಕಷ್ಟು ತೊಂದರೆಯಾಗಿದೆ.
ಕೆಲಸ ಸ್ಥಗಿತಗೊಳಿಸಿ: ಸುಮಾರು 15 ಕುಟುಂಬಗಳ ಮನೆಗಳು ಬಿರುಕು ಬಿಟ್ಟಿದ್ದು, ಸಿಡಿಮದ್ದು ಸಿಡಿಸುವುದರಿಂದ ಮಕ್ಕಳು, ಹಿರಿಯರು ಭಯಭೀತರಾಗುತ್ತಿದ್ದಾರೆ. ಜೊತೆಗೆ ಸ್ಮಶಾನದ ಜಾಗವನ್ನು ಸಹ ಬಿಡದೆ ಯೋಜನೆಗಾಗಿ ಬಳಸಿಕೊಳ್ಳಲಾಗಿದೆ. ಕೆಲವು ಮನೆಗಳಿಗೆ ಸರಿಯಾದ ದಾಖಲಾತಿಗಳು ಇಲ್ಲದಿರುವುದರಿಂದ ಪುನರ್ ವಸತಿ ಹಾಗೂ ಪರಿಹಾರ ಕಲ್ಪಿಸಲು ಮುಂದಾ ಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸುರಂಗ ಮಾರ್ಗದ ಸಮೀಪದಲ್ಲಿರುವ ಮನೆಯವರಿಗೆ ಮೊದಲು ಸೂಕ್ತ ಪರಿಹಾರ ಕಲ್ಪಿಸಬೇಕು. ಸೂಕ್ತ ಪರಿಹಾರ ಕಲ್ಪಿಸುವವರೆಗೂ ಕೆಲಸ ಸ್ಥಗಿತಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಎಲ್ಲರಿಗೂ ಸೂಕ್ತ ಪರಿಹಾರ ಕೊಡಿ: ಈ ವೇಳೆ ಎಪಿಎಂಸಿ ಅಧ್ಯಕ್ಷ ಕವನ್‌ಗೌಡ ಮಾತನಾಡಿ, ಕಳೆದ 2 ವರ್ಷಗಳಿಂದ ಸಂತ್ರಸ್ಥರಿಗೆ ನ್ಯಾಯ ಒದಗಿಸಿ ಎಂದು ಹೇಳುತ್ತಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಕೆಲವೊಂದು ಮನೆಗಳಿಗೆ ದಾಖಲೆ ಇಲ್ಲದನ್ನೇ ನೆಪ ಮಾಡಿಕೊಂಡು ಯಾವುದೇ ರೀತಿಯ ಪರಿಹಾರ ಕೊಡದೆ ಬಡವರನ್ನು ಸ್ಥಳಾಂತರ ಮಾಡುವುದು ಬೇಡ, ಕೂಡಲೇ ಸುರಂಗ ಮಾರ್ಗದಿಂದ ಹಾನಿಗೀಡಾ ಗುವ ಎಲ್ಲರಿಗೂ ಸೂಕ್ತ ಪರಿಹಾರ ನೀಡಬೇಕು ಎಂದರು.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಎತ್ತಿನಹೊಳೆ ಯೋಜನೆ ಕಾರ್ಯಪಾಲಕ ಅಭಿಯಂತರ ಜಯಣ್ಣ ಹಾಗೂ ಸುರಂಗ ಮಾರ್ಗ ಗುತ್ತಿಗೆ ಪಡೆದಿರವ ಖಾಸಗಿ ಕಂಪನಿಯ ವ್ಯವಸ್ಥಾಪಕ ಜಯರಾಮ್ ಹೆಗಡೆ ಗ್ರಾಮಸ್ಥರೊಂದಿಗೆ ಮಾತನಾಡಿ, ಕೂಡಲೆ ಈ ಜಾಗವನ್ನು ಜಿಪಿಎಸ್ ಸರ್ವೆ ಮಾಡಿಸಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಪರಿಹಾರದ ವ್ಯವಸ್ಥೆ ಮಾಡಲಾಗುತ್ತದೆ.
ಇದನ್ನೂ ಓದಿ:ಕೋವಿಡ್ ಲಸಿಕೆ: ಜಿಲ್ಲೆ ದ್ವಿತೀಯ ಸ್ಥಾನ
ಸದ್ಯಕ್ಕೆ ಬಿರುಕು ಬಿಟ್ಟ ಮನೆಗಳನ್ನು ದುರಸ್ತಿ ಮಾಡಿಕೊಡುತ್ತೇವೆ ಎಂದರು. ಈ ವೇಳೆ ತಾಪಂ ಸದಸ್ಯ ಯಡೇಹಳ್ಳಿ ಮಂಜುನಾಥ್ ಮಾತನಾಡಿ, ಕೂಡಲೇ ಇವರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳದಿದ್ದಲ್ಲಿ ಎತ್ತಿನಹೊಳೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುತ್ತದೆ ಎಂದರು. ಅಂತಿಮವಾಗಿ ಅಧಿಕಾರಿಗಳ ಭರವಸೆ ನಂಬಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.