Advertisement
ರಾಜ್ಯದ ನಾರಾಯಣಪುರದ ಬಸವಸಾಗರ, ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತ್ರಿ ಜಲಸಾಗರ ಮೇಲ್ಭಾಗದಲ್ಲಿ ಬರುವ ಯೋಜನೆಗಳಿಗೆ ಕೃಷ್ಣಾ ಮೇಲ್ದಂಡೆ ಎಂದು ಹೆಸರಿಡಲಾಗಿದೆ. ಕೃಷ್ಣಾ ಕೆಳದಂಡೆ ಯೋಜನೆ ಗಳೂ ಇದ್ದು ಅದಕ್ಕೆ ನಾಗಾರ್ಜುನ ಸಾಗರ ಯೋಜನೆ ಎಂದು (ಅವಿಭಜಿತ ಆಂಧ್ರಪ್ರದೇಶ) ಕರೆಯಲಾಗುತ್ತದೆ. 1976ರಲ್ಲಿ ನ್ಯಾ|ಆರ್.ಎಸ್.ಬಚಾವತ್ ನೇತೃತ್ವದ ಕೃಷ್ಣಾ ನ್ಯಾಯಾ ಧಿ ಕರಣ-1ರ ಪ್ರಕಾರ ರಾಜ್ಯಕ್ಕೆ ಹಂಚಿಕೆಯಾದ 173 ಟಿಎಂಸಿ ಅಡಿ (ಎ ಸ್ಕೀಂ) ನೀರು ಬಳಸಿಕೊಂಡು ಬರ ಪೀಡಿತ ಜಿಲ್ಲೆಗಳಿಗೆ ನೀರಾ ವರಿ ಒದಗಿಸಲು ಯುಕೆಪಿ 1 ಮತ್ತು 2ನೇ ಹಂತ ಸಿದ್ಧಪಡಿಸಿ ಕೊಳ್ಳಲಾಗಿತ್ತು. ಯುಕೆಪಿ 1ನೇ ಹಂತದಲ್ಲಿ 119 ಟಿಎಂಸಿ ನೀರು ಬಳಸಿ ನಾರಾಯಣಪುರ, ಆಲಮಟ್ಟಿ ಡ್ಯಾಂಗಳ ಮೂಲಕ 4.25 ಲಕ್ಷ ಹೆಕ್ಟೇರ್ ನೀರಾವರಿ ಕಲ್ಪಿಸುವುದಾದರೆ, 2ನೇ ಹಂತದಲ್ಲಿ 54 ಟಿಎಂಸಿ ಅಡಿ ನೀರು ಬಳಸಿ 1.97 ಲಕ್ಷ ಹೆಕ್ಟೇರ್ ಸೇರಿ ಎರಡೂ ಹಂತ ದಿಂದ ಒಟ್ಟು 173 ಟಿಎಂಸಿ ಅಡಿ ನೀರು ಬಳಸಿಕೊಂಡು ನಾರಾಯಣಪುರ ಎಡದಂಡೆ, ಶಹಾಪುರ ಶಾಖಾ ಕಾಲುವೆ, ಮುಡ ಬಾಳ ಶಾಖಾ, ಇಂಡಿ ಶಾಖಾ, ಜೇವರಗಿ ಶಾಖಾ, ಆಲಮಟ್ಟಿ ಎಡದಂಡೆ ಕಾಲುವೆ ಯೋಜನೆ ಕೈಗೊಳ್ಳಲಾಗಿದೆ. 1ನೇ ಹಂತ-1990ರಲ್ಲಿ, 2ನೇ ಹಂತ-2000ನೇ ಇಸ್ವಿಯಲ್ಲಿ ಪೂರ್ಣಗೊಂಡಿವೆ.
ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಹುಟ್ಟಿ ನಾಲ್ಕು ರಾಜ್ಯಗಳಲ್ಲಿ ಬರೋಬ್ಬರಿ 1392 ಕಿ.ಮೀ. (ಕರ್ನಾಟಕದಲ್ಲಿ 483 ಕಿ.ಮೀ.) ಹರಿದು ಆಂಧ್ರದ ಹಂಸಲಾದೀವಿ (ಕೃಷ್ಣ ಜಿಲ್ಲೆ) ಬಳಿ ಬಂಗಾಳ ಕೊಲ್ಲಿ ಸಮುದ್ರ ಸೇರುತ್ತದೆ. ಈ ನದಿಗೆ ಮಹಾರಾಷ್ಟ್ರದಲ್ಲಿ 68 ಸಾವಿರ ಚದರ ಕಿ.ಮೀ., ಕರ್ನಾಟಕದಲ್ಲಿ 1,12,600 ಚದರ ಕಿ.ಮೀ. ಹಾಗೂ ಆಂಧ್ರದಲ್ಲಿ 75,600 ಚದರ ಕಿ.ಮೀ. ಸೇರಿ ಒಟ್ಟು 2.60 ಲಕ್ಷ ಚದರ ಕಿಮೀ ಜಲಾನಯನ ಪ್ರದೇಶವಿದೆ. ನಾಲ್ಕು ರಾಜ್ಯಗಳನ್ನು ಹೋಲಿಸಿದರೆ ಅತೀ ಹೆಚ್ಚು ಜಲಾನಯನ ಪ್ರದೇಶ ಇರುವುದು ಕರ್ನಾಟಕದಲ್ಲಿ ಎಂಬುದು ಗಮನಾರ್ಹ. ನ್ಯಾಯಾಧಿಕರಣ-2 ತೀರ್ಪು ಏನು?
ನ್ಯಾ| ಬ್ರಿಜೇಶಕುಮಾರ ನೇತೃತ್ವದ ಕೃಷ್ಣಾ ನ್ಯಾಯಾಧಿಕರಣ-2 ಕಳೆದ 2010ರಲ್ಲಿ ತೀರ್ಪು ನೀಡಿದ್ದು ರಾಜ್ಯಕ್ಕೆ ಪುನಃ 170 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ. ಆ ನೀರು ಬಳಸಿಕೊಳ್ಳಲು ಆಲಮಟ್ಟಿ ಡ್ಯಾಂ ಈಗಿರುವ 519.60 ಮೀ.ನಿಂದ 524.256 ಮೀ.ಗೆ ಎತ್ತರಿಸಲು (100.44 ಟಿಎಂಸಿ ಅಡಿ ಸಂಗ್ರಹ ಹೆಚ್ಚಳ ವಾಗಲಿದೆ) ಅನುಮತಿ ನೀಡಿದೆ. ಅಲ್ಲದೇ 2012ರಲ್ಲಿ ಅಂತಿಮ ತೀರ್ಪು ಪ್ರಕಟಿಸಿ ಕೃಷ್ಣೆಯಲ್ಲಿ ವಾರ್ಷಿಕ ನೈಸರ್ಗಿಕವಾಗಿ ಹರಿ ಯುವ ನೀರಿನಲ್ಲಿ ಮೂರು ರಾಜ್ಯಗಳಿಗೆ ಮರು ಹಂಚಿಕೆ ಮಾಡಿದೆ. ಆ ಪ್ರಕಾರ ಆಂಧ್ರಕ್ಕೆ (ತೆಲಂಗಾಣ ಸೇರಿ) 1,001, ಕರ್ನಾಟಕಕ್ಕೆ 911, ಮಹಾರಾಷ್ಟ್ರಕ್ಕೆ 666 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಆಯಾ ರಾಜ್ಯಗಳಲ್ಲಿ ಹರಿಯುವ ಕೃಷ್ಣೆಯ ಕೊಳ್ಳದ ನೀರಿನಲ್ಲಿ ಹಂಚಿಕೆಯಾದ ನೀರು ಬಳಸಿಕೊಳ್ಳಲು ಆಯಾ ರಾಜ್ಯಕ್ಕೆ ಅವಕಾಶಗಳಿವೆ.
Related Articles
ನ್ಯಾಯಾಧಿಕರಣದ-2ರ ತೀರ್ಪಿನ ಪ್ರಕಾರ 3ನೇ ಹಂತದಲ್ಲಿ ವಿಜಯ ಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ರಾಯಚೂರು, ಕೊಪ್ಪಳ ಮತ್ತು ಗದಗ ಜಿಲ್ಲೆಗಳ ಒಟ್ಟು 5,30,475 ಹೆಕ್ಟೇರ್ (ಸುಮಾರು 15 ಲಕ್ಷ ಎಕರೆ) ಭೂಮಿಗೆ ನೀರಾವರಿ ಕಲ್ಪಿಸುವುದಾಗಿದೆ. ಈ ಯೋಜನೆ ಕೈಗೊಳ್ಳುವ ಮುಂಚೆ ಡ್ಯಾಂ ಎತ್ತರಿಸಿದಾಗ ವಿಜಯಪುರ- ಬಾಗಲ ಕೋಟೆ ಜಿಲ್ಲೆಯ 22 ಹಳ್ಳಿಗಳು, 75,630 ಎಕರೆ ಭೂಮಿ ಹಿನ್ನೀರಿನಲ್ಲಿ ಮುಳು ಗಡೆ ಆಗುತ್ತದೆ. ಕಾಲುವೆ, ಪುನರ್ ವಸತಿ ಕೇಂದ್ರ ಸಹಿತ ಒಟ್ಟು 1.33 ಲಕ್ಷ ಎಕರೆ ಭೂಸ್ವಾಧೀನ ಮಾಡಿಕೊಳ್ಳಬೇಕು. ಇದುವೇ ಸರ್ಕಾರಕ್ಕೆ ಸದ್ಯ ದೊಡ್ಡ ಸವಾಲು ಹಾಗೂ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.
Advertisement
ಪರಿಹಾರ ಪ್ರಮಾಣ ಎಷ್ಟು?ಯುಕೆಪಿ 3ನೇ ಹಂತದ ಯೋಜನೆ ಅನುಷ್ಠಾನಕ್ಕೆ ಭೂಸ್ವಾಧೀನ ಕೈಗೊಳ್ಳಲು ಕೆಬಿಜೆಎನ್‌ಎಲ್ ನಾಲ್ಕು ಹಂತದ ಪ್ರಸ್ತಾವನೆ ಕೊಟ್ಟಿತ್ತು. ಅಂತಿಮವಾಗಿ ಆಲಮಟ್ಟಿ ಜಲಾಶಯದಲ್ಲಿ ಈಗಿರುವ 519.60 ಮೀ.ನಿಂದ 522 ಮೀ. (38,983 ಎಕರೆ ಭೂಮಿ- 5846 ಕೋಟಿ ಪರಿಹಾರ), 522ರಿಂದ 524.52 ಮೀ. (36,580 ಎಕರೆ ಭೂಮಿ-5487 ಕೋಟಿ ಪರಿಹಾರ) ವರೆಗೆ ನೀರು ನಿಲ್ಲಿಸಿದಾಗ ಮುಳುಗಡೆಯಾಗುವ ಭೂ ಸ್ವಾಧೀನ ಕೈಗೊಳ್ಳಲು 2022, ಆ.12ರಂದು ಸಿಎಂ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಕೆಲವೊಂದು ನಿರ್ಣಯ ಕೈಗೊಳ್ಳಲಾಗಿದೆ. ಅದೇ ನಿರ್ಣಯಗಳನ್ನು ಸದ್ಯ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಅವಧಿಯ 2023, ಮೇ 31ರಂದು ಅಂತಿಮಗೊಳಿಸಿ ಎರಡು ಹಂತದಲ್ಲಿ ಭೂಸ್ವಾಧೀನಕ್ಕೆ ಮುಂದಾಗಿದೆ. ಯಾವ ಜಿಲ್ಲೆಗೆ ಎಷ್ಟು ಲಾಭ?
ವಿಜಯಪುರ ಜಿಲ್ಲೆಗೆ ಈ ಯೋಜನೆಯಿಂದ 80 ಟಿಎಂಸಿ ಅಡಿ ನೀರು ದೊರೆಯಲಿದ್ದು, 3,21,866 ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಡುತ್ತದೆ. ಬಾಗಲಕೋಟೆ-28,573 ಹೆಕ್ಟೇರ್, ಯಾದಗಿರಿ-40,164 ಹೆಕ್ಟೇರ್, ಕಲಬುರಗಿ 28,107 ಹೆಕ್ಟೇರ್, ರಾಯಚೂರು-75,670 ಹೆಕ್ಟೇರ್, ಕೊಪ್ಪಳ-32,723 ಹೆಕ್ಟೇರ್, ಗದಗ-3,372 ಹೆಕ್ಟೇರ್, ಸೇರಿ 7 ಜಿಲ್ಲೆಯ 5,30,475 ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಡುತ್ತದೆ. ಆದರೆ ವಿಜಯಪುರ, ಬಾಗಲಕೋಟೆ ಭಾಗದವರು ಹೊರತುಪಡಿಸಿ ಉಳಿದ ಜಿಲ್ಲೆಗಳ ಜನರು, ಜನಪ್ರತಿನಿಧಿಗಳಿಂದ ಗಟ್ಟಿ ಧ್ವನಿಯೇ ಬರುತ್ತಿಲ್ಲ ಎನ್ನುತ್ತಾರೆ ಸಂತ್ರಸ್ತರ ಹೋರಾಟ ಸಮಿತಿ ಗೌರವ ಅಧ್ಯಕ್ಷ ಅಜಯಕುಮಾರ ಸರನಾಯಕ. ಮೊದಲ ಹಂತ ಜಾರಿಗೆ 42 ವರ್ಷ!
ರಾಜ್ಯಕ್ಕೆ ಹಂಚಿಕೆಯಾದ ನೀರು ಬಳಸಿಕೊಳ್ಳಲು ಕೃಷ್ಣಾ ನ್ಯಾಯಾಧಿಕರಣ ಅಂತಿಮ ಗಡುವು ಕೂಡ ನೀಡಿವೆ. ನ್ಯಾ| ಆರ್.ಎಸ್.ಬಚಾವತ್ ನೇತೃತ್ವದ ಕೃಷ್ಣಾ ನ್ಯಾಯಾಧಿಕರಣ-1 ತನ್ನ ಅಂತಿಮ ತೀರ್ಪನ್ನು 1976ರಲ್ಲಿ ನೀಡಿ 173 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಅವಕಾಶ ನೀಡಿತ್ತು. 1964ರಲ್ಲಿ ಆರಂಭಗೊಂಡ ಈ ಯೋಜನೆ ಪೂರ್ಣಗೊಳಿಸಲು ನಮ್ಮ ಸರ್ಕಾರಗಳು ತೆಗೆದು ಕೊಂಡಿದ್ದು ಬರೋಬರಿ 42 ವರ್ಷ. ಇನ್ನು ನ್ಯಾ|ಬ್ರಿಜೇಶಕುಮಾರ ನೇತೃತ್ವದ ಕೃಷ್ಣಾ ನ್ಯಾಯಾಧಿಕರಣ-2, 170 ಟಿಎಂಸಿ ನೀರು ಹಂಚಿಕೆ ಮಾಡಿದ್ದು, ಈ ನೀರು ಬಳಕೆಗೆ 2050ರ ಅಂತಿಮ ಗಡುವು ನೀಡಿದೆ. ಈ ತೀರ್ಪು ಬಂದು ಈಗಾಗಲೇ 14 ವರ್ಷ ಕಳೆದಿದ್ದು, ಇನ್ನು 26 ವರ್ಷದೊಳಗೆ 170 ಟಿಎಂಸಿ ನೀರು ಬಳಸಿಕೊಳ್ಳಬೇಕು. ಇಲ್ಲದಿದ್ದರೆ ಪರ ರಾಜ್ಯಕ್ಕೆ ಹೋಗುವ ಆತಂಕವೂ ಇದೆ. ಯೋಜನೆಗೆ ಬೇಕು ಈ1ಲಕ್ಷ ಕೋಟಿ
ಈ ಯೋಜನೆ ಪೂರ್ಣಗೊಳಿಸಲು 2012ರಲ್ಲಿ ಸರ್ಕಾರ 17,207 ಕೋಟಿ ಸಮಗ್ರ ಯೋಜನಾ ವರದಿ ಸಿದ್ಧಪಡಿ ಸಿತ್ತು. ವಿಳಂಬ ಆದಂತೆ ಯೋಜನಾ ಮೊತ್ತ ಹೆಚ್ಚುತ್ತಿದೆ. 2017ಕ್ಕೆ 51,148 ಕೋಟಿಗೆ ದಾಟಿದೆ. 2023ರಲ್ಲಿ ಈ ಯೋಜನೆಗೆ ಸುಮಾರು 82 ಸಾವಿರ ಕೋಟಿ ಬೇಕಾಗುತ್ತದೆ ಎಂಬ ಅಂದಾಜು ಮಾಡಲಾಗಿದೆ. ಇನ್ನಷ್ಟು ವಿಳಂಬ ಮಾಡಿದರೆ 1 ಲಕ್ಷ ಕೋಟಿ ಅಲ್ಲ 2 ಲಕ್ಷ ಕೋಟಿ ಆದರೂ ಯೋಜನೆ ಪೂರ್ಣಗೊಳಿಸಲು ಕಷ್ಟವಾಗುತ್ತದೆ. ಪ್ರತ್ಯೇಕ ರಾಜ್ಯ ಕೂಗು!
ಸದ್ಯ ಯುಕೆಪಿ 3ನೇ ಹಂತದ ಯೋಜನೆಗಾಗಿ ಬಾಗಲಕೋಟೆಯಲ್ಲಿ ಸಂತ್ರಸ್ತರು ಡಿ.3ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದಾರೆ. ಇದಕ್ಕೆ ಮಠಾಧೀಶರು, ಪಕ್ಷಾತೀತ ನಾಯಕರೂ ಬೆಂಬಲ ಕೊಟ್ಟಿದ್ದಾರೆ. 1964ರಿಂದಲೂ ಯುಕೆಪಿಗೆ ಎಲ್ಲ ಸರ್ಕಾರಗಳು ನಿರ್ಲಕ್ಷé ಮಾಡುತ್ತ ಬಂದಿವೆ. ಕಾವೇರಿಗೆ ಬೆಣ್ಣೆ-ಕೃಷ್ಣೆ ಸುಣ್ಣ ಎಂಬ ನಿಲುವು ತಾಳಿವೆ ಎಂಬ ಆಕ್ರೋಶ ಕೇಳಿ ಬರುತ್ತಿದೆ. ಇದೇ ರೀತಿ ಅನ್ಯಾಯ-ತಾರತಮ್ಯ ಮುಂದುವರೆದರೆ ಪ್ರತ್ಯೇಕ ರಾಜ್ಯದ ಕೂಗು ಬಲಗೊಳ್ಳುತ್ತದೆ ಎಂಬ ಎಚ್ಚರಿಕೆಯೂ ನೀಡಲಾಗುತ್ತಿದೆ. ಸರ್ಕಾರದ ಯೋಜನೆ ಏನು?
ಸರ್ಕಾರ 522 ಮೀ.ವರೆಗೆ ಒಂದು ಹಂತ, 524.256 ಮೀ.ವರೆಗೆ 2ನೇ ಹಂತದಲ್ಲಿ ಸ್ವಾಧೀನಕ್ಕೆ ಮುಂದಾಗಿದೆ. ಕಳೆದ 14 ವರ್ಷಗಳ ಹಿಂದೆಯೇ ಸರ್ವೇ ನಡೆಸಿದ್ದ ಸರ್ಕಾರ ಸ್ವಾಧೀನಗೊಳ್ಳುವ ರೈತರ ಭೂಮಿ ಪಹಣಿಯಲ್ಲಿ ಕೆಬಿಜೆಎನ್‌ಎಲ್ ಎಂದು ದಾಖಲಿಸಿದೆ. ಇದರಿಂದ ರೈತ ಸಹೋದರರು ಭೂಮಿ ವಾಟ್ನಿ, ಮಾರಾಟ, ಅಭಿವೃದ್ಧಿ ಅಥವಾ ಹೊಸ ದೀರ್ಘಕಾಲಿಕ ಬೆಳೆ ಬೆಳೆಯಲು ಆಗುತ್ತಿಲ್ಲ. ಹಕ್ಕೊತ್ತಾಯ ಏನು?
1 3ನೇ ಹಂತದ ಯೋಜನೆಗೆ ಸ್ವಾಧೀನಗೊಳ್ಳುವ 1.33 ಲಕ್ಷ ಎಕರೆ ಭೂಮಿಯನ್ನು ಏಕಕಾಲಕ್ಕೆ ಸ್ವಾಧೀನ ಮಾಡಿಸಿಕೊಂಡು ಪರಿಹಾರ ನೀಡಬೇಕು. 2 ಹೊಸ ಭೂ ಸ್ವಾಧೀನ ಕಾಯಿದೆಯಡಿ ರೈತರಿಗೆ ಪಾವತಿಸಬೇಕಾದ ಸುಮಾರು 5 ಸಾವಿರ ಕೋಟಿಗೂ ಅಧಿಕ ಪರಿಹಾರ ಬಾಕಿ ಇವೆ. ಅದನ್ನು ಪೂರ್ಣಗೊಳಿಸಬೇಕು. 3 ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ವಿಜಯಪುರದಲ್ಲಿ ನಡೆದಿದ್ದ ಸಮಾವೇಶದಲ್ಲಿ ನೀಡಿದ್ದ ಭರವಸೆಯಂತೆ (ವಾರ್ಷಿಕ 40 ಸಾವಿರ ಕೋಟಿ) ಅವಧಿಯಲ್ಲಿ ಈ ಯೋಜನೆ ಪೂರ್ಣಗೊಳಿಸಬೇಕು. ಯಾವ ಹಂತದಲ್ಲಿ ಎಷ್ಟು?
ಹಂತಗಳು ನೀರು ನೀರಾವರಿ ಪ್ರದೇಶ
ಯುಕೆಪಿ 1 119 ಟಿಎಂಸಿ 4.25 ಲಕ್ಷ ಹೆ.
ಯುಕೆಪಿ 2 54 ಟಿಎಂಸಿ 1.97 ಲಕ್ಷ ಹೆ.
ಯುಕೆಪಿ 3 170 ಟಿಎಂಸಿ 5.30 ಲಕ್ಷ ಹೆ. ಶ್ರೀಶೈಲ ಕೆ. ಬಿರಾದಾರ