Advertisement

Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ

02:49 PM Jan 05, 2025 | Team Udayavani |

ಹುಣಸೂರು: ಮೇವನ್ನರಸಿ ನಿತ್ಯ ಕಾಡಿನಿಂದ ಹೊರ ಬಂದು ದಾಂಧಲೆ ನಡೆಸಿ ಬೆಳಗಾಗುವಷ್ಟರಲ್ಲಿ ಕಾಡು ಸೇರುತ್ತಿದ್ದ ಈ ಸಲಗ, ನಾಗರಹೊಳೆ ಉದ್ಯಾನದಂಚಿನ ವೀರನಹೊಸಹಳ್ಳಿ ವಲಯದ ಮುದಗನೂರು ಚಿಕ್ಕಹೆಜ್ಜೂರು, ದೊಡ್ಡಹೆಜ್ಜೂರು, ಕೊಳವಿಗೆ ಸುತ್ತ ಮುತ್ತಲ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಭತ್ತ, ರಾಗಿ ಫಸಲನ್ನು ತಿಂದು ತುಳಿದು ನಾಶಪಡಿಸುತ್ತಿತ್ತು.

Advertisement

ಈ ಬಗ್ಗೆ ರೈತರು ಅರಣ್ಯ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ.

ಎಂದಿನಂತೆ ಜ.4ರ ಶನಿವಾರ ರಾತ್ರಿ ಕಾಡಿನಿಂದ ಹೊರಬಂದು ಹೊಟ್ಟೆ ತುಂಬಿಸಿಕೊಂಡ ಸಲಗ ಜ.5ರ ಭಾನುವಾರ ಮುಂಜಾನೆ ಅರಣ್ಯಕ್ಕೆ ಮರಳುವ ವೇಳೆ  ಅರಸುಹೊಸಕಟ್ಟೆಯ ಕೆರೆಯಲ್ಲಿ ಅಳವಡಿಸಿದ್ದ ಸಿಮೆಂಟ್ ಕಂಬದ ಬ್ಯಾರಿಕೇಡ್ ದಾಟಲಾರದೆ ಸಿಲುಕಿ ಕೆಲಹೊತ್ತು ಘೀಳಿಡುತ್ತಾ ದಾಟಲು ಹರಸಾಹಸ ಪಟ್ಟಿದೆ.

ಆನೆ ಘೀಳಿಡುತ್ತಿದ್ದ ಸದ್ದು ಕೇಳಿದ ಕಾಡಂಚಿನ ಸುತ್ತಮುತ್ತಲ ರೈತರು ಕೆರೆ ಬಳಿಗೆ ಧಾವಿಸಿದ್ದಾರೆ. ಆನೆಯನ್ನು ಕಂಡು ಇದೇ ಆನೆ ನಮ್ಮ ಬೆಳೆ ಹಾಳು ಮಾಡಿದ್ದು ಎಂದು ಹಿಡಿ ಶಾಪ ಹಾಕುತ್ತಾ ಪುಕ್ಕಟೆ ಮನರಂಜನೆ ಪಡೆದು ಬಳಿಕ ಅರಣ್ಯ ಸಿಬ್ಬಂದಿಗಳಿಗೆ ಆನೆಯನ್ನು ಬ್ಯಾರಿಕೇಡ್ ನಿಂದ ಹೊರಗೆ ದಾಟಿಸುವ ಬಗ್ಗೆ ಉಚಿತ ಸಲಹೆ ನೀಡುತ್ತಿದ್ದಾರೆ.

Advertisement

ಇನ್ನೂ ಕೆಲವರು ಮೂಕ ಪ್ರಾಣಿಯ ಸ್ಥಿತಿ ಕಂಡು ಮರುಗಿದರು.

ಕೊನೆಗೆ ಜೆಸಿಬಿ ತಂದು ಆನೆಯ ಹಿಂಬಾಗದಿಂದ ಮೇಲೆತ್ತಿ ಸಿಮೆಂಟ್ ಕಂಬ ಅಲ್ಲಾಡಿಸಿ ಸಲಗನನ್ನು ಕಾಡು ಸೇರಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next