Advertisement
ಕಬಕದ ಟ್ರಾವೆಲ್ ಏಜೆನ್ಸಿಯೊಂದು ಉಮ್ರಾ ಯಾತ್ರೆಗಾಗಿ 17 ದಿನಗಳ ಹಿಂದೆ 172 ಮಂದಿಯನ್ನು ಕರೆದೊಯ್ದಿತ್ತು. ಅವರನ್ನು ಮೆಕ್ಕಾಕ್ಕೆ ಕರೆದುಕೊಂಡು ಹೋಗಿ ಬಳಿಕ ಮದೀನಾಕ್ಕೆ ತೆರಳಿದ್ದರು. ಅಲ್ಲಿ ಅಷ್ಟೂ ಮಂದಿಯನ್ನು ಬಿಟ್ಟು ಏಜೆನ್ಸಿಯವರು ಭಾರತಕ್ಕೆ ವಾಪಸ್ ಬಂದಿದ್ದರಿಂದ ಯಾತ್ರಿಕರು ಅತಂತ್ರರಾಗಿದ್ದರು.ನೂರಕ್ಕೂ ಅಧಿಕ ಮಂದಿ ಸಂಬಂಧಿಕರ ನೆರವಿನಿಂದ ಊರಿಗೆ ವಾಪಸಾಗಿದ್ದಾರೆ. ಆದರೆ ಮಹಿಳೆಯರು, ವೃದ್ಧರು ಸಹಿತ 58 ಮಂದಿ ನೆರವು ಸಿಗದೆ ಕಂಗಾಲಾಗಿದ್ದರು. ವಿಷಯ ತಿಳಿದ ಮೊಯ್ದಿನ್ ಬಾವ, ತತ್‌ಕ್ಷಣ ಸೌದಿಯಲ್ಲಿದ್ದ ತನ್ನ ಸ್ನೇಹಿತರು ಹಾಗೂ ವಿವಿಧ ಸಂಘಟನೆಗಳನ್ನು ಸಂಪರ್ಕಿಸಿ ಅಷ್ಟೂ ಮಂದಿಯ ಪ್ರಯಾಣದ ಹಣವನ್ನು ಹೊಂದಿಸಿದ್ದಾರೆ. ಪರಿಣಾಮವಾಗಿ ಸಂತ್ರಸ್ತರೆಲ್ಲರೂ ಮಂಗಳೂರು, ಕಣ್ಣೂರು, ಕೋಯಿಕ್ಕೋಡ್, ಬೆಂಗಳೂರು ವಿಮಾನ ನಿಲ್ದಾಣ ಮೂಲಕ ಊರಿಗೆ ಮರಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮೊಯ್ದಿನ್ ಬಾವ, ಮದೀನಾದಲ್ಲಿ ಯಾತ್ರಾರ್ಥಿಗಳು ಸಿಲುಕಿರುವ ಸುದ್ದಿ ತಿಳಿದ ಕೂಡಲೇ ಸ್ನೇಹಿತರ ಮೂಲಕ ಅವರ ಸುರಕ್ಷೆಗೆ ಆದ್ಯತೆ ನೀಡಲಾಯಿತು. ಬಳಿಕ 58 ಮಂದಿಯ ಪ್ರಯಾಣ ವೆಚ್ಚವನ್ನು ನಾವೆಲ್ಲರೂ ಸೇರಿ ಹೊಂದಿಸಿ ಅವರನ್ನು ಊರಿಗೆ ಕರೆತಂದಿದ್ದೇವೆ. ರಿಟರ್ನ್ ಟಿಕೆಟ್ ಇಲ್ಲದೆ ಕೇವಲ ಡಮ್ಮಿ ಟಿಕೆಟ್ ಪಡೆದುಕೊಂಡು ವಂಚಿಸುವ ಇಂತಹ ಟ್ರಾವೆಲ್ ಏಜೆನ್ಸಿ ವಿರುದ್ಧ ಹಾಗೂ ಇದಕ್ಕೆ ಅವಕಾಶ ನೀಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅವುಗಳ ಲೈಸನ್ಸ್ ಅನ್ನೂ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ವಂಚನೆಗೊಳಗಾಗಿರುವ ಬಗ್ಗೆ ಸಂತ್ರಸ್ತರೆಲ್ಲರೂ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ತೆರಳಿ ದೂರು ದಾಖಲಿಸಬೇಕು ಎಂದು ಬಾವ ಮನವಿ ಮಾಡಿದ್ದಾರೆ.