Advertisement
ಮನುಷ್ಯನ ಸಾಂಪ್ರದಾಯಿಕ ಆಹಾರ ಕ್ರಮ ದಿನಕಳೆದಂತೆ ಮಾಯವಾಗುತ್ತಿದೆ. ಇಂದು ಏನಿದ್ದರೂ, ಫಾಸ್ಟ್‌ಫುಡ್ ಸಂಸ್ಕೃತಿ ಬಂದುಬಿಟ್ಟಿದ್ದು, ರಸ್ತೆ ಬದಿಯ ಆಹಾರಗಳೇ ಹೆಚ್ಚು ರುಚಿ ಎಂದೆನಿಸ ತೊಡಗಿದೆ. ಸಮರ್ಪಕ ಆಹಾರ ಕ್ರಮವಿಲ್ಲದ ಕಾರಣದಿಂದಾಗಿ ದಿನದಿಂದ ದಿನಕ್ಕೆ ಹೊಸ ಹೊಸ ಕಾಯಿಲೆಗಳು ಕಾಣಿಸಿಕೊಳ್ಳ ತೊಡಗಿವೆ. ಜತೆಗೆ ಕೆಲವರಿಗೆ ಆಹಾರದಿಂದಲೇ ಅಲರ್ಜಿಗಳು ಕಾಣಿಸಿಕೊಳ್ಳುತ್ತಿವೆ.
ನಾವು ಪ್ರತಿನಿತ್ಯ ಸೇವಿಸುವ ಆಹಾರದ ಬಗ್ಗೆ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕಡಿಮೆ. ಏಕೆಂದರೆ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳುವ ಪರಿಪಾಠ ಸಾಮಾನ್ಯವಾಗಿ ಹೆಚ್ಚಿನ ಮಂದಿಗಿರುತ್ತದೆ. ಆದರೆ ಕೆಲವೊಂದು ಆಹಾರಗಳನ್ನು ಮಿತವಾಗಿ ಸೇವಿಸದಿದ್ದರೆ ಅದು ಸ್ಕಿನ್ ಅಲರ್ಜಿ, ನಾಲಿಗೆ ಊದಿಕೊಳ್ಳುವಿಕೆ, ಬಾಯಿಹುಣ್ಣು, ಉಸಿರಾಟದಲ್ಲಿ ತೊಂದರೆ, ಶರೀರದಲ್ಲಿ ದುದ್ದುಗಳು, ಹೊಟ್ಟೆ ನೋವು, ಅಸ್ತಮಾ ಸಮಸ್ಯೆ ಉಲ್ಬಣ ಸಹಿತ ಇನ್ನೂ ಹಲವು ಗಂಭೀರ ಕಾಯಿಲೆಗೆ ಕಾರಣವಾಗಬಹುದು.ಕೆಲವು ಮಂದಿಗೆ ಹೃದಯ ರಕ್ತನಾಳದ ಲಕ್ಷಣಗಳು ಕೂಡ ಆಹಾರದ ಅಲರ್ಜಿಯಿಂದ ಕಂಡುಬರುವ ಸಾಧ್ಯತೆ ಇದೆ. ಇದರಿಂದಾಗಿ ರಕ್ತದೊತ್ತಡ, ತಲೆನೋವು, ಮೂರ್ಛೆ ಬೀಳುವುದು ಮೊದಲಾದ ಲಕ್ಷಣಗಳು ಕಂಡುಬರುತ್ತವೆ. ಕಾರಣ ಏನು?
ಕರಿದ ತಿಂಡಿ ತಿನ್ನುವುದರಿಂದ ದೇಹದಲ್ಲಿ ಅಲರ್ಜಿಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲ, ಬಿಸಿ ಮಾಡಿದ ಎಣ್ಣೆಯೂ ಅಲರ್ಜಿ ತೊಂದರೆ ಉಂಟು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಬೇಕರಿ ತಿಂಡಿಗೆ ಹೆಚ್ಚಿನವರು ಮೊರೆ ಹೋಗುತ್ತಿದ್ದು, ಇದನ್ನು ಕಡಿಮೆ ಮಾಡಿ, ಮಿತವಾಗಿ ತಿಂದರೆ ಒಳಿತು. ಅದಕ್ಕೆಂದು ಸಂಸ್ಕರಿಸಿದ ಎಣ್ಣೆಯಿಂದ ಮಾಡಿದ ಪದಾರ್ಥಗಳನ್ನು ತಿನ್ನಬೇಕು. ಇವಿಷ್ಟೇ ಅಲ್ಲದೆ, ಮೊಟ್ಟೆ, ಹಾಲು, ನೆಲಗಡಲೆ ಬೀಜ, ಮೀನು, ಗೋಧಿ, ಸೋಯಾ ಸಹಿತ ಇನ್ನಿತರ ಆಹಾರಗಳು ಕೂಡ ಅಲರ್ಜಿ ತಂದೊಡ್ಡಬಹುದು.
Related Articles
Advertisement
ಏನು ಮಾಡಬಹುದು?ಕೆಲವೊಂದು ಹಣ್ಣು ಸೇವನೆ ಮಾಡಿದರೆ ದೇಹಕ್ಕೆ ಅನುಕೂಲ. ಅಲರ್ಜಿ ರೋಗದಿಂದ ಮುಕ್ತವಾಗಲು ಹಣ್ಣುಗಳನ್ನು ಸೇವನೆ ಮಾಡಬಹುದು. ಅದರಲ್ಲಿಯೂ ವಿಟಮಿನ್ ಸಿ ಜೀವಸತ್ವವನ್ನು ಹೊಂದಿದ ಹಣ್ಣು ಸೇವನೆ ಒಳಿತು. ಲಿಂಬೆ ಹಣ್ಣು, ಮೋಸಂಬಿ, ಕಿತ್ತಳೆ, ಸೀಬೆ, ಪೇರಳೆ ಹಣ್ಣು ಸೇವನೆಯಿಂದ ಅಲರ್ಜಿ ಸಮಸ್ಯೆಯನ್ನು ಸ್ವಲ್ಪ ಪ್ರಮಾಣದಲ್ಲಿ ದೂರ ಮಾಡಬಹುದು. ಆಹಾರದ ಅಲರ್ಜಿಗೆ ಮನೆ ಮದ್ದು ಕೂಡ ಇದೆ. ದಿನಕ್ಕೆ ಎರಡಿಂದ ಮೂರು ತುಂಡು ಶುಂಠಿ ತಿನ್ನಬೇಕು. ಅಲ್ಲದೇ ಶುಂಠಿ ಟೀ ಕುಡಿದರೆ ಉತ್ತಮ. ಇದರಿಂದ ಅಲರ್ಜಿ, ಅಜೀರ್ಣವನ್ನು ಕಡಿಮೆ ಮಾಡಬಹುದು. ಒಂದು ಗ್ಲಾಸ್ ನೀರಿಗೆ ನಿಂಬೆ ಹಣ್ಣಿನರಸ ಸೇರಿಸಿ, ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಯಾವುದೇ ಅಲರ್ಜಿ ಇದ್ದರೂ, ದೂರವಾಗುತ್ತದೆ. ಆಹಾರ ಅಲರ್ಜಿಯ ಬಗ್ಗೆ ಮೊದಲೇ ತಿಳಿದುಕೊಂಡಿದ್ದರೆ ಅಂಥ ಆಹಾರಗಳಿಂದ ದೂರವಿರುವುದೇ ಸುಲಭೋಪಾಯ. ಇಲ್ಲವಾದರೆ ಸಮಸ್ಯೆ ಬಂದ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸುವುದು ಬಹುಮುಖ್ಯ. ಮಕ್ಕಳಲ್ಲಿ ಅಲರ್ಜಿ ಬಾಧೆ ಹೆಚ್ಚು
ನಮ್ಮ ದಿನನಿತ್ಯದ ಆಹಾರದಲ್ಲಿ ವ್ಯತ್ಯಾಸ ಕಂಡುಬಂದಾಗ ಅಲರ್ಜಿ ಬಾಧಿಸುತ್ತದೆ. ಅದರಲ್ಲಿಯೂ ಶೇ. 4 ರಿಂದ ಶೇ. 6ರಷ್ಟು ಮಕ್ಕಳಲ್ಲಿ ಆಹಾರದ ಅಲರ್ಜಿ ಕಾಣಿಸಿಕೊಳ್ಳುತ್ತದೆ. ಶೇ. 4ರಷ್ಟು ವಯಸ್ಕರಲ್ಲಿ ಈ ರೋಗ ಕಂಡುಬರುತ್ತದೆ. ಶಿಶುಗಳಲ್ಲಿ ಆಹಾರ ಅಲರ್ಜಿ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ. ಒಂದು ವೇಳೆ ಈ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ವ್ಯಾಯಾಮದಲ್ಲಿದೆ ಪರಿಹಾರ
ಇಂದಿನ ಆಹಾರ ಪದ್ಧತಿಯಲ್ಲಿ ಅಲರ್ಜಿಗಳು ಬರುವುದು ಸಾಮಾನ್ಯವಾಗಿದೆ. ಇದರ ಉಪಶಮನಕ್ಕೆ ವ್ಯಾಯಾಮದಲ್ಲಿಯೂ ಪರಿಹಾರವಿದೆ. ಏರೋಬಿಕ್ಸ್ ವ್ಯಾಯಮಾ ಅಂದರೆ, ವೇಗ ನಡಿಗೆಯಿಂದ ಅಲರ್ಜಿ ಸಮಸ್ಯೆಯನ್ನು ತಡೆಯಲು ಸಾಧ್ಯವಿದೆ. ಇದಲ್ಲದೆ, ಶುಂಠಿ, ತುಳಸಿ ಕಷಾಯ ಮಾಡಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪ್ರತಿಯೊಬ್ಬರಲ್ಲೂ ಸಮಸ್ಯೆ ಇರುತ್ತದೆ
ಆಹಾರಕ್ಕೆ ಸಂಬಂಧಪಟ್ಟಂತೆ ಹೆಚ್ಚಿನವರಿಗೆ ಚರ್ಮದ ಅಲರ್ಜಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ರೀತಿಯ ಆಹಾರಗಳು ಆಗುವುದಿಲ್ಲ. ಅಂಥ ಆಹಾರವನ್ನು ಸೇವಿಸಿದಾಗ ರಕ್ತದೊಳಗೆ ಹೋಗಿ ಅಲರ್ಜಿ ಉಂಟು ಮಾಡುತ್ತದೆ. ಹೆಚ್ಚಾಗಿ ಕಾಳುಗಳು, ಕೆಲವೊಂದು ಹಣ್ಣು, ಸಮುದ್ರದ ಆಹಾರ ವಸ್ತುಗಳು, ಮೊಟ್ಟೆ ಸಹಿತ ಇನ್ನಿತರ ಕೆಲವು ಅಹಾರಗಳು ಮನುಷ್ಯನ ದೇಹಕ್ಕೆ ಸ್ಪಂದಿಸದಿದ್ದಾಗ ಅಲರ್ಜಿ ಕಾಣಿಸಿಕೊಳ್ಳುತ್ತದೆ. ಈ ರೀತಿಯ ಅಲರ್ಜಿಗಳನ್ನು ನಿರ್ಲಕ್ಷ್ಯಿಸದೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
– ಡಾ| ಮಂಜುನಾಥ ಶೆಣೈ, ಮಂಗಳೂರು ನವೀನ್ ಭಟ್ ಇಳಂತಿಲ