Advertisement

ಅನಾರೋಗ್ಯಕರ ಜೀವನಶೈಲಿಯೇ ಹೃದಯಾಘಾತಕ್ಕೆ ಕಾರಣ: ಹಿರೇಮಠ

04:39 PM Dec 09, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಆಧುನಿಕ ದಿನಗಳಲ್ಲಿ ಅನಾರೋಗ್ಯಕರ ಜೀವನಶೈಲಿ, ಕಳಪೆ ಆಹಾರ ಪದ್ಧತಿ, ಒತ್ತಡದ ಜೀವನ ಮತ್ತು ಅನುವಂಶಿಕ ಅಂಶಗಳ ಪರಿಣಾಮವಾಗಿ ಹೃದಯಕ್ತನಾಳ ಕಾಯಿಲೆ ಉಂಟಾಗುತ್ತಿದೆ. ಪ್ರತಿಯೊಬ್ಬರೂ ಆರೋಗ್ಯಕರ ಜೀವನಶೈಲಿಯ ಜೊತೆಗೆ ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಕಾರ್ಡಿಯೊಲಿಜಿಸ್ಟ್‌ ಡಾ| ಮಂಜುನಾಥ ಹಿರೇಮಠ ಹೇಳಿದರು.

Advertisement

ನಗರದ ನವಜೀವನ ಹಾರ್ಟ್‌ ಕೇರ್‌ ಸೆಂಟರ್‌ನಲ್ಲಿ ಜರುಗಿದ ಇಂಟ್ರಾವಾಸ್ಕಾಲರ್‌ ಅಲ್ಟ್ರಾಸೌಂಡ್‌ (ಐವಿಯುಎಸ್‌) ಕುರಿತು ತಿಳಿವಳಿಕೆ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಹೃದಯಾಘಾತ ಕಾಯಿಲೆ ಪ್ರಪಂಚದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಕಾಯಿಲೆಯಾಗಿದೆ. ಹೃದಯ ರಕ್ತನಾಳದ ಕಾಯಿಲೆ ಮಾರಣಾಂತಿಕ ಕಾಯಿಲೆಗಳಲ್ಲೊಂದು ಎಂದರು.

ಹೃದಯಾಘಾತ ಕಾಯಿಲೆ ಪತ್ತೆ ಮಾಡಲು ಹಾಗೂ ಚಿಕಿತ್ಸೆ ನೀಡಲು ಇಂಟ್ರಾವಾಸ್ಕಾಲರ್‌ ಅಲ್ಟ್ರಾಸೌಂಡ್‌ (ಐವಿಯುಎಸ್‌) ಸಹಕಾರಿಯಾಗಿದೆ. ಐವಿಯುಎಸ್‌ ಎಂಬುದು ವೈದ್ಯಕೀಯ ತಂತ್ರಜ್ಞಾನವಾಗಿದ್ದು, ಧ್ವನಿ ತರಂಗಗಳನ್ನು ಬಳಸಿ ದೇಹದ ಒಳಗಿನಿಂದ ರಕ್ತ ಅಪಧಮನಿಗಳ ಸೂಕ್ಷ್ಮವಾದ ವಿವರಗಳನ್ನು ಚಿತ್ರ ಸಹಿತ ತಿಳಿಸುತ್ತದೆ ಎಂದರು.

ರಕ್ತದ ಹರಿವಿನ ಮೇಲೆ ಪರಿಣಾಮ ಬೀರುವ ಅಡೆತಡೆಗಳು, ಪ್ಲೇಕ್‌ ನಿರ್ಮಾಣ ಮತ್ತು ಇತರ ಅಸಹಜತೆಗಳನ್ನು ಪತ್ತೆಹಚ್ಚಲು ರಕ್ತನಾಳಗಳ ಒಳಭಾಗ ನೋಡಲು ಇಂಟ್ರಾವಾಸ್ಕಾಲರ್‌ ಅಲ್ಟ್ರಾಸೌಂಡ್‌ ಸಹಾಯ ಮಾಡುತ್ತದೆ. ಅಲ್ಲದೇ, ರಕ್ತದ ಬ್ಲಾಕ್‌ನಲ್ಲಿ ಇರುವಂತಹ ಕೊಬ್ಬಿನಾಂಶದ ಪ್ರತಿಶತ ಹಾಗೂ ಇತರೆ ತ್ಯಾಜ್ಯ ವಸ್ತುಗಳ ಬಗ್ಗೆ ತಿಳಿಯಲು ಐವಿಯುಎಸ್‌ ಉಪಯುಕ್ತ ಸಾಧನ ಎಂದರು.

ಸ್ಟಂಟ್‌ ಹಾಕುವಲ್ಲಿ ಇಂಟ್ರಾವಾಸ್ಕಾಲರ್‌ ಅಲ್ಟ್ರಾಸೌಂಡ್‌ನ್ನು ಬಳಸಲಾಗುತ್ತದೆ. ಸ್ಟಂಟ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಸುಲಭವಾಗಿ ಕಂಡುಹಿಡಿದು ಚಿಕಿತ್ಸೆ ನೀಡಬಹುದು ಎಂದರು.

Advertisement

ಡಾ| ರಾಜಕುಮಾರ ಹಿರೇಮಠ ಮಾತನಾಡಿ, ನವಜೀವನ ಹಾರ್ಟ್‌ ಕೇರ್‌ ಸೆಂಟರ್‌ ಗದಗ ಪರಿಸರದಲ್ಲಿ ಆರಂಭವಾಗಿ ವರ್ಷಗಳು ಪೂರೈಸಿದೆ. ಜಿಲ್ಲೆ ಸೇರಿ ನೆರೆ ಜಿಲ್ಲೆಯ 250ಕ್ಕೂ ಹೆಚ್ಚು ಹೃದಯ ಸಂಬಂಧಿ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು.

ಹೃದಯದ ಅಪಧಮನಿ (ಕೊರೊನರಿ ಆರ್ಟರಿ) ಚಿಕಿತ್ಸೆಯಲ್ಲಿ ಇಂಟ್ರಾ ವಾಸ್ಕಾಲರ್‌ ಅಲ್ಟ್ರಾಸೌಂಡ್‌ ಬಹು ಉಪಯೋಗಿ ಯಂತ್ರವಾಗಿದೆ. ಜಿಲ್ಲೆಯ ಹೃದಯ ಸಂಬಂಧಿ ರೋಗಿಗಳು ಬೇರೆ ಜಿಲ್ಲೆಗಳಿಗೆ ಹೋಗದೆ ಇಲ್ಲೇ ಚಿಕಿತ್ಸೆ ಪಡೆಯಬಹುದೆಂದು ಹೇಳಿದರು.

ಡಾ| ಶಶಾಂಕ ಶಿರೋಳ, ಡಾ| ಸಂಗಮೇಶ ಅಸೂಟಿ, ಡಾ| ಮಧುಸೂದನ ರಾಯ್ಕರ್‌, ಡಾ| ಸಂದೀಪ್‌ ಸೇರಿ ವಿವಿಧ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next