Advertisement

ಕೇವಲ ಉಚಿತ ಪಡಿತರ ವಿತರಣೆ ಹೊರತಾಗಿ ಹೆಚ್ಚು ಉದ್ಯೋಗ ಸೃಷ್ಟಿಸಿ: ಕೇಂದ್ರಕ್ಕೆ ಸುಪ್ರೀಂ

02:47 PM Dec 10, 2024 | Team Udayavani |

ನವದೆಹಲಿ: ಆಹಾರ ಭದ್ರತಾ ಕಾಯ್ದೆಯಡಿ(Food Security Act) ಆಹಾರ ಪಡಿತರ ಸರಬರಾಜು ಮಾಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ (Supreme court), ದೇಶದ ಬಡ ಜನರಿಗೆ ಕೇವಲ ಉಚಿತ ರೇಷನ್‌ ನೀಡುವ ಹೊರತಾಗಿಯೂ ಉದ್ಯೋಗ ಸೃಷ್ಟಿಯತ್ತ ಕೇಂದ್ರ ಸರ್ಕಾರ ಗಮನಹರಿಸಬೇಕೆಂದು ಸಲಹೆ ನೀಡಿದೆ.

Advertisement

“ಒಂದು ವೇಳೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪಡಿತರ ವಿತರಣೆಯನ್ನು ಮುಂದುವರಿಸಿದರೆ, ಪಡಿತರ(ಧವಸ, ಧಾನ್ಯ)ವನ್ನು ವಿತರಿಸುವ ಹೊಣೆ ಕೇಂದ್ರ ಸರ್ಕಾರದ್ದಾಗಿರುವುದರಿಂದ ರಾಜ್ಯ ಸರ್ಕಾರಗಳು ಜನರನ್ನು ಒಲೈಸುವ ನಿಟ್ಟಿನಲ್ಲಿ ಪಡಿತರ ಚೀಟಿಯನ್ನು ವಿತರಿಸುತ್ತಲೇ ಇರುತ್ತದೆ ಎಂದು ಸುಪ್ರೀಂ ಪೀಠ” ಹೇಳಿದೆ.

ಅದೇ ರೀತಿ ಉಚಿತ ಪಡಿತರ ವಿತರಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದರೆ, ಆಗ ಆರ್ಥಿಕ ಕಾರಣ ನೀಡಿ ನಿರಾಕರಿಸಬಹುದು. ಆ ನಿಟ್ಟಿನಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸುವತ್ತ ಗಮನ ಹರಿಸಬೇಕೆಂದು ಸುಪ್ರೀಂಕೋರ್ಟ್‌ ಅಭಿಪ್ರಾಯವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರಗಳು ರೇಷನ್‌ ಕಾರ್ಡ್‌ ಗಳನ್ನು ನೀಡುವುದನ್ನು ಮುಂದುವರಿಸಿದಲ್ಲಿ ಪಡಿತರವನ್ನು ನೀಡುವಂತೆ ಮಾಡಬೇಕಾ ಎಂದು ಪೀಠ ಪ್ರಶ್ನಿಸಿದೆ.

Advertisement

ಕೇಂದ್ರದ ಪರ ವಕೀಲ, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ(National Food Security Act 2013) 80ಕೋಟಿ ಬಡ ಜನರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಗೋಧಿ ಮತ್ತು ಅಕ್ಕಿಯನ್ನು ವಿತರಿಸುತ್ತಿದೆ ಎಂದು ಕೋರ್ಟ್‌ ಗೆ ತಿಳಿಸಿದ್ದರು. ಏತನ್ಮಧ್ಯೆ ಅರ್ಜಿದಾರ, ವಕೀಲ ಪ್ರಶಾಂತ್‌ ಭೂಷಣ್‌ ಅವರು, ಈ ಸ್ಕೀಮ್‌ ನ ಹೊರತಾಗಿಯೂ ದೇಶದಲ್ಲಿ 2ರಿಂದ 3 ಕೋಟಿ ಜನರು ಇದರಿಂದ ವಂಚಿತರಾಗಿದ್ದಾರೆ ಎಂದರು.

ಅರ್ಜಿಯಲ್ಲಿನ ಆಹಾರ ಸಮಸ್ಯೆ ಮತ್ತು ವಲಸಿಗ ಕಾರ್ಮಿಕರ ಕುರಿತು ಎತ್ತಿದ ಕಾಳಜಿಯನ್ನು ಪರಿಗಣಿಸಿರುವುದಾಗಿ ತಿಳಿಸಿದ ಸುಪ್ರೀಂಕೋರ್ಟ್‌, ಈ ಹಿಂದಿನ ಆದೇಶದಂತೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಯಾರು ಪಡಿತರ ಚೀಟಿ ಪಡೆಯಲು ಅರ್ಹರು ಎಂಬುದನ್ನು ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಗುರುತಿಸಿ 2024ರ ನವೆಂಬರ್‌ 19ರೊಳಗೆ ಪಡಿತರ ಚೀಟಿ ವಿತರಿಸುವಂತೆ ನಿರ್ದೇಶನ ನೀಡಿದೆ.

ಈ ಅರ್ಜಿ ವಿಚಾರಣೆ ಪ್ರಕ್ರಿಯೆ ಸಂದರ್ಭದಲ್ಲಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ಅರ್ಜಿದಾರ ಪ್ರಶಾಂತ್‌ ಭೂಷಣ್‌ ನಡುವೆ ಬಿರುಸಿನ ಮಾತಿನ ಚಕಮಕಿಗೆ ಎಡೆಮಾಡಿಕೊಟ್ಟಿತ್ತು. ಬಳಿಕ ಸುಪ್ರಿಂ ಪೀಠ 2025ರ ಜನವರಿ 8ರಂದು ಅರ್ಜಿ ವಿಚಾರಣೆ ಮುಂದೂಡಿರುವುದಾಗಿ ತಿಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next