Advertisement

Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್‌ ನಿಲ್ದಾಣ  

06:03 PM Dec 14, 2024 | Team Udayavani |

ಗೌರಿಬಿದನೂರು: ನಗರದ ಹೃದಯ ಭಾಗದಲ್ಲಿರುವ ಕೆಎಸ್‌ಆರ್‌ ಟಿಸಿ ಬಸ್‌ ನಿಲ್ದಾಣ ನೂರಾರು ಸಮಸ್ಯೆಗಳ ಆಗರ ವಾಗಿದ್ದು, ಸ್ವಚ್ಛತೆ ಯಂತೂ ಮೊದಲೇ ಕಾಣೆಯಾಗಿದೆ. ಎಲ್ಲಿ ನೋಡಿ ದರಲ್ಲಿ ಕಸ, ತ್ಯಾಜ್ಯ, ಪ್ಲಾಸ್ಟಿಕ್‌ ಗಳು ಕಾಣ ಸಿಗು ತ್ತವೆ. ಕಸದ ಬುಟ್ಟಿಯಲ್ಲಿ ಇರಬೇಕಾದ ಕಸ ವೆಲ್ಲ ನಿಲ್ದಾಣದಲ್ಲೇ ಹರಡಿರುತ್ತದೆ.

Advertisement

ನಿಲ್ದಾಣದಲ್ಲಿ “ಸಕಲಂ ಧೂಳು ಮಯಂ’ ಎಂಬಂತಹ ವಾತಾವರಣವಿದೆ. ಬಸ್‌ ಹಾಗೂ ಇತರೆ ವಾಹನ ಗಳಿಂದ ಹೊಗೆ ಸೇರಿದಂತೆ ಇಲ್ಲಿನ ಧೂಳು ಇಡೀ ವಾತಾವರಣವನ್ನು ಕಲುಷಿತ ವನ್ನಾಗಿಸಿದೆ. ನಿಲ್ದಾಣದಲ್ಲಿ ಇರುವ ಶೌಚಾಲಯ ಸ್ವತ್ಛತೆ ಹಾಗೂ ನಿರ್ವಹಣೆ ಇಲ್ಲದೆ ಮೂಲಭೂತ ಸೌಕರ್ಯಗಳ ಕೊರತೆ ಯಿಂದ ಪ್ರಯಾಣಿಕರು ಮೂತ್ರ ವಿಸರ್ಜನೆಗೆ ಬಯಲು ಪ್ರದೇಶ ಅವಲಂಬಿಸಿದ್ದಾರೆ.

110 ಬಸ್‌ಗಳಿದ್ದರೂ ಕಾಯುವುದು ತಪ್ಪಿಲ್ಲ: ಇನ್ನು ಬಸ್‌ಗಳ ವಿಚಾರಕ್ಕೆ ಬರುವು ದಾದರೆ ಗೌರಿಬಿದನೂರು ಡಿಪೋದಲ್ಲಿ 110 ಬಸ್‌ಗಳು ಇದ್ದರೂ, ನಿತ್ಯ ಪ್ರಯಾಣಿಸುವ ಪ್ರಯಾಣಿಕರು ಮಾತ್ರ ಬಸ್‌ಗಾಗಿ ಕಾಯುವುದು ತಪ್ಪಿಲ್ಲ. ಸರಿಯಾದ ಸಮಯಕ್ಕೆ ಬಸ್‌ಗಳು ಬರುವುದಿಲ್ಲ. ಅಲ್ಲದೇ ಬೆಂಗಳೂರು ಮಾರ್ಗಕ್ಕೆ ಬಸ್‌ಗಳ ಕೊರತೆಯಿದ್ದು, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ. ನಿಲ್ದಾಣದಲ್ಲಿ ಆಸನದ ಕೊರತೆ ಇದ್ದು, ಬಸ್‌ ಗಾಗಿ ಪ್ರಯಾಣಿರು ನಿಂತುಕೊಂಡೇ ಕಾಯಬೇಕಾದ ಪರಿಸ್ಥಿತಿ ಇದೆ. ಅಂತರ್‌ ರಾಜ್ಯ ಬಸ್‌ಗಳು ನಿಲ್ದಾಣಕ್ಕೆ ಬಾರದ ಕಾಣದ ಪ್ರಯಾಣಿಕರು ಪರದಾಡುವಂತಾಗಿದೆ.

ಕುಡಿಯುವ ನೀರಿನ ಅವ್ಯವಸ್ಥೆ: ನಿಲ್ದಾಣದಲ್ಲಿ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಓಡಾಟವಿರುತ್ತದೆ. ಆದರೆ ಇಲ್ಲಿ ಕುಡಿಯುವ ನೀರಿಗಾಗಿ ಒಂದು ಘಟಕ ಸ್ಥಾಪನೆ ಮಾಡಿದ್ದಾರೆ, ಅದು ನಿರ್ವಹಣೆ ಇಲ್ಲದೆ ಹಾಳಾಗಿದ್ದು, ಅದನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡದೇ ಮೌನಕ್ಕೆ ಜಾರಿರುವ ಅಧಿಕಾರಿಗಳು ಹಾಗೂ ಕಂಡು ಕಾಣದಂತೆ ಇರುವ ಜನಪ್ರತಿನಿ ಧಿಗಳು ಇದನ್ನು ಸರಿಪಡಿಸುವವರು ಯಾರು ಎಂಬುದು ಯಕ್ಷಪ್ರಶ್ನೆಯಾಗಿದೆ.

ಪಾರ್ಕಿಂಗ್‌ನಲ್ಲಿ ಲೂಟಿ: ಬಸ್‌ ನಿಲ್ದಾಣದಲ್ಲಿ ಸರ್ಕಾರಿ ಬಸ್‌ ಗಳಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಮತ್ತು ನಿಲ್ದಾಣದಲ್ಲಿ ಇರುವ ಹೋಟೆಲ್‌, ಅಂಗಡಿಗಳಿಗೆ ಬರುವವರಿಗೆ ಪಾರ್ಕಿಂಗ್‌ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿ ಒಂದು ದ್ವಿಚಕ್ರ ವಾಹನಕ್ಕೆ 20 ರೂ. ವಸೂಲಿ ಮಾಡುತ್ತಿದ್ದಾರೆ.

Advertisement

ಹೈ ಮಾಸ್ಟ್‌ ವಿದ್ಯುತ್‌ ದೀಪವಿದ್ದರೂ ಪ್ರಯೋಜನವಿಲ್ಲ: ಬಸ್‌ ನಿಲ್ದಾಣದಲ್ಲಿ ಸಂಜೆಯಾದರೆ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಹೈ ಮಾಸ್ಟ್‌ ಲೈಟ್‌ ಅಳವಡಿಸಿದ್ದು, ನೋಡುವುದಕ್ಕೆ ಮಾತ್ರ ಸೀಮಿತವಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಶೌಚಾಲಯ, ಹೋಟೆಲ್‌, ಮಹಿಳೆಯರಿಗೆ ವಿಶ್ರಾಂತಿ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ಕ್ಯಾಮೆರಾ ವ್ಯವಸ್ಥೆ, ಟಿ.ವಿ ಡಿಸ್‌ಪ್ಲೇ, ದ್ವಿಚಕ್ರ ವಾಹನ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿದಿನವು ಗೌರಿಬಿದನೂರಿನಿಂದ ಬೆಂಗಳೂರು ಮಾರ್ಗವಾಗಿ ಸುಮಾರು 6000 ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ, ಚಿಕ್ಕಬಳ್ಳಾಪುರ ಮಾರ್ಗವಾಗಿ ಸುಮಾರು 3000 ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ, ಜೊತೆಗೆ ತಾಲೂಕಿನ ಎಲ್ಲಾ ಹಳ್ಳಿಗಳಿಗೂ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿನ ಬಸ್‌ ನಿಲ್ದಾಣದ ಸ್ಥಳ ಚಿಕ್ಕದಾಗಿದ್ದರಿಂದ ಪ್ರಯಾಣಿಕರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿಲ್ಲ. ●ರವಿಶಂಕರ್‌, ಡಿಪೋ ವ್ಯವಸ್ಥಾಪಕ

ನಗರಕ್ಕೆ ನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ. ವ್ಯಾಪಾರ ವಹಿವಾಟು, ಆಸ್ಪತ್ರೆ, ತಹಶೀಲ್ದಾರ್‌ ಕಚೇರಿ ಇನ್ನಿತರ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಓಡಾಟ ಹೆಚ್ಚಾಗಿದ್ದು, ಸರ್ಕಾರಿ ಬಸ್‌ ವ್ಯವಸ್ಥೆ ತುಂಬಾ ಕಡಿಮೆ ಇದೆ. ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಬಸ್‌ ವ್ಯವಸ್ಥೆ ಕಲ್ಪಿಸಬೇಕು. ●ಗಂಗಣ್ಣ(ಚಿಕ್ಕ ಗಂಗಪ್ಪ), ಪ್ರಯಾಣಿಕ

ಕೆ.ಪಿ.ಸಮೀರ

Advertisement

Udayavani is now on Telegram. Click here to join our channel and stay updated with the latest news.

Next