Advertisement
ವಾರಾಂತ್ಯದಲ್ಲಿ ಬಸ್‌ಗಾಗಿ ಪರದಾಟ: ವಾರಾಂತ್ಯದಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದರೆ ಒಂದೇ ಒಂದು ಬಸ್ ಬರುವುದಿಲ್ಲ. ಬಂದ ಬಸ್ ಹತ್ತಲು ಪ್ರಯಾಣಿಕರು ಕೈಕೈ ಮಿಲಾಯಿಸುತ್ತಾರೆ. ಇನ್ನು ಎಷ್ಟೋ ಮಹಿಳೆಯರು ಸೀಟಿಗಾಗಿ ಜುಟ್ಟು ಹಿಡಿದು ಹೊಡಿದಾಡಿಕೊಂಡ ಉದಾಹರಣೆಗಳೂ ಇವೆ. ಜತೆಗೆ ಟಿಸಿ ಯೊಂದಿಗೆ ವಾಗ್ವಾದವೂ ನಡೆದಿದೆ. ರಾತ್ರಿ 8.30ರ ಬೆಂಗಳೂರಿಗೆ ಬಸ್ ಇಲ್ಲ: ಮಾಗಡಿಯಿಂದ 8.30ಕ್ಕೆ ಬಸ್‌ಗಳೆಲ್ಲವೂ ಹೊರಟು ಹೋಗಿರುತ್ತವೆ. ಕೆಲಸ ಕಾರ್ಯ ಮುಗಿಸಿಕೊಂಡು ಬೆಂಗಳೂರು ನಗರಕ್ಕೆ ಹೋಗಬೇಕನ್ನುವ ಪ್ರಯಾಣಿಕರಿಗೆ ಬಸ್ ಇಲ್ಲ, ರಾತ್ರಿ 8.30 ಸಮಯವಾದರೆ ಸಾಕು ಬಸ್ ನಿಲ್ದಾಣ ಬಿಕೋ ಎನ್ನುತ್ತಿರುತ್ತದೆ.
Related Articles
Advertisement
ಸಾರಿಗೆ ಸಚಿವ, ಜಿಲ್ಲಾ ಉಸ್ತವಾರಿ ಸಚಿವರ ಕ್ಷೇತ್ರದಲ್ಲಿಯೇ ಬಸ್‌ಗಳ ಸಮಸ್ಯೆಯಾದರೆ, ಬೇರೆಡೆ ಹೇಗೆ ಎಂಬ ಪ್ರಶ್ನೆ ಪ್ರಯಾಣಿಕರದ್ದು. ಜಿಲ್ಲಾ ಉಸ್ತವಾರಿ ಸಚಿವರೇ ಮಾಗಡಿ ಕಡೆ ನೋಡಿ, ಹೊಸ ಹೊಸ ಬಸ್ ನೀಡಿ ಎಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ. ನಿಲ್ದಾಣಕ್ಕೆ ಒಂದು ಬಸ್ ಬಂದರೆ ಸಾಕು 50 ಸೀಟಿಗೆ ಕನಿಷ್ಠ 200 ರಿಂದ 250 ಮಂದಿ ಮುಗಿಬೀಳುತ್ತಾರೆ. ಅದರಲ್ಲೂ ಬಂದ ಬಸ್ ಹತ್ತಿ ಕುಳಿತರೆ ಅರ್ಧ ದಾರಿಯಲ್ಲಿಯೇ ಕೆಟ್ಟು ನಿಲ್ಲುತ್ತವೆ. ಬೇರೆ ಬಸ್ ಬರುವವರೆಗೂ ಕಾದು ಕುಳಿತು ಪ್ರಯಾಣ ಮಾಡಬೇಕಿದೆ. ಇನ್ನು ಬಸ್ಸು ನಿಲ್ದಾಣದಲ್ಲಿ ಸೀಟು ಸಿಗುವುದಿಲ್ಲ ಎಂದು ಪ್ರಯಾಣಿಕರು ಡಿಪೋ ಬಾಗಿಲ ಬಳಿಗೆ ತೆರಳಿ ಕಾದು ನಿಲ್ಲುತ್ತಾರೆ. ಎಷ್ಟೋ ಬಾರಿ ಬಸ್ ಸೀಟಿಗಾಗಿ ಜಗಳ, ರಂಪಾಟ ನಡೆದದ್ದೂ ಉಂಟು. ಪ್ರಯಾಣಿಕರು ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದರು. ಶಾಸಕ ಎಚ್.ಸಿ.ಬಾಲಕೃಷ್ಣ ಅವರೇ ಖುದ್ದು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಡಿಪೋ ವ್ಯವಸ್ಥಾಪಕರ, ಟಿಸಿ, ಪ್ರಯಾಣಿಕರ ಸಭೆ ಕರೆದು ಸುದೀರ್ಘವಾಗಿ ಚರ್ಚಿಸಿದ್ದರು. ಒಂದೆರಡು ದಿನ ಬಸ್ ಸಮಯಕ್ಕೆ ಸರಿಯಗಿ ಸಂಚರಿಸಿದವು. ಮತ್ತೆ ಅದೇ ಪರಿಸ್ಥಿತಿ.
ಸಮಸ್ಯೆಗಳ ಸರಮಾಲೆ : ಶುದ್ಧ ನೀರಿನ ಕೇಂದ್ರ, ಶೌಚಾಲಯವೂ ಸ್ವತ್ಛತೆಯಿಲ್ಲ, ಉತ್ತಮ ಹೋಟೆಲ್ ಇಲ್ಲ, ಇನ್ನು ಬಸ್ ನಿಲ್ದಾಣದ ಮುಖ್ಯ ದ್ವಾರವೇ ಪ್ರಯಾಣಿಕರಿಗೆ ಕಾಣುತ್ತಿಲ್ಲ. ಇರುವ ದ್ವಾರಬಾಗಿಲು ಅಂಗಡಿ ಮಳಿಗೆಳಿಂದ ಆವೃತವಾಗಿರುವುದರಿಂದ ಬಸ್ ಆಗಮನ, ನಿರ್ಗಮನ ಸ್ಥಳವೇ ಪ್ರಯಾಣಿಕರ ದ್ವಾರ ಬಾಗಿಲಾಗಿದೆ.
ಬಸ್ ಸಂಚಾರ: ಮಾಗಡಿ ಡಿಪೋದಲ್ಲಿ 83 ಬಸ್ ಗಳಿದ್ದು, ಇದರಲ್ಲಿ 30 ಬಸ್ ಕೆಟ್ಟು ನಿಂತಿರುತ್ತವೆ. ಮತ್ತೆ 20 ಬಸ್ ಚಾಲಕ, ನಿರ್ವಾಹಕ ಇಲ್ಲವೆಂದು ಡಿಪೋದಲ್ಲಿಯೇ ನಿಂತಿರುತ್ತವೆ. ಬಸ್ ಬಾರದಿದ್ದಾಗ ಪ್ರಶ್ನಿಸಿದರೆ ಬಸ್ ಬಿಡಿಭಾಗ ಇಲ್ಲ, ಇಂಡೆಂಟ್ ಹಾಕಿದ್ದೇವೆ. ಕಳಿಸಿಲ್ಲ, ಬಂದ ಕೂಡಲೆ ಬಸ್ ರಿಪೇರಿ ಎಂಬ ಉತ್ತರ ಬರುತ್ತದೆ. ಡಿಪೋ ವ್ಯವಸ್ಥಾಪಕರಿಗೆ ಕರೆ ಮಾಡಿದರೆ, ನಂಬರ್ ಬ್ಲಾಕ್ ಲಿಸ್ಟ್‌ಗೆ ಹಾಕಿ ಸುಮ್ಮನಾಗುತ್ತಾರೆ.
ಮಾಗಡಿಗೆ 25 ಹೊಸ ಬಸ್ ನೀಡಲು ಸಾರಿಗೆ ಸಚಿವರಿಗೆ ಮನವಿ ಮಾಡಲಾಗಿದೆ. ಹೊಸ ವರ್ಷಕ್ಕೆ ತಾಲೂಕಿಗೆ ಹೊಸ ಬಸ್ ಬರುವ ವಿಶ್ವಾಸವಿದೆ. ●ಎಚ್.ಸಿ.ಬಾಲಕೃಷ್ಣ, ಶಾಸಕ
ಗ್ರಾಮೀಣ ಪ್ರದೇಶಕ್ಕೂ ಸಾರಿಗೆ ವ್ಯವಸ್ಥೆ ಇಲ್ಲದೇ ರೈತರು ತಾವು ಬೆಳೆದ ತರಕಾರಿ, ಸೊಪ್ಪನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಕೇಳಿದಷ್ಟು ಬಾಡಿಗೆ ನೀಡಿ ಆಟೋ, ಟೆಂಪೋ ಹೋದರೂ ಬೆಲೆ ಸಿಗದಿದ್ದರೆ ನಷ್ಟವಾಗುತ್ತದೆ. ●ಹೊಸಪಾಳ್ಯದ ಲೋಕೇಶ್, ರೈತ ಸಂಘದ ಅಧ್ಯಕ್ಷ
ಸಿಬ್ಬಂದಿ ಕೊರತೆಯಿದೆ. 10 ವರ್ಷ ದಿಂದ ಸಿಬ್ಬಂದಿ ನೇಮಕಾತಿ ಆಗಿಲ್ಲ, ಚಾಲಕರು ನಿರ್ವಾಹಕರ ಕೊರತೆಯಿದೆ. ಹೇಗೆ ನಿರ್ವಹಿಸುವುದು ಎಂಬುದೇ ನಮಗೆ ಸವಾಲಾಗಿದೆ. ಆದಷ್ಟು ಬೇಗ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಡಿಪೋ ವ್ಯವಸ್ಥಾಪಕರೇ ಬರಲು ಹಿಂಜರಿಯುತ್ತಿದ್ದಾರೆ. -ರಾಮಾಂಜಿನಪ್ಪ, ಟ್ರಾಫಿಕ್ ಇನ್ಸ್‌ಪೆಕ್ಟರ್ (ಡಿಪೋ ವ್ಯವಸ್ಥಾಪಕರ ಪರ ಹೇಳಿಕೆ)
– ತಿರುಮಲೆ ಶ್ರೀನಿವಾಸ್