Advertisement

ಸ್ಮಾರ್ಟ್‌ಸಿಟಿ ಕಾಮಗಾರಿ; ಉಸ್ತುವಾರಿ ಸಚಿವರಿಂದ ನಗರ ಸಂಚಾರ

10:51 AM May 30, 2022 | Team Udayavani |

ಮಹಾನಗರ: ಸ್ಮಾರ್ಟ್‌ಸಿಟಿ ವತಿ ಯಿಂದ ನಗರದಲ್ಲಿ ಕೈಗೊಳ್ಳಲಾದ ಕಾಮಗಾರಿಗಳನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ ಅವರು ರವಿವಾರ ಪರಿಶೀಲನೆ ನಡೆಸಿದರು. ಬೆಳಗ್ಗೆ ಸುಮಾರು 7 ಗಂಟೆಗೆ ಸಿಟಿ ರೌಂಡ್‌ ಆರಂಭಿಸಿದ ಸಚಿವರು 9 ಗಂಟೆಯವರೆಗೆ ಉರ್ವಮಾರ್ಕೆಟ್‌ ಬಳಿಯ ಒಳಾಂಗಣ ಕ್ರೀಡಾಂಗಣ, ಮಂಗಳಾ ಕ್ರೀಡಾಂಗಣ ಗ್ಯಾಲರಿ, ಸ್ಟೇಟ್‌ಬ್ಯಾಂಕ್‌ ಸರ್ವಿಸ್‌ ಬಸ್‌ ನಿಲ್ದಾಣ, ಕ್ಲಾಕ್‌ ಟವರ್‌ ಬಳಿಯ ಅಂಡರ್‌ಪಾಸ್‌, ಎಮ್ಮೆಕೆರೆ ಈಜುಕೊಳ, ಮಂಗಳಾದೇವಿ ದೇವಸ್ಥಾನ ರಸ್ತೆ, ಜಪ್ಪು – ಮಹಾಕಾಳಿಪಡ್ಪು ರಸ್ತೆ, ಕಂಕನಾಡಿ ಮಾರುಕಟ್ಟೆ ಮತ್ತು ಕದ್ರಿ ಪಾರ್ಕ್‌ ಸ್ಮಾರ್ಟ್‌ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು.

Advertisement

ಉರ್ವ ಮಾರುಕಟ್ಟೆ ಬಳಿ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗುತ್ತಿದ್ದು, ಶೇ.45 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 9 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸಿವಿಲ್‌ ಕಾಮಗಾರಿಯ ಜತೆ ಇಂಟೀರಿ ಯರ್‌ ಕಾಮಗಾರಿಗೂ ಆದ್ಯತೆ ನೀಡಬೇಕು. ತತ್‌ಕ್ಷಣ ಸ್ಲ್ಯಾಬ್ ಅಳವಡಿಸಬೇಕು ಎಂದರು.

ಸಿಟಿ ಬಸ್‌ ನಿಲ್ದಾಣ; ಗ್ರಂಥಾಲಯವಿರಲಿ!

ಸ್ಟೇಟ್‌ಬ್ಯಾಂಕ್‌ನಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಬಸ್‌ ನಿಲ್ದಾಣ ವೀಕ್ಷಿಸಿದ ಸಚಿವರಿಗೆ ಶಾಸಕ ವೇದವ್ಯಾಸ ಕಾಮತ್‌ ಮತ್ತು ಮೇಯರ್‌ ಪ್ರೇಮಾನಂದ ಶೆಟ್ಟಿ, ಅಧಿಕಾರಿಗಳು ಕಾಮಗಾ ರಿಯ ವಿವರ ನೀಡಿದರು. ಬಸ್‌ ನಿಲ್ದಾಣದಲ್ಲಿ ಕುಡಿಯುವ ನೀರು, ಶೌಚಾಲಯಕ್ಕೆ ಆದ್ಯತೆ ನೀಡಬೇಕು. ಮಹಿಳೆಯರು ತಂಗಲು ಪ್ರತ್ಯೇಕ ಕೊಠಡಿ, ಗ್ರಂಥಾಲಯ ನಿರ್ಮಾಣದ ಬಗ್ಗೆಯೂ ಗಮನಹರಿಸಿ. ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು. ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ ಸಿಟಿ ಕಾಮಗಾರಿಗಳು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಸ್ತಾವನೆ ಸಲ್ಲಿಸಲು ಸೂಚನೆ

Advertisement

ಮಂಗಳಾ ಕ್ರೀಡಾಂಗಣದಲ್ಲಿ ಮೊದಲನೇ ಹಂತದ ಸುಸಜ್ಜಿತ ಗ್ಯಾಲರಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಮುಂದುವರಿದ ಕಾಮಗಾರಿಗೆ ಕೇಂದ್ರ ಸರಕಾರದ ಯೋಜನೆಯಿಂದ ಅನುದಾನ ಒದಗಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಬೇಕು ಅಧಿಕಾರಿಗಳು ಈ ಕುರಿತು ಸವಿವರ ಒಳಗೊಂಡ ಪ್ರಸ್ತಾವನೆಯನ್ನು ನನಗೆ ಕಳುಹಿಸಿ. ಸಂಬಂಧಪಟ್ಟ ಅಧಿಕಾರಿಗಳ ಜತೆ ಈ ಕುರಿತು ಚರ್ಚಿಸಲಾಗುವುದು ಎಂದು ಸಚಿವ ಸುನಿಲ್‌ ಕುಮಾರ್‌ ಹೇಳಿದರು.

ನೂತನವಾಗಿ ನಿರ್ಮಾಣಗೊಂಡ ಜಿಮ್‌ ವೀಕ್ಷಿಸಿದ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಡಿ. ವೇದವ್ಯಾಸ ಕಾಮತ್‌, ಮೇಯರ್‌ ಪ್ರೇಮಾನಂದ ಶೆಟ್ಟಿ, ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಕುಮಾರ್‌ ಮಿಶ್ರಾ, ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌, ಸ್ಮಾರ್ಟ್‌ಸಿಟಿ ಜನರಲ್‌ ಮ್ಯಾನೇಜರ್‌ ಅರುಣ್‌ಪ್ರಭ, ಸ್ಥಳೀಯ ಮನಪಾ ಸದಸ್ಯರು, ಅಧಿಕಾರಿಗಳಾದ ಕೆ.ಎಸ್. ಲಿಂಗೇಗೌಡ, ಚಂದ್ರಕಾಂತ್‌, ರಾಘವೇಂದ್ರ, ಮಂಜುಕೀರ್ತಿ, ಮಹಾನಗರ ಪಾಲಿಕೆ, ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಭಾಗವಹಿಸಿದ್ದರು. ರಸ್ತೆ ಬದಿ ಚಹಾ ಸೇವಿಸಿದ ಸಚಿವರು ಸ್ಮಾರ್ಟ್‌ಸಿಟಿ ಕಾಮಗಾರಿ ವೀಕ್ಷಣೆ ವೇಳೆ ಮಂಗಳಾದೇವಿ ಬಳಿ ಸಣ್ಣ ಹೊಟೇಲ್‌ ವೊಂದರಲ್ಲಿ ಸಚಿವರು ಚಹಾ ಸೇವಿಸಿ ಸರಳತೆ ಮೆರೆದರು. ಇದೇ ವೇಳೆ ಸಾರ್ವಜನಿಕರ ಜತೆ ಕುಶಲೋಪರಿ ವಿಚಾರಿಸಿದರು. ಶಾಸಕರು, ಮೇಯರ್‌, ಜಿಲ್ಲಾಧಿಕಾರಿಗಳು ಸಹಿತ ಅಧಿಕಾರಿಗಳು ಇದೇ ವೇಳೆ ಸಾಥ್‌ ನೀಡಿದರು.

ಪ್ರಗತಿಯಲಿವೆ 9 ಯೋಜನೆ

ನಗರದಲ್ಲಿ ಸದ್ಯ ಸ್ಮಾರ್ಟ್‌ಸಿಟಿಯ ಪ್ರಮುಖ 9 ಯೋಜನೆಗಳು ವೇಗ ಪಡೆದುಕೊಳ್ಳುತ್ತಿವೆ. ಉರ್ವ ಮಾರುಕಟ್ಟೆ ಬಳಿ 20.54 ಕೋ. ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮೂರು ಕಬಡ್ಡಿ ಕೋರ್ಟ್‌, 5 ಬ್ಯಾಡ್ಮಿಂಟನ್‌ ಕೋರ್ಟ್‌ ನಿರ್ಮಾಣವಾಗುತ್ತಿದೆ. ಸದ್ಯ ನೆಲ ಮಹಡಿಯ ಸ್ಲಾಬ್‌ ಪೂರ್ಣಗೊಂಡಿದ್ದು, ಮೊದನೇ ಮಹಡಿಯ ಸ್ಲಾಬ್‌ ಕಾಮಗಾರಿ ಅಂಗಡಿಗಳಿಗೆ ಎಕ್ಸವೇಶನ್‌, ಗ್ಯಾಲರಿ ಕಾಮಗಾರಿ ಪ್ರಗತಿಯಲ್ಲಿದೆ. ಈ ವರ್ಷ ಡಿಸೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮಂಗಳಾ ಸ್ಟೇಡಿಯಂನ ಮೊದಲನೇ ಹಂತದ ಕಾಮಗಾರಿ 10 ಕೋಟಿ ರೂ. ವೆಚ್ಚದಲ್ಲಿ ಬಹುತೇಕ ಪೂರ್ಣಗೊಂಡಿದೆ. ಗ್ಯಾಲರಿ, ಜಿಮ್‌, ಜಾಗಿಂಗ್‌ ಟ್ರ್ಯಾಕ್‌ ಒಳಗೊಂಡಿದೆ. ಹಂಪನಕಟ್ಟೆ ಬಳಿ ಅಂಡರ್‌ಪಾಸ್‌ ಕಾಮಗಾರಿ ನಡೆಯುತ್ತಿದ್ದು, ಶೇ.90ರಷ್ಟು ಪೂರ್ಣಗೊಂಡಿದೆ. ಉದ್ಯಾನವನದಲ್ಲಿ ಪಾದಚಾರಿ ಮಾರ್ಗ ನೆಲಹಾಸು, ಆವರಣಗೋಡೆ, ನೀರಾವರಿ, ವಿದ್ಯುತ್‌ ಕೆಲಸ, ತೋಟಗಾರಿಕೆಯ ಪೂರ್ವ ಸಿದ್ಧತಾ ಕಾಮಗಾರಿಗಳು ಪ್ರಗತಿಯಲ್ಲಿವೆ. ಎಮ್ಮೆಕೆರೆ ಬಳಿ 19.23 ಕೋ.ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಕಾಮಗಾರಿ ಪ್ರಗತಿಯಲ್ಲಿ ಡಿಸೆಂಬರ್‌ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಕದ್ರಿ ಪಾರ್ಕ್‌ ರಸ್ತೆ 12 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿದ್ದು, ಮೊದಲನೇ ಹಂತದ ಕಾಮಗಾರಿ ಶೇ.95ರಷ್ಟು ಪೂರ್ಣಗೊಂಡಿದೆ. ಮಳೆಗಾಲದ ಅಂತ್ಯದೊಳಗೆ 2ನೇ ಹಂತದ ಕಾಮಗಾರಿಯೂ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಪಾಲಿಕೆಯಿಂದ ಪ್ರಗತಿಯಲ್ಲಿರುವ ಕಂಕನಾಡಿ ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣ ಕಾಮಗಾರಿ ಡಿಸೆಂಬರ್‌ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಅದೇ ರೀತಿ ಜಲಸಿರಿ ಕುಡಿಯುವ ನೀರಿನ ಕಾಮಗಾರಿ, ಸ್ಮಾರ್ಟ್‌ ರಸ್ತೆ ಪ್ಯಾಕೇಜ್‌-6 ಕಾಮಗಾರಿ, ಜಪ್ಪು -ಮಹಾಕಾಳಿಪಡ್ಪು ರಸ್ತೆ ಕಾಮಗಾರಿ, ಸ್ಟೇಟ್‌ಬ್ಯಾಂಕ್‌ ಸರ್ವಿಸ್‌ ನಿಲ್ದಾಣ ಕಾಮಗಾರಿಗಳು ಪ್ರಗತಿಯಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next