ಬೆಂಗಳೂರು: ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅಡಿ ಕೈಗೊತ್ತಿಕೊಂಡಿರುವ ಟೆಂಡರ್ ಶ್ಯೂರ್ ಕಾಮಗಾರಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ಅಗೆಯಲಾಗಿರುವ ರಸ್ತೆಗಳನ್ನು ಇನ್ನು ಎರಡು ತಿಂಗಳಲ್ಲಿ ಮುಚ್ಚುವಂತೆ ಬಿಬಿಎಂಪಿಯ ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರು ಸ್ಮಾರ್ಟ್ ಸಿಟಿ ಯೋಜನಾ ವಿಭಾಗದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬಸವೇಶ್ವರ ವೃತ್ತದ ಬಳಿಯ ರಾಜಭವನ ರಸ್ತೆ ಸೇರಿದಂತೆ ನಗರದ ಪ್ರಮುಖ 36 ರಸ್ತೆಗಳನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸ್ಮಾರ್ಟ್‌ಸಿಟಿ ಯೋಜನೆ ರೂಪಿಸಿಕೊಂಡಿದೆ. ಚಾಲುಕ್ಯ ಸರ್ಕಲ್‌ನಿಂದ ರೇಸ್ ಕೋರ್ಸ್ ರಸ್ತೆ, ರಾಜಭವನ ರಸ್ತೆ, ಇನ್ಫೆಂಟ್ರಿ ರಸ್ತೆ, ನೆಹರು ಪ್ಲಾನಿಟೋರಿಯಂ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಟೆಂಡರ್ ಶ್ಯೂರ್ ಮಾದರಿಯ ಕಾಮಗಾರಿಗಳನ್ನು ಪಾಲಿಕೆಯ ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರು ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಮಂದಗತಿಯಲ್ಲಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಅಗೆಯಲಾಗಿರುವ ರಸ್ತೆಗಳನ್ನು ಇನ್ನು ಎರಡು ತಿಂಗಳ ಒಳಗಾಗಿ ಮುಚ್ಚಿ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಮಸ್ಯೆ ತಪ್ಪಿಸುವಂತೆ ನಿರ್ದೇಶನ ನೀಡಿದರು.
ಪರಿಶೀಲನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಗೌರವ್ ಗುಪ್ತಾ, ನಗರದಲ್ಲಿನ ಟೆಂಡರ್ ಶ್ಯೂರ್ ಕಾಮಗಾರಿ ವಿಳಂಬ ಸಂಬಂಧಪಟ್ಟಂತೆ ಅಧಿಕಾರಿಗಳು ಹಲವು ಕಾರಣ ನೀಡಿದ್ದಾರೆ. ಆದರೆ, ಕಾರಣ ನೀಡುವುದಕ್ಕಿಂತ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ತಿಳಿಸಲಾಗಿದೆ. ಗುತ್ತಿಗೆದಾರರು ಕೆಲಸವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ.ಸಕಾಲದಲ್ಲಿ ಕೆಲಸ ಪೂರ್ಣಗೊಳಿಸುವ ನಿಟ್ಟಿನಲ್ಲಿ ಎಂಜಿನಿಯರ್‌ಗಳು ಮೇಲ್ವಿಚಾರಣೆ ನಡೆಸಬೇಕು. ಈ ಸಂಬಂಧ ಶೀಘ್ರ ಸಭೆ ನಡೆಸಲಾಗುವುದು ಎಂದರು.
ಬೆಂಗಳೂರು ಸ್ಮಾರ್ಟ್ ಸಿಟಿ ಲಿ.ನ ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರತಿಕ್ರಿಯಿಸಿ, ಸ್ಮಾರ್ಟ್‌ಸಿಟಿ ಯೋಜನೆಯಿಂದ ನಗರದ 36 ರಸ್ತೆಗಳನ್ನು ಟೆಂಡರ್ ಶ್ಯೂರ್ ಮಾದರಿಯ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಮಾದರಿಯ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ವೇಳೆ ಯೂಟಿಲಿಟಿ (ಒಳಚರಂಡಿ, ವಿದ್ಯುತ್ ಪೈಪ್, ನೀರು ಸರಬರಾಜು ಸೇರಿದಂತೆ ವಿವಿಧ ಪೈಪ್‌ಲೈನ್)ಬದಲಾವಣೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಇನ್ನು ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆಯೂ ಸೃಷ್ಟಿಯಾಗಿದೆ. ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
36 ರಸ್ತೆಗಳಲ್ಲಿ 22 ರಸ್ತೆಗಳನ್ನು ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರ ಹಸ್ತಾಂತರ ಮಾಡಲಾಗುವುದು. ಈಗಾಗಲೇ ಕಾಮಗಾರಿಗಾಗಿ ಅಗೆಯಲಾಗಿರುವ ರಸ್ತೆಗಳನ್ನುಶೀಘ್ರ ಮುಚ್ಚಲಾಗುವುದು ಎಂದು ಹೇಳಿದರು.ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸುವ ವೇಳೆ ಪಾಲಿಕೆ ವಿಶೇಷ ಆಯುಕ್ತರು (ಯೋಜನೆ) ಮನೋಜ್ ಜೈನ್, ಪೂರ್ವ ವಲಯ ಮುಖ್ಯ ಎಂಜಿನಿಯರ್ ಪ್ರಭಾಕರ್, ಮುಖ್ಯ ಎಂಜಿನಿಯರ್ (ಸ್ಮಾರ್ಟ್ ಸಿಟಿ) ಶ್ರೀನಿವಾಸ್ ಇತರರಿದ್ದರು.
ಎಂಜಿನಿಯರ್‌ಗಳ ಕೊರತೆ: ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳನ್ನು ಅನುಷ್ಟಾನ ಮಾಡುವುದಕ್ಕೆ ಎಂಜಿನಿಯರ್‌ಗಳ ಕೊರತೆ ಇದೆ. ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಜಾರಿ ಮಾಡಲು ಬೇಕಾದಷ್ಟು ಎಂಜಿನಿಯರ್‌ಗಳನ್ನು ಸರ್ಕಾರ ಇನ್ನು ನೀಡಿಲ್ಲ. ಈ ವಿಷಯವನ್ನು ಆಡಳಿತಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಖುದ್ದು ಎಂಜಿನಿಯರ್‌ಗಳ ಹಾಜರಿದ್ದುಕಾರ್ಯನಿರ್ವಹಿಸುವಂತೆ ಆಡಳಿತಾಧಿಕಾರಿ ಸೂಚನೆ ನೀಡಿದ್ದಾರೆ.
ಈ ಸಂಬಂಧ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನು ಯೂಟಿಲಿಟಿ ಸ್ಥಳಾಂತರ ಮಾಡುವ ವೇಳೆ ನಿರ್ದಿಷ್ಟ ಯೋಜನೆ ರೂಪಿಸಿಕೊಂಡು ಶೀಘ್ರ ಕಾಮಗಾರಿ ಮುಗಿಸುವಂತೆ ನಿರ್ದೇಶನ ನೀಡಿದ್ದಾರೆ ಎಂದು ಯೋಜನೆ ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾಹಿತಿ ನೀಡಿದರು