Advertisement

ಕೊಳೆಗೇರಿ, ನೀರಿನ ಸಮಸ್ಯೆ ಕ್ಷೇತ್ರದ ಕಪ್ಪುಚುಕ್ಕೆ

12:10 PM Mar 20, 2018 | |

ಬೆಂಗಳೂರು: ಮೈಸೂರು ರಸ್ತೆ - ಮಾಗಡಿ ರಸ್ತೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳನ್ನು ಒಳಗೊಂಡಿರುವ ಕ್ಷೇತ್ರ ಗೋವಿಂದರಾಜನಗರ. ಇಲ್ಲಿ ಕೊಳೆಗೇರಿಗಳು, ಶ್ರಮಿಕ ವರ್ಗ ವಾಸಿಸುವ ಕಾಲೋನಿ, ವಠಾರಗಳೇ ಹೆಚ್ಚು. ಹೈಟೆಕ್‌ ಸೌಲಭ್ಯ ಪಡೆದಿರುವ ನಾಗರಭಾವಿ, ಕೈಗಾರಿಕಾ ಪ್ರದೇಶ ಒಳಗೊಂಡಿರುವ ಡಾ.ರಾಜ್‌ಕುಮಾರ್‌ ವಾರ್ಡ್‌ ಸಹ ಇದೇ ಕ್ಷೇತ್ರದಲ್ಲಿವೆ.

Advertisement

ಪುನರ್‌ವಿಂಗಡಣೆಗೆ ಮುಂಚೆ ಈ ಕ್ಷೇತ್ರ ಬಿನ್ನಿಪೇಟೆ ಭಾಗವಾಗಿತ್ತು. ಬಿನ್ನಿಪೇಟೆ ಕ್ಷೇತ್ರವಿದ್ದಾಗ ವಿ.ಸೋಮಣ್ಣ ಅವರು ಜನತಾದಳ, ಕಾಂಗ್ರೆಸ್‌ ಹಾಗೂ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದರು. ನಂತರ ಆಪರೇಷನ್‌ ಕಮಲ ಕಾರ್ಯಾಚರಣೆ ವೇಳೆ ಸೋಮಣ್ಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧೆ ಮಾಡಿದರು. ಆಗ, ಕಾಂಗ್ರೆಸ್‌ನ ಪ್ರಿಯಕೃಷ್ಣ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದು ಸೋಮಣ್ಣ ಅವರನ್ನು ಸೋಲಿಸಿದರು.

2013ರಲ್ಲಿ ಎದುರಾದ ಚುನಾವಣೆಯಲ್ಲಿ ಪ್ರಿಯಕೃಷ್ಣ ಎರಡನೇ ಬಾರಿಯೂ ಗೆಲುವು ಸಾಧಿಸಿದ್ದು, ಈ ಬಾರಿ ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಕುರುಬ, ಲಿಂಗಾಯತ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೊಳೆಗೇರಿ ಮತದಾರರೇ ನಿರ್ಣಾಯಕರಾಗಿದ್ದಾರೆ. ಕೊಳೆಗೇರಿ ಹಾಗೂ ಕಾಲೋನಿಗಳಲ್ಲಿ ಸಿಮೆಂಟ್‌ ರಸ್ತೆಗಳಾಗಿರುವುದು ಕಣ್ಣಿಗೆ ಕಾಣುವ ಅಂಶ. ಕೆಲವೆಡೆ ಕುಡಿಯುವ ನೀರು ಮತ್ತು ಒಳಚರಂಡಿ ಸಮರ್ಪಕವಾಗಿಲ್ಲ ಎಂಬ ಅಳಲೂ ಇದೆ.

ಸಾರ್ವಜನಿಕರ ಭದ್ರತೆಗಾಗಿ ಚಂದ್ರಾ ಲೇಔಟ್‌, ವಿಜಯನಗರ, ಬ್ಯಾಟರಾಯನಪುರ, ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆ ವ್ಯಾಪ್ತಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ನಡೆಯುತ್ತಿದೆ. ಮೈಸೂರು ರಸ್ತೆವರೆಗಿನ ಮೆಟ್ರೋ ಸಂಪರ್ಕ ನಾಯಂಡಹಳ್ಳಿ ಮಾರ್ಗವಾಗಿ ಕೆಂಗೇರಿವರೆಗೂ ವಿಸ್ತರಿಸುವ ಕಾರ್ಯ ನಡೆಯುತ್ತಿರುವುದರಿಂದ ಆ ಮಾರ್ಗದಲ್ಲಿ ಸಂಚಾರ ದಟ್ಟಣೆ ಮತ್ತು ಧೂಳು ಸಮಸ್ಯೆ ಸಾಮಾನ್ಯ. 

ವಿಜಯನಗರದಲ್ಲಿ ತಂದೆ ಕೃಷ್ಣಪ್ಪ, ಪಕ್ಕದ ಗೋವಿಂದರಾಜನಗರದಲ್ಲಿ ಪುತ್ರ ಪ್ರಿಯಕೃಷ್ಣ ಶಾಸಕರಾಗಿರುವುದರಿಂದ ಅಭಿವೃದ್ಧಿ ವಿಚಾರದಲ್ಲೂ ಜಂಟಿ ಕಾರ್ಯಾಚರಣೆ. ಎಂ.ಕೃಷ್ಣಪ್ಪ ಸಚಿವರಾದ ನಂತರ ಗೋವಿಂದ ರಾಜನಗರಕ್ಕೂ ಹೆಚ್ಚಿನ ಅನುದಾನ ಹರಿದು ಬಂದಿದೆ. ಬೇಡಿಕೆಯಿರುವ ಕ್ಷೇತ್ರವೂ ಹೌದು.

Advertisement

ಕ್ಷೇತ್ರವು ಕಾವೇರಿಪುರ, ಗೋವಿಂದರಾಜನಗರ, ಅಗ್ರಹಾರ ದಾಸರಹಳ್ಳಿ, ಡಾ.ರಾಜ್‌ಕುಮಾರ್‌ ವಾರ್ಡ್‌, ಮಾರೇನಹಳ್ಳಿ, ಮಾರುತಿ ಮಂದಿರ, ಮೂಡಲಪಾಳ್ಯ, ನಾಗರಭಾವಿ, ನಾಯಂಡಹಳ್ಳಿ ವಾರ್ಡ್‌ಗಳನ್ನು ಹೊಂದಿದ್ದು, ಇಬ್ಬರು ಕಾಂಗ್ರೆಸ್‌, ಒಬ್ಬರು ಜೆಡಿಎಸ್‌ ಹಾಗೂ ಮೂವರು ಬಿಜೆಪಿ ಕಾರ್ಪೊರೇಟರ್‌ಗಳಿದ್ದಾರೆ.

ಕ್ಷೇತ್ರದಲ್ಲೇನು ಬೆಸ್ಟ್‌?: ಮಾಗಡಿ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಈ ವ್ಯಾಪ್ತಿಯಲ್ಲಿ “ಸಿದ್ದಯ್ಯ ಪುರಾಣಿಕ್‌’ ಜಂಕ್ಷನ್‌ ಅಂಡರ್‌ಪಾಸ್‌ ನಿರ್ಮಿಸಿದ್ದು, ಇದರಿಂದ ಮಾಗಡಿ ರಸ್ತೆ ಕೆಎಚ್‌ಬಿ ಹಾಗೂ ಟೋಲ್‌ಗೇಟ್‌ ನಡುವೆ ಸಿಗ್ನಲ್‌ ಮುಕ್ತ ಸಂಚಾರ ಸಾಧ್ಯವಾಗಿದೆ. ಇದು ವಾಹನ ಸವಾರರಿಗೆ ಸಮಾಧಾನದ ಸಂಗತಿ.

ಕ್ಷೇತ್ರದಲ್ಲೇನು ಸಮಸ್ಯೆ?: ಪಂತರಪಾಳ್ಯ, ಆರುಂಧತಿನಗರ, ಅಗ್ರಹಾರ ದಾಸರಹಳ್ಳಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಿರ್ಮಿಸಿರುವ ವಸತಿ ಸಂಕೀರ್ಣಗಳ ಮನೆಗಳಿಗೆ ಖಾತೆ ಕೊಟ್ಟಿಲ್ಲ. ಇನ್ನೂ ಕೆಲವು ಮನೆಗಳು ಖಾಲಿ ಇದ್ದರೂ ಹಂಚಿಕೆಯಾಗಿಲ್ಲ. ಗುಣಮಟ್ಟದ ಕೊರತೆಯಿಂದ ಇಲ್ಲಿ ನಿರ್ಮಿಸಿರುವ ವಸತಿ ಸಂಕೀರ್ಣಗಳಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದೇ ಅಲ್ಲಿನ ನಿವಾಸಿಗಳು “ಬ್ಲಾಕ್‌’ ಸಮಸ್ಯೆ ಎದುರಿಸುತ್ತಿದ್ದಾರೆ.

ಶಾಸಕರು ಏನಂತಾರೆ?
ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ವಿಚಾರದಲ್ಲಿ ನಾವು ಮೊದಲಿದ್ದೇವೆ. ಕಾವೇರಿ ನೀರು ಸಂಪರ್ಕ ಶೇ.99 ರಷ್ಟು ಕಲ್ಪಿಸಲಾಗಿದೆ. ಮಾಗಡಿ ರಸ್ತೆ ಟೋಲ್‌ಗೇಟ್‌ನಿಂದ ದೀಪಾಂಜಲಿನಗರದವರೆಗೆ ಮೆಟ್ರೋ ಮಾರ್ಗದಲ್ಲಿ ವಿಜಯನಗರ ಸಾಮ್ರಾಜ್ಯದ‌ ಗತವೈಭವ ಬಿಂಬಿಸುವ ಸೌಂದಯೀìಕರಣ ಕಾಮಗಾರಿ ನಡೆಯುತ್ತಿದ್ದು, ಶೀಘ್ರವಾಗಿ ಪೂರ್ಣಗೊಳಿಸಲಾಗುವುದು.
-ಪ್ರಿಯಕೃಷ್ಣ, ಶಾಸಕ

ಆಕಾಂಕ್ಷಿಗಳು
* ಕಾಂಗ್ರೆಸ್‌- ಪ್ರಿಯಕೃಷ್ಣ
* ಜೆಡಿಎಸ್‌- ರಂಗೇಗೌಡ
* ಬಿಜೆಪಿ- ವಿ.ಸೋಮಣ್ಣ/ ಉಮೇಶ್‌ ಶೆಟ್ಟಿ

ಕ್ಷೇತ್ರ ಮಹಿಮೆ
ರಾಜಕೀಯಕ್ಕೆ ಹೊಸಬರಾಗಿದ್ದ ಪ್ರಿಯಕೃಷ್ಣ ಮೊದಲ ಪ್ರಯತ್ನದಲ್ಲೇ ರಾಜ್ಯ ರಾಜಕಾರಣದಲ್ಲಿ ಪಳಗಿದ್ದ ಸೋಮಣ್ಣ ಅವರನ್ನು ಸೋಲಿಸಿದ್ದು. ಪ್ರತಿ ಚುನಾವಣೆ ಬಂದಾಗಲೂ ದೊಡ್ಡ ದೊಡ್ಡ ನಾಯಕರ ಹೆಸರು ಈ ಕ್ಷೇತ್ರದಿಂದ ಸ್ಪರ್ಧೆಗೆ ಕೇಳಿಬರುತ್ತದೆ.

ಗೋವಿಂದರಾಜನಗರ
* ಪ್ರಿಯಕೃಷ್ಣ- (ಕಾಂಗ್ರೆಸ್‌) 72654
* ಎಚ್‌.ರವೀಂದ್ರ (ಬಿಜೆಪಿ) 30194
* ಟಿ.ಎಂ.ರಂಗೇಗೌಡ (ಜೆಡಿಎಸ್‌) 20662

ಕ್ಷೇತ್ರದಲ್ಲಿ ಕಣ್ಣಿಗೆ ಕಾಣುವಂತ ಅಭಿವೃದ್ಧಿಯಾಗಿದೆ. ಸಮಸ್ಯೆಗಳಿಗೆ ಶಾಸಕರು ತಕ್ಷಣ ಸ್ಪಂದಿಸುತ್ತಾರೆ. ಆದರೆ, ಹಿರಿಯ ನಾಗರಿಕರಿಗೆ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಅಧಿಕಾರಿಗಳು ಸ್ವಲ್ಪ ಅಸಡ್ಡೆ ತೋರುತ್ತಾರೆ.
-ಲಕ್ಷ್ಮಣಪ್ಪ

ನಾಯಂಡಹಳ್ಳಿ ಭಾಗದಲ್ಲಿರುವ ನಮ್ಮ ಬಡಾವಣೆಯಲ್ಲಿ ಕಾವೇರಿ ನೀರು ಪೂರೈಕೆಯ ಕೊಳವೆ ಅಳವಡಿಸಿದ್ದರೂ ಇನ್ನೂ ಸಂಪರ್ಕ ಕಲ್ಪಿಸಿಲ್ಲ. ಬೇಸಿಗೆಯಲ್ಲಿ ನೀರಿನದೇ ಸಮಸ್ಯೆ. ಇಲ್ಲಿನ ಜನಕ್ಕೆ ಬೋರ್‌ವೆಲ್‌ ನೀರೇ ಗತಿ.
-ಬೀರಮ್ಮ

ಕಾಲೋನಿಗಳು, ಕೊಳೆಗೇರಿಗಳಲ್ಲಿ ಕೆಲಸ ಆಗಿದೆ. ಮೆಟ್ರೋ ಕಾಮಗಾರಿ ಆರಂಭವಾದ ನಂತರ ನಾಯಂಡಹಳ್ಳಿ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚಾಗಿದೆ. ಧೂಳಿನ ಸಮಸ್ಯೆ ಇದೆ. ಇದಕ್ಕೆ ಪರಿಹಾರ ಸಿಕ್ಕಿಲ್ಲ.
-ಫ‌ಯಾಜ್‌

ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸಿಕೊಟ್ಟಿರುವ ಕ್ವಾಟ್ರಸ್‌ಗಳಲ್ಲಿ ಒಳಚರಂಡಿ ಕಟ್ಟಿಕೊಳ್ಳುವುದು ನಿತ್ಯದ ಸಮಸ್ಯೆ. ಈ ಬಗ್ಗೆ ಯಾರೂ ಸ್ಪಂದಿಸುವುದಿಲ್ಲ. ಚುನಾವಣೆ ಹತ್ತಿರ ಬಂದಿದೆ ಎಂದು ಬೋರ್‌ವೆಲ್‌ ಕೊರೆಸಿ ನೀರು ಕೊಡುತ್ತಿದ್ದಾರೆ.
-ರವಿಕುಮಾರ್‌

* ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next