Advertisement
ಕಳೆದೆರಡು ದಿನಗಳಿಂದ ಬಟ್ಟಪ್ಪಾಡಿ ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿ ಸೋಮೇಶ್ವರ ಬಳಿಯ ಹೊಳೆ ಸಮೀಪದ ಮನೆಗಳು ಕೃತಕ ನೆರೆಯಿಂದ ಜಲಾವೃತಗೊಂಡಿತ್ತು. ಬುಧವಾರ ಸಮಸ್ಯೆ ತೀವ್ರವಾದಾಗ ಸ್ಥಳೀಯರು ಆಕ್ರೋಶಗೊಂಡಿದ್ದು ಬಳಿಕ ತಹಶೀಲ್ದಾರ್ ಗುರುಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಹೂಳು ತೆಗೆಯುವಂತೆ ಸೋಮೇಶ್ವರ ಗ್ರಾ.ಪಂ.ಗೆ ಆದೇಶ ನೀಡಿದ್ದರು.
ಬುಧವಾರ ಬೆಳಗ್ಗೆ ಬಟ್ಟಪ್ಪಾಡಿಯಲ್ಲಿ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಒಂದು ಹಿಟಾಚಿ ಸಂಜೆಯವರೆಗೆ ಕಾರ್ಯ ನಿರ್ವಹಿಸಿ ಹೂಳನ್ನು ಸಂಪೂರ್ಣವಾಗಿ ತೆಗೆದು ಹೊಳೆಯ ನೀರು ಸರಾಗವಾಗಿ ಸಮುದ್ರ ಸೇರಲು ಅನುವು ಮಾಡಿದೆ. ಕೃತಕ ನೆರೆ ತೆರವಾಗಿದ್ದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಸಂದರ್ಭ ಸ್ಥಳದಲ್ಲಿದ್ದ ಸೋಮೇಶ್ವರ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಉಚ್ಚಿಲ ಮಾತನಾಡಿ, ಬಟ್ಟಪ್ಪಾಡಿ ಅಳಿವೆ ಬಾಗಿಲಿನಲ್ಲಿ ಪ್ರಾರಂಭದ ಹಂತದಲ್ಲಿ ಹೂಳು ತೆಗೆದು ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲಾಗಿದೆ. ನೀರಿನ ಹರಿವು ಕಡಿಮೆಯಾದ ಬಳಿಕ ಈ ಸಮಸ್ಯೆ ಉದ್ಭವಿಸುವುದಿಲ್ಲ. ಹೊಳೆ ಬದಿಯಲ್ಲಿ ನೀರು ಇಂಗಿದಾಗ ಸಮಸ್ಯೆ ತಾತ್ಕಾಲಿಕವಾಗಿ ಪರಿಹಾರವಾಗುತ್ತದೆ ಎಂದರು.