ಗಾಲೆ: ನಿರೀಕ್ಷೆಯಂತೆ ಗಾಲೆ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ಲಾಗ ಹಾಕಿದೆ. ಶ್ರೀಲಂಕಾ 187 ರನ್ನುಗಳ ಭರ್ಜರಿ ಗೆಲುವು ಸಾಧಿಸಿ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
348 ರನ್ ಗೆಲುವಿನ ಗುರಿ ಪಡೆದು 4ನೇ ದಿನದ ಅಂತ್ಯಕ್ಕೆ 52 ರನ್ನಿಗೆ 6 ವಿಕೆಟ್ ಉದುರಿಸಿಕೊಂಡಾಗಲೇ ಕೆರಿಬಿಯನ್ನರ ಸೋಲು ಖಾತ್ರಿಯಾಗಿತ್ತು. ಅಂತಿಮ ದಿನವಾದ ಗುರುವಾರ 160ಕ್ಕೆ ಆಲೌಟ್ ಆಯಿತು.
ವೆಸ್ಟ್ ಇಂಡೀಸ್‌ನ 6 ವಿಕೆಟ್ ಬರೀ 18 ರನ್ನಿಗೇ ಉದುರಿ ಹೋಗಿತ್ತು. ಆದರೆ ವನ್‌ಡೌನ್ ಬ್ಯಾಟ್ಸ್‌ಮನ್ ಎನ್‌ಕುಮ್ರಾ ಬಾನರ್ (ಅಜೇಯ 68) ಮತ್ತು ವಿಕೆಟ್ ಕೀಪರ್ ಜೋಶುವ ಡಿ ಸಿಲ್ವ (54) 7ನೇ ವಿಕೆಟಿಗೆ ಭರ್ತಿ 100 ರನ್ ಗಳಿಸಿ ಸೋಲಿನ ಅಂತರವನ್ನು ಕಡಿಮೆಗೊಳಿಸಿದರು.
ಶ್ರೀಲಂಕಾ ಪರ ರಮೇಶ್ ಮೆಂಡಿಸ್ 5 ಮತ್ತು ಲಸಿತ್ ಎಂಬುಲೆªàನಿಯ 4 ವಿಕೆಟ್ ಕೆಡವಿದರು. ಎರಡೂ ಇನ್ನಿಂಗ್ಸ್‌ಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ದಿಮುತ್ ಕರುಣಾರತ್ನೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸರಣಿಯ ದ್ವಿತೀಯ ಟೆಸ್ಟ್ ನ. 29ರಿಂದ ಇದೇ ಅಂಗಳದಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-386 ಮತ್ತು 4 ವಿಕೆಟಿಗೆ 191 ಡಿಕ್ಲೇರ್. ವೆಸ್ಟ್ ಇಂಡೀಸ್-230 ಮತ್ತು 160.
ಪಂದ್ಯಶ್ರೇಷ್ಠ: ದಿಮುತ್ ಕರುಣಾರತ್ನೆ.