Advertisement

ಸರಳ ಮನೆಮದ್ದು: ಸೈನಸ್ ಸಮಸ್ಯೆ ಕಾಣಿಸಿಕೊಂಡಾಗ ಈ ವಿಧಾನ ಅನುಸರಿಸಿ…

04:50 PM Oct 17, 2022 | ಕಾವ್ಯಶ್ರೀ |

ತಂಪಾದ ವಾತಾವರಣ ಎಂದರೆ ಮಳೆಗಾಲ ಅಥವಾ ಚಳಿಗಾಲ, ಈ ಸಮಯದಲ್ಲಿ ಹೆಚ್ಚಾಗಿ ಸೈನಸ್‌ ತಲೆನೋವು ಸಮಸ್ಯೆ ಕಾಡುತ್ತದೆ. ಏನೇ ಕೆಲಸ ಮಾಡಲು ಕೂಡ ಸಾಧ್ಯವಾಗುವುದಿಲ್ಲ, ಎಸಿಯಿಂದಲೂ ಕೂಡಾ ಸೈನಸ್ ತೊಂದರೆ ಆಗುತ್ತದೆ. ಈ ತರಹದ ತಲೆನೋವು 2-3 ದಿನಗಳವರೆಗೆ ಇರುತ್ತದೆ. ಮನೆಯಲ್ಲಿ, ಕಚೇರಿಯಲ್ಲಿ ಎಲ್ಲೆಡೆ ಈಗಿನ ಕಾಲದಲ್ಲಿ ಎಸಿ ಬಳಸುವುದು ಹೆಚ್ಚಾಗಿದೆ. ಇದು ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತದೆ. ಇದರಿಂದಾಗಿ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಎದ್ದು ಆಚೆ ಈಚೆ ಓಡಾಡಲು, ಕೆಲಸ ಮಾಡಲು ಆಗದಂತಹ ಪರಿಸ್ಥಿತಿ ಎದುರಾಗುತ್ತದೆ. ಸೈನಸ್ ನಲ್ಲಿ ಪ್ರಮುಖವಾಗಿ ಹಣೆಯ ಭಾಗ, ಮೂಗಿನ ಹತ್ತಿರ, ಹಾಗೂ ಕಣ್ಣಿನ ಸುತ್ತ ವಿಪರೀತ ನೋವು ಕಂಡು ಬರುತ್ತದೆ.

Advertisement

ಸೈನಸ್‌ ತಲೆನೋವಿನ ಸಮಸ್ಯೆ ಇದ್ದರೆ ಇವುಗಳನ್ನು ಪಾಲಿಸಿ:

ನಮ್ಮ ದೇಹದಲ್ಲಿ ಯಾವುದೇ ಕಾರಣಕ್ಕೂ ನೀರಿನಾಂಶ ಕಡಿಮೆಯಾಗದಂತೆ ನೋಡಿಕೊಳ್ಳಿ. ಸರಿಯಾಗಿ ನೀರು ಕುಡಿಯುವ ಅಭ್ಯಾಸ ಇರುವುದು ಮುಖ್ಯ. ಬಿಸಿಬಿಸಿ ಸೂಪ್ ಅಥವಾ ಶುಂಠಿ ಚಹಾ ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. ಕಾಳು ಮೆಣಸು-ಜೀರಿಗೆ ಕಷಾಯ ಕುಡಿಯಿರಿ. ಇವೆಲ್ಲಾ ಆರೋಗ್ಯಕಾರಿ ಅಭ್ಯಾಸಗಳು ಸೈನಸ್‌ ತಲೆನೋವು ಕಡಿಮೆ ಮಾಡುವಲ್ಲಿ ಸಹಕಾರಿಯಾಗಲಿದೆ.

ತೆಂಗಿನ ಎಣ್ಣೆ- ಬೆಳ್ಳುಳ್ಳಿ

ಸೈನಸ್ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮುನ್ನ ತೆಂಗಿನ ಅಥವಾ ಆಲೀವ್ ಎಣ್ಣೆಯನ್ನು ಸ್ವಲ್ಪ ಅಂಗೈಗೆ ಹಾಕಿಕೊಂಡು ಬೆರಳಿನ ಸಹಾಯದಿಂದ ಹಣೆಯ ಭಾಗಕ್ಕೆ ಕುತ್ತಿಗೆಯ ಭಾಗ ಹಾಗೂ ಎದೆಯ ಭಾಗ ಮತ್ತು ಮೂಗಿನ ಮೇಲ್ಭಾಗದಲ್ಲಿ ಹಚ್ಚಿ ನಯವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ.ಹೀಗೆ ಮಾಡಿದರೆ ಮೂಗು ಕಟ್ಟುವಿಕೆ ಸಮಸ್ಯೆ ದೂರವಾಗುತ್ತದೆ, ಸೈನಸ್ ಸಮಸ್ಯೆಯೂ ನಿಧಾನವಾಗಿ ಕ್ರಮೇಣವಾಗಿ ನಿಯಂತ್ರಣಕ್ಕೆ ಬರುತ್ತದೆ.

Advertisement

ಎಣ್ಣೆ ತಯಾರಿಸುವ ವಿಧಾನ: ಮೊದಲು ಮೂರು-ನಾಲ್ಕು ಚಮಚ ತೆಂಗಿನ ಎಣ್ಣೆ ಅಥವಾ ಆಲೀವ್ ಎಣ್ಣೆಯನ್ನು ಒಂದು ಬಾಣಲೆಗೆ ಹಾಕಿ ಸ್ವಲ್ಪ ಹೊತ್ತು ಕುದಿಯಲು ಬಿಡಿ, ನಂತರ ಇದಕ್ಕೆ ಮೂರು-ನಾಲ್ಕು ಜಜ್ಜಿದ ಬೆಳ್ಳುಳ್ಳಿ ಎಸಳನ್ನು ಹಾಕಿ, ಸಾಧಾರಣ ಉರಿಯಲ್ಲಿ ಸ್ವಲ್ಪ ಬಿಸಿ ಮಾಡಿಕೊಳ್ಳಿ. ಸುಮಾರು ಎರಡು ನಿಮಿಷಗಳವರೆಗೆ ಬಿಸಿ ಮಾಡಿದ ನಂತರ ಗ್ಯಾಸ್  ಆರಿಸಿ, ನಂತರ ಎಣ್ಣೆ ತಣ್ಣಗಾಗಲು ಬಿಡಿ. ಈ ಎಣ್ಣೆ ತಣ್ಣಗಾದ ಬಳಿಕ ಇದನ್ನು ಸೋಸಿ ಒಂದು ಬಾಟಲ್ ಅಥವಾ ಗ್ಲಾಸ್ ಜಾರ್‌ನಲ್ಲಿ ಹಾಕಿ ಬಳಸಬಹುದು.

ನೀರು-ಬೆಳ್ಳುಳ್ಳಿ

ಒಂದು ಪಾತ್ರೆಯಲ್ಲಿ ಒಂದು ಕಪ್ ನೀರನ್ನು ಬಿಸಿ ಮಾಡಲು ಇಡಿ. ಒಮ್ಮೆ ನೀರು ಕುದಿ ಬಂದ ಬಳಿಕ ಇದಕ್ಕೆ ಎರಡು- ಮೂರು ಎಸಳುಗಳಷ್ಟು ಬೆಳ್ಳುಳ್ಳಿ ಜಜ್ಜಿ ಹಾಕಿ, ಕುದಿಯಲು ಬಿಡಿ. ಒಂದೆರಡು ನಿಮಿಷಗಳವರೆಗೆ ಕುದಿ ಬಂದ ಬಳಿಕ ಇದಕ್ಕೆ ಅರ್ಧ ಟೀ ಚಮಚ ಅರಿಶಿಣ ಪುಡಿ ಹಾಕಿ ಮಿಶ್ರಣ ಮಾಡಿ, ಇನ್ನೂ ಎರಡು ನಿಮಿಷ ಚೆನ್ನಾಗಿ ಕುದಿಸಿಕೊಂಡು ಬಳಿಕ ಗ್ಯಾಸ್ ಆಫ್ ಮಾಡಿ, ಸ್ವಲ್ಪ ಹೊತ್ತು ತಣಿಯಲು ಬಿಡಿ, ಸ್ವಲ್ಪ ಉಗುರು ಬೆಚ್ಚಗೆ ಆಗುವವರೆಗೆ ತಣಿದ ಬಳಿಕ ಕುಡಿಯಬೇಕು. ಪ್ರತಿ ನಿತ್ಯವೂ ನಿಯಮಿತವಾಗಿ ಈ ಪಾನೀಯವನ್ನು ಕುಡಿದರೆ ಸೈನಸ್ ಗೆ ಕಾರಣವಾಗುವ ಸೊಂಕು ನಿವಾರಣೆ ಆಗುವುದರ ಜೊತೆಗೆ ಆರೋಗ್ಯ ಕೂಡ ವೃದ್ಧಿಯಾಗುತ್ತದೆ.

ನೀರು-ತುಳಸಿ ಎಲೆ

ಪಾತ್ರೆಯಲ್ಲಿ ಒಂದೆರಡು ಲೋಟ ನೀರು ಹಾಕಿ, ಕುದಿಯಲು ಬಿಡಿ. ಇದಕ್ಕೆ ಸ್ವಲ್ಪ ತುಳಸಿ ಎಲೆಗಳನ್ನು ಹಾಕಿ ಎರಡು ಮೂರು ನಿಮಿಷಗಳವರೆಗೆ ಕುದಿದು ಬಳಿಕ ಗ್ಯಾಸ್ ಆಫ್ ಮಾಡಿ. ಬಿಸಿಬಿಸಿ ಇರುವಾಗಲೇ ಈ ನೀರಿನ ಹಬೆಯನ್ನು ತೆಗೆದುಕೊಂಡರೆ ತುಂಬಾ ಒಳ್ಳೆಯದು. ಪ್ರತಿದಿನ ಮೂರು ನಾಲ್ಕು ಸಲವಾದರೂ ಈ ಅಭ್ಯಾಸವನ್ನು ಮುಂದುವರೆಸಿಕೊಳ್ಳಿ.

ಆಪಲ್ ಸೈಡರ್ ವಿನೆಗರ್

ಪ್ರತಿದಿನ ಒಂದು ಕಪ್ ಬಿಸಿ ನೀರಿಗೆ ಅಥವಾ ಚಹಾಕ್ಕೆ 2-3 ಟೀ ಚಮಚ ಆಗುವಷ್ಟು ಆಪಲ್ ಸೈಡರ್ ವಿನೆಗರ್ ಬೆರೆಸಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಹೀಗೆ ದಿನಕ್ಕೆ 1-2 ಬಾರಿ ಅಭ್ಯಾಸ ಅನುಸರಿಸಿಕೊಂಡರೆ ಸೈನಸ್ ಒತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು.ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಒಂದು ಟೀ ಚಮಚ ಜೇನುತುಪ್ಪಕ್ಕೆ ಅಷ್ಟೇ ಪ್ರಮಾಣದ ತಾಜಾ ಶುಂಠಿ ರಸವನ್ನು ಬೆರೆಸಿ ಸಮಯದಲ್ಲಿ ಸೇವಿಸಿದರೆ ಸೈನಸ್ ಸಮಸ್ಯೆಗೆ ತ್ವರಿತವಾದ ಉಪಶಮನ ದೊರೆಯುತ್ತದೆ.

  • ಕಾವ್ಯಶ್ರೀ 
Advertisement

Udayavani is now on Telegram. Click here to join our channel and stay updated with the latest news.

Next