Advertisement

ಒಂಟಿಗಾಲಲ್ಲೇ ಬದುಕು; ನಾಗರಾಜನಿಗೆ ಆಸರೆಯಾದ ಉದ್ಯೋಗ ಖಾತ್ರಿ

05:44 PM Jun 08, 2024 | Team Udayavani |

ಉದಯವಾಣಿ ಸಮಾಚಾರ
ಗಂಗಾವತಿ: ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಜನರು ಗುಳೆ ಹೋಗುವುದನ್ನು ತಡೆಯುವ ಜತೆಗೆ ಅನೇಕರಿಗೆ ಬದುಕು ನೀಡಿದೆ. ತಾಲೂಕಿನ ಢಣಾಪೂರ ಗ್ರಾಮದ ವಿಶೇಷಚೇತನ ನಾಗರಾಜನಿಗೂ ಬದುಕು ಕಟ್ಟಿಕೊಳ್ಳಲು ನೆರವಾಗಿದೆ.

Advertisement

ನಾಗರಾಜ ಚಿಕ್ಕವಯಸ್ಸಿನಲ್ಲಿ ಪಕ್ಕದೂರಿಗೆ ಮೊಸರು ಮಾರಾಲು ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿ ಎಡಗಾಲು ಕಳೆದುಕೊಂಡರು. ದೈಹಿಕವಾಗಿ ಚೆನ್ನಾಗಿದ್ದರೂ ಕೆಲವರು ಬದುಕಲ್ಲಿ ಹುಮಸ್ಸು ಕಳೆದುಕೊಳ್ಳುವುದು ಸಾಮಾನ್ಯ. ಆದರೆ ನಾಗರಾಜ ಮಕ್ಕಳೊಂದಿಗೆ ಆಡಿ ಬೆಳೆಯಬೇಕಿದ್ದ ವಯಸ್ಸಿನಲ್ಲಿಯೇ ವಿಕಲಾಂಗನಾದ.

ಅಪಘಾತದಲ್ಲಿ ಎಡಗಾಲು ಕಳೆದುಕೊಂಡರೂ ಜೀವನದಲ್ಲಿ ಕುಗ್ಗದೇ ಒಂಟಿಗಾಲಲ್ಲೇ ಬದುಕು ಕಟ್ಟಿಕೊಂಡಿದ್ದಾನೆ. ಛಲಗಾರನಾಗಿದ್ದಾನೆ. ಉದ್ಯೋಗ ಖಾತ್ರಿ ಯೋಜನೆ ಈತನ ಜೀವನ ನಿರ್ವಹಣೆಗೆ ಸಹಕಾರಿಯಾಗಿದೆ. ನಾಗರಾಜ ತನ್ನೆಲ್ಲ ಸಮಸ್ಯೆಗಳನ್ನು ಮೆಟ್ಟಿನಿಂತು ಖುಷಿ ಖುಷಿಯಾಗಿ ಜೀವನ ನಡೆಸುತ್ತಿದ್ದಾನೆ. ಬೇರೆಯವರಿಂದ ಎಳನೀರು ಹಾಕಿಸಿಕೊಂಡು
ಸೈಕಲ್‌ನಲ್ಲಿ ಒಂಟಿಗಾಲಲ್ಲೇ ಪೆಡಲ್‌ ತುಳಿಯುತ್ತಾ ಊರೂರು ಸುತ್ತಿ ವ್ಯಾಪಾರ ಮಾಡುತ್ತಿದ್ದಾರೆ.

ಹೀಗೆ ದುಡಿದ ಹಣ ಕೂಡಿಟ್ಟು ಹಳೆಯ ಆಟೋ ಖರೀದಿಸಿ ಎಳನೀರು ವ್ಯಾಪಾರ ಮಾಡುತ್ತಿದ್ದಾರೆ. ಎಳನೀರು ವ್ಯಾಪಾರ ಜತೆಗೆ ಉದ್ಯೋಗ ಖಾತರಿ ಕೆಲಸಕ್ಕೆ ಬಂದು ಕೂಲಿಕಾರರಿಗೆ ನೀರು ಕೊಡುವುದು, ಪುಟ್ಟಿ ತಂದು ಕೊಡುವ ಕೆಲಸ ಮಾಡುತ್ತಾರೆ. ಕೆರೆ ಹೂಳೆತ್ತುವುದು, ನಾಲಾ ಹೂಳೆತ್ತುವ ಕೆಲಸದಲ್ಲಿ ಸಕ್ರಿಯ ಕೂಲಿಕಾರರಾಗಿ ಪಾಲ್ಗೊಳ್ಳುತ್ತಾರೆ. ಕಳೆದ 5 ವರ್ಷದಿಂದ ನರೇಗಾ ಕೆಲಸ ಮಾಡುತ್ತಿದ್ದಾರೆ. ಜತೆಗೆ ನಾಗರಾಜ ಅಂತರ್ಜಾತಿ ಪ್ರೇಮ ವಿವಾಹವಾಗಿದ್ದು, ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸ ಮಾಡಿದ್ದಾರೆ.

ವಿಶೇಷಚೇತನರಿಗೆ ಬೇರೆ ಎಲ್ಲೂ ಕೆಲಸ ಸಿಗಲ್ಲ. ಹೀಗಾಗಿ ಎಳನೀರು ವ್ಯಾಪಾರ ಮಾಡುತ್ತಿರುವೆ. ಎಳನೀರಿಗೆ ಬೇಡಿಕೆ ಕಡಿಮೆ ಇದ್ದಾಗ ನರೇಗಾ ಕೆಲಸ ಮಾಡ್ತೀನಿ. ಇದರಿಂದ ತುಂಬಾ ಅನುಕೂಲವಾಗಿದೆ. ನರೇಗಾ ಯೋಜನೆಯಿಂದ ಗ್ರಾಮೀಣ ಭಾಗದ ವಿಶೇಷಚೇತನರಿಗೆ ಕೆಲಸ ಸಿಗುತ್ತಿದ್ದು, ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ.
●ನಾಗರಾಜ, ಢಣಾಪುರ ಗ್ರಾಮ.

Advertisement

ನರೇಗಾ ಯೋಜನೆಯಡಿ ವಿಶೇಷಚೇತನರಿಗೆ ದುಡಿಯಲು ಅವಕಾಶ ಇದ್ದು, ಕೆಲಸದಲ್ಲಿ ಶೇ.50 ರಿಯಾಯಿತಿ ಸೌಲಭ್ಯ ಇರುತ್ತದೆ. 18 ವರ್ಷ ಮೇಲ್ಪಟ್ಟವರು ನರೇಗಾ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡು ಉದ್ಯೋಗ ಚೀಟಿ ಪಡೆದು ಯೋಜನೆಯ ಸೌಲಭ್ಯ ಪಡೆಯಬೇಕು.
●ರಾಹುಲ್‌ ರತ್ನಂ ಪಾಂಡೆಯ, ಸಿಇಒ, ಜಿಪಂ, ಕೊಪ್ಪಳ

ಢಣಾಪುರ ಗ್ರಾಮದ ವಿಶೇಷಚೇತನ ನಾಗರಾಜ ಯಾವುದಕ್ಕೂ ಕುಗ್ಗದೇ ಬದುಕು ಕಟ್ಟಿಕೊಂಡಿದ್ದಾರೆ. ಇವರು ವಿಶೇಷ ಚೇತನರಿಗೆ ಮಾದರಿಯಾಗಿದ್ದಾರೆ. ಗ್ರಾಮೀಣ ಭಾಗದ ವಿಶೇಷಚೇತನರು ನರೇಗಾ ಸೌಲಭ್ಯ ಪಡೆಯಬೇಕು.
●ಲಕ್ಷ್ಮೀದೇವಿ, ಇಒ, ತಾಪಂ, ಗಂಗಾವತಿ.

■ ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next