ಗುಂಡ್ಲುಪೇಟೆ (ಚಾಮರಾಜನಗರ): ಬೈಕ್ ಗೆ ಪಿಕ್ ಅಪ್ ವಾಹನ ಗುದ್ದಿದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಸವಾರರ ಕಾಲು ಮುರಿತಕ್ಕೊಳಗಾದ ಘಟನೆ ಪಟ್ಟಣದ ಹೊರ ವಲಯದ ಎಪಿಎಂಸಿ ಬಳಿ ಡಿ.17ರ ಮಂಗಳವಾರ ನಡೆದಿದೆ.
ತಾಲೂಕಿನ ತೊರವಳ್ಳಿ ಗ್ರಾಮದ ಮಹದೇವಯ್ಯ (50) ಹಾಗೂ ಬಸವರಾಜು (28) ಎಂಬ ಇಬ್ಬರು ಸವಾರರ ಕಾಲು ಮುರಿದಿದೆ ಎಂದು ತಿಳಿದು ಬಂದಿದೆ.
ಗುಂಡ್ಲುಪೇಟೆ ಕಡೆಯಿಂದ ಮೈಸೂರಿಗೆ ವೇಗವಾಗಿ ಹೋಗುತ್ತಿದ್ದ ಪಿಕ್ ಅಪ್, ಮತ್ತೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮುಂದೆ ಬರುತ್ತಿದ್ದ ಬೈಕ್ ಗೆ ಗುದ್ದಿದೆ. ಇದರಿಂದ ಬೈಕ್ ಸವಾರರಿಬ್ಬರ ಬಲಗಾಲು ಮುರಿದು ಹೋಗಿದೆ.
ಘಟನಾ ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ದೌಡಾಯಿಸಿ ಗಾಯಾಳುಗಳನ್ನು ಪೊಲೀಸ್ ವಾಹನಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಗುಂಡ್ಲುಪೇಟೆ ಪೊಲೀಸರು ಎರಡು ವಾಹನಗಳನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸ್ಥಳಕ್ಕೆ ಬಾರದ ಆಂಬ್ಯುಲೆನ್ಸ್: ಪಟ್ಟಣದ ಕೂಗಳತೆ ದೂರದಲ್ಲಿ ಅಪಘಾತ ನಡೆದು ಅರ್ಧ ಗಂಟೆಯಾದರೂ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಂಬ್ಯುಲೆನ್ಸ್ ಸ್ಥಳಕ್ಕೆ ಬಾರದ ಹಿನ್ನೆಲೆ ಪೊಲೀಸ್ ವಾಹನದಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಿಗದಿತ ವೇಳೆ ಆಂಬ್ಯುಲೆನ್ಸ್ ಆಗಮಿಸದ ಕಾರಣ ಗಾಯಾಳುಗಳಿಗೆ ಹೆಚ್ಚಿನ ರಕ್ತಸ್ರಾವವಾಗಿದೆ ಎಂದು ವಾಹನ ಸವಾರರರು ಆಕ್ರೋಶ ಹೊರ ಹಾಕಿದರು.