ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದಲ್ಲಿ ಡಿ. 13ರಂದು ಜರುಗುವ ಹನುಮ ಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ವಿಶೇಷ ಮೆರವು ನೀಡುವ ರೀತಿಯಲ್ಲಿ ಇಡೀ ಅಂಜನಾದ್ರಿ ಬೆಟ್ಟಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ.
ಜೊತೆಗೆ ಬೆಟ್ಟದ ಮೇಲಿನ ಶ್ರೀ ಆಂಜನೇಯನ ದೇವಸ್ಥಾನದ ಹೊರಗೆ ಮತ್ತು ಒಳಗೆ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿದ್ದು ಈ ದೃಶ್ಯ ಹನುಮ ಭಕ್ತರಿಗೆ ಹಬ್ಬ ತರುವಂತಿದೆ.
ಅಂಜನಾದ್ರಿ ಬೆಟ್ಟದ ಮುಂದಿನ ಭಾಗಕ್ಕೆ ವಿವಿಧ ಬಣ್ಣಗಳ ದೀಪಗಳನ್ನು ಮಾಡಿ ಅಂಜನಾದ್ರಿ ಹಬ್ಬಕ್ಕೆ ಮೆರಗು ನೀಡುವ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ. ಇದರಿಂದ ಬೆಟ್ಟದಲ್ಲಿ ವಿವಿಧ ಬಣ್ಣದ ಚಿತ್ತಾರ ಮೂಡಿದಂತೆ ದೂರದಿಂದ ಕಾಣುತ್ತಿದ್ದು ನೋಡುಗರು ತಮ್ಮ ಮೊಬೈಲ್ ಗಳಲ್ಲಿ ಈ ಚಿತ್ರಗಳನ್ನು ಸೆರಿ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಂತೋಷಪಡುತ್ತಿದ್ದಾರೆ.
ಜೊತೆಗೆ ದೇವಸ್ಥಾನದ ಒಳಗೆ ಮತ್ತು ಹೊರಗೆ ಗಂಗಾವತಿಯ ಖ್ಯಾತ ಹೂವಿನ ಮಾರಾಟಗಾರ ಚನ್ನಪ್ಪ ಮತ್ತು ಮಕ್ಕಳು ಮಾಡಿದ ವಿವಿಧ ಬಗೆಯ ಹೂವಿನ ಅಲಂಕಾರ ಭಕ್ತರ ಗಮನ ಸೆಳೆಯುತ್ತಿದೆ.
ಕಳೆದ ವರ್ಷದಿಂದ ಶಾಸಕ ಗಾಲಿ ಜನಾರ್ದನರೆಡ್ಡಿ ಅವರ ಆಸಕ್ತಿ ಮೇರೆಗೆ ಬೆಟ್ಟಕ್ಕೆ ವಿದ್ಯುತ್ ದೀಪ ಮತ್ತು ದೇವಸ್ಥಾನಕ್ಕೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗುತ್ತಿದ್ದು ಭಕ್ತರ ಮೆಚ್ಚುಗೆ ಪಾತ್ರವಾಗಿದೆ.
ಕ್ಷಣಗಣನೆ: ಹನುಮ ಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ಈಗಾಗಲೇ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಅಂಜನಾದ್ರಿ ಬೆಟ್ಟದಲ್ಲಿ ಸರ್ವ ಸಿದ್ಧತೆಗಳನ್ನು ಮಾಡಿದ್ದು ಸುಮಾರು ಒಂದು ಲಕ್ಷ ಹನುಮ ಭಕ್ತರು ಹನುಮಮಾಲಾ ವಿಸರ್ಜನೆಗೆ ಆಗಮಿಸುವ ನಿರೀಕ್ಷೆಯಲ್ಲಿ ಊಟ,ವಸತಿ, ವಾಹನಗಳ ಪಾರ್ಕಿಂಗ್ ಸೇರಿದಂತೆ ಅನೇಕ ವ್ಯವಸ್ಥೆಯನ್ನು ಮಾಡಲಾಗಿದೆ.
ಗುರುವಾರ ಶಾಸಕ ಜನಾರ್ದನ ರೆಡ್ಡಿ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಪೂರ್ವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಸ್ಥಳದಲ್ಲಿ ಸಹಾಯ ಕಾಯುತ್ತಾ ಕ್ಯಾಪ್ಟನ್ ರಾಧಾ ಯು. ನಾಗರಾಜ್, ವಿಶ್ವನಾಥ ಮುರುಡಿ ,ಪೌರಾಯುಕ್ತ ಆರ್. ವಿರೂಪಾಕ್ಷ ಮೂರ್ತಿ ಸೇರಿದಂತೆ ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತದ ಅಧಿಕಾರಿಗಳು ಉಪಸ್ಥಿತರಿದ್ದು ಪೂರ್ವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.