ಕೆಲ ವರ್ಷಗಳ ಹಿಂದೆ ರಾಜ್ಯದಲ್ಲಿ ಅಕ್ರಮ ಗಣಿಗಾರಿಗೆ ಸದ್ದು ಸರ್ಕಾರಕ್ಕೇ ಗುದ್ದು ನೀಡಿದ್ದು ನಿಮಗೆ ಗೊತ್ತಿರಬಹುದು. ರಾಜ್ಯ ರಾಜಕೀಯ ಮತ್ತು ಸಾಮಾಜಿಕವಾಗಿ ಸಾಕಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಅಕ್ರಮ ಗಣಿಗಾರಿಗೆ, ಗಣಿಧಣಿಗಳ ಕುರಿತಾದ ಕಥೆಯೊಂದು ಈ “ಸೇನಾಪುರ’ ಹೆಸರಿನಲ್ಲಿ ಸಿನಿಮಾವಾಗಿ ತೆರೆಗೆ ಬರುತ್ತಿದೆ.
ಗಣಿನಾಡು ಬಳ್ಳಾರಿಯಿಂದ ಕರಾವಳಿಯವರೆಗೂ ಕಬಂಧ ಬಾಹುಗಳನ್ನ ಚಾಚಿಕೊಂಡಿದ್ದ ಅಕ್ರಮ ಗಣಿಗಾರಿಕೆ ಮತ್ತದರ ಸುತ್ತ ನಡೆದ ಕೆಲ ನೈಜ ಘಟನೆಗಳ ಸುತ್ತ “ಸೇನಾಪುರ’ ಚಿತ್ರ ನಡೆಯಲಿದ್ದು, ಕುಂದಾಪುರ ಮೂಲದ ನವ ಪ್ರತಿಭೆ ಗುರು ಸಾವನ್. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ “ಸೇನಾಪುರ’ದ ಮೊದಲ ಟೀಸರ್ ಬಿಡುಗಡೆಯಾಗಿದೆ.
ತಮ್ಮ ಚಿತ್ರದ ಬಗ್ಗೆ ಮಾತನಾಡುವ ಗುರು ಸಾವನ್, ” ಪ್ರಕೃತಿ ಎಲ್ಲರಿಗೂ ಎಲ್ಲವನ್ನು ಸಮನಾಗಿ ನೀಡಿರುತ್ತದೆ. ಶ್ರೀಮಂತ, ಬಡವ ಎಂದು ಬೇಧಭಾವ ತೋರಿಸುವುದಿಲ್ಲ. ಆದ್ರೆ ನಾವುಗಳು ಅದನ್ನು ವರ್ಗ ಮಾಡಿಕೊಂಡು ಬದುಕುತ್ತಿದ್ದೇವೆ. ಪ್ರಕೃತಿ, ಸಮಾಜ, ಭೂಮಿ, ನೀರು ಅಂತ ಬಂದಾಗ ನಾವು ಹೆಣ್ಣಿಗೆ ಗೌರವ ಕೊಡುತ್ತೇವೆ. ಅದಕ್ಕಾಗಿ ಆಕೆಯಿಂದಲೇ ಕಥೆಯನ್ನು ಹೇಳಿಸಲು ಪ್ರಯತ್ನ ಮಾಡಲಾಗಿದೆ’ ಎನ್ನುತ್ತಾರೆ.
ಇನ್ನು “ಮಾದೇವ…’ ಹಾಡಿನ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದ್ದ ಗಾಯಕಿ ಅನನ್ಯಾ ಭಟ್, ಮಹಿಳಾ ಪ್ರಧಾನ ಕಥಾಹಂದರದ “ಸೇನಾಪುರ’ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಜೊತೆಗೆ ಚಿತ್ರದ ಎರಡು ಹಾಡುಗಳಿಗೆ ಸಂಗೀತವನ್ನೂ ಸಂಯೋಜಿಸಿದ್ದಾರೆ.
“ಮೊದಲ ಬಾರಿಗೆ ಇಂಥದ್ದೊಂದು ಸಬ್ಜೆಕ್ಟ್‌ನಲ್ಲಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರುವುದಕ್ಕೆ ಖುಷಿಯಾಗುತ್ತಿದೆ. ಸಿನಿಮಾದ ಕಥೆ ಎಲ್ಲರಿಗೂ ಇಷ್ಟವಾಗುತ್ತದೆ. ಟೀಸರ್‌ನಲ್ಲಿ ಹಿನ್ನಲೆ ಧ್ವನಿ ನೀಡಿದ್ದು, ತುಂಬ ಚಾಲೆಂಜಿಂಗ್ ಆಗಿತ್ತು’ ಎನ್ನುವುದು ಅನನ್ಯಾ ಭಟ್ ಮಾತು.
“ವಿಮ್ಲಾಸ್ ಎಂಟರ್‌ಟೈನ್ಮೆಂಟ್’ ಹಾಗೂ “ಅಂಸ ಕ್ರಿಯೇಶನ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಸೇನಾಪುರ’ ಚಿತ್ರಕ್ಕೆ ಅಮಿತ್ ಕುಮಾರ್ ಮತ್ತು ರಾಹುಲ್ ದೇವ್ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಅನನ್ಯಾ ಭಟ್ ಅವರೊಂದಿಗೆ ದಿನೇಶ್ ಮಂಗಳೂರು, ಬಿ.ಎಂ ಗಿರಿರಾಜ್, ಸಿಂಧೂ, ಶೇಖರ್ ರಾಜ್, ರೀನಾ, ಅಮೂಲ್ಯಾ ಅಭಿನಯಿಸಿದ್ದಾರೆ.